ದೇಶದಲ್ಲೇ ಮೊದಲು ಕರ್ನಾಟಕ 'KKRTC' ಸಿಬ್ಬಂದಿಗೆ ಪ್ರೀಮಿಯಂ ರಹಿತ ಭಾರಿ ಮೊತ್ತದ 'ಅಪಘಾತ ವಿಮೆ' ಜಾರಿ
ಬೆಂಗಳೂರು, ಡಿಸೆಂಬರ್ 21: ಭಾರತದಲ್ಲಿ ಇದೇ ಮೊದಲ ಬಾರಿಗೆ ಕರ್ನಾಟಕ ಸಾರಿಗೆ ಇಲಾಖೆ ಮಹತ್ವದ ನಿರ್ಧಾರ ಕೈಗೊಂಡಿದೆ. ಪ್ರೀಮಿಯಂ ರಹಿತ ಭಾರಿ ಮೊತ್ತದ ಅಪಘಾತ ವಿಮೆ ಸೌಲಭ್ಯ ಅನುಷ್ಠಾನ ಮಾಡುತ್ತಿದೆ. ಇದು ಕಲ್ಯಾಣ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KKRTC)ದ ಸಿಬ್ಬಂದಿಗೆ ಅನ್ವಯವಾಗಲಿದೆ.
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಸಿಬ್ಬಂದಿಗಳಿಗೆ ಪ್ರೀಮಿಯಂ ರಹಿತ 1.20 ಕೋಟಿ ರೂಪಾಯಿ ಅಪಘಾತ ಪರಿಹಾರ ವಿಮಾ ಯೋಜನೆ ಜಾರಿಗೆ ಸರ್ಕಾರ ಬ್ಯಾಂಕ್ ಜತೆ ಒಪ್ಪಂದ ಮಾಡಿಕೊಂಡಿದೆ. ಕಲ್ಯಾಣ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ( KKRTC) ಸಾರ್ವಜನಿಕರಿಗೆ ಉತ್ತಮ ಸಾರಿಗೆ ಸೌಲಭ್ಯವನ್ನು ಕಲ್ಪಿಸಲು ಹಗಲಿರಳು ಶ್ರಮಿಸುತ್ತಿರುವ ತನ್ನ ನಿಗಮದ ಸಿಬ್ಬಂದಿಗಳಿಗಾಗಿ ಸಂಸ್ಥೆಯಿಂದ ಹಲವಾರು ಕಾರ್ಮಿಕ ಕಲ್ಯಾಣ ಯೋಜನೆಗಳನ್ನು ಜಾರಿಗೆ ತಂದಿರುತ್ತದೆ.

ಸದ್ಯ ಮಹತ್ವದ ಯೋಜನೆಯಾದ ಪ್ರೀಮಿಯಂ ರಹಿತ 1.20 ಕೋಟಿ ರೂಪಾಯಿ ವಿಮಾ ಯೋಜನೆಗೆ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಉಪಸ್ಥಿತಿಯಲ್ಲಿ ವ್ಯವಸ್ಥಾಪಕ ನಿರ್ದೇಶಕರಾದ ರಾಚಪ್ಪ ಹಾಗೂ ನವನೀತ್ ಕುಮಾರ್, ಕರ್ನಾಟಕ ವಲಯ ಮುಖ್ಯಸ್ಥರು, 'ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ' ಅವರ ಜೊತೆಗೆ ಒಡಂಬಡಿಕೆ ವಿನಿಮಯ ಮಾಡಿಕೊಂಡರು.
ಅವಲಂಬಿತರಿಗೆ ಸಿಗಲಿದೆ ಬೃಹತ್ ಮೊತ್ತ
ಈ ಸಂದರ್ಭದಲ್ಲಿ ಮಾತನಾಡಿದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು, ಸಾರಿಗೆ ನಿಗಮದ ಸಿಬ್ಬಂದಿಗಳಲ್ಲಿ ಇತ್ತೀಚಿನ ದಿನಗಳಲ್ಲಿ ಅಪಘಾತದಿಂದಾಗಿ ಆಗುತ್ತಿರುವ ಸಾವು-ನೋವಿನ ಪ್ರಮಾಣ ಗಮನಕ್ಕೆ ಬಂದಿದೆ. ಸಾರಿಗೆ ನಿಗಮವು ನೌಕರರು ವೈಯಕ್ತಿಕ / ಕರ್ತವ್ಯ ನಿರತ ಸಮಯದಲ್ಲಿ ಅಪಘಾತದಿಂದಾಗಿ ಮೃತಪಟ್ಟಲ್ಲಿ ಅವರ ಅವಲಂಬಿತರಿಗೆ, ಅಂಗನ್ಯೂನ್ಯತೆಗೆ ಒಳಗಾದಲ್ಲಿ ಸಿಬ್ಬಂದಿಗಳಿಗೆ ಗಣನೀಯ ಮೊತ್ತದಷ್ಟು ಹಣ ದೊರೆಯುವಂತೆ ಮಾಡಲಿದೆ ಎಂದರು.

ಈ ಸಂಬಂಧ ಯೂನಿಯನ್ ಬ್ಯಾಕ್ ಆಫ್ ಇಂಡಿಯಾ ಜೊತೆಗೆ Union Super Salary Account (USSA) ಯೋಜನೆಯ ಸೌಲಭ್ಯ ನೀಡಲು ಒಪ್ಪಂದ ಮಾಡಿಕೊಳ್ಳಲಾಗಿದೆ. ಈ ಸೌಲಭ್ಯದಡಿ ಕೆಕೆಆರ್‌ಟಿಸಿ ಸಿಬ್ಬಂದಿ ಪ್ರೀಮಿಯಂ ಕಟ್ಟದೆಯೇ ಯೋಜನೆ ಲಾಭ ಪಡೆಯಬಹುದು. ಇಂತಹ ಯೋಜನೆಗೆ ಒಪ್ಪಿರುವ ಬ್ಯಾಂಕ್ ಮುಖ್ಯಸ್ಥರಿಗೆ ಸಚಿವರು ಧನ್ಯವಾದ ತಿಳಿಸಿದರು.
ಡೆಬಿಟ್ ಕಾರ್ಡ ಮೇಲೆ ರೂ.15 ಲಕ್ಷ ಅಪಘಾತ ವಿಮೆ
ಸದರಿ ಯೋಜನೆಯಡಿ ಯೂನಿಯನ್ ಬ್ಯಾಂಕಿನಲ್ಲಿ ವೇತನ ಪಡೆಯುತ್ತಿರುವ ನೌಕರರು ಅಪಫಾತದಲ್ಲಿ ನಿಧನರಾದಲ್ಲಿ ಅಂತಹ ನೌಕರರ ಅವಲಂಬಿತರಿಗೆ 1.20 ಕೋಟಿ ರೂಪಾಯಿಯ ಅಪಘಾತ ವಿಮೆ ಹಣ ದೊರಕಲಿದೆ.
ಸಾರಿಗೆ ನೌಕರರು ಶಾಶ್ವತ ಅಂಗನ್ಯೂನ್ಯತೆ / ಭಾಗಶಃ ಶಾಶ್ವತ ಅಂಗನ್ಯೂನ್ಯತೆ ಒಳಗಾದಲ್ಲಿ ರೂ.1 ಕೋಟಿಗಳನ್ನು ಪಡೆಯಲು ಈ ಸೌಲಭ್ಯದಲ್ಲಿ ಅವಕಾಶ ಇದೆ. ಡೆಬಿಟ್ ಕಾರ್ಡ ಮೇಲೆ ರೂ.15 ಲಕ್ಷಗಳ ಅಪಘಾತ ವಿಮಾ ಸೌಲಭ್ಯ ಜಾರಿ ಮಾಡಲಾಗಿದೆ. ಸದರಿ ಯೋಜನೆಯಡಿ ಅಪಘಾತವಲ್ಲದ ಸ್ವಾಭಾವಿಕ ಮರಣಕ್ಕೆ ರೂ.5 ಲಕ್ಷಗಳು ವಿಮೆಯೊಂದಿಗೆ ಇತರ ಹೆಚ್ಚುವರಿ ಸೌಲಭ್ಯ ನೀಡಲಾಗುತ್ತದೆ.
ಬ್ಯಾಂಕ್-ಸಾರಿಗೆ ನಿಗಮ ಮಧ್ಯೆ ಒಡಂಬಂಡಿಕೆ
ದೇಶದ ಸಾರಿಗೆ ನಿಗಮಗಳಲ್ಲಿ ಮೊದಲ ಬಾರಿಗೆ ರೂ.1.20 ಕೋಟಿಗಳ ಅಪಘಾತ ವಿಮೆ ಸಾರಿಗೆ ನೌಕರರಿಗೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ಜಾರಿಗೆ ತರಲಾಗಿದೆ ಎಂದು ಸಚಿವರು ಪುನರುಚ್ಚರಿಸಿದರು.
ಈ ಸಂದರ್ಭದಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (KSRTC) ವ್ಯವಸ್ಥಾಪಕ ನಿರ್ದೇಶಕ ಎಸ್. ಭರತ್ ಹಾಗೂ ಇತರ ಅಧಿಕಾರಿಗಳಾದ ಡಾ.ಕೆ. ನಂದಿನಿ ದೇವಿ, ನಿಗರ ಮತ್ತು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಪರವಾಗಿ ವೆಂಕಟ್ ಸುಧೀರ ಚೀದೆಲ್ಲ, ಪ್ರಾದೇಶಿಕ ಮುಖ್ಯಸ್ಥರು ಕಲಬುರಗಿ ಹಾಗೂ ನಾಗಭೂಷಣ ಜಿಆರ್, ಸಹಾಯಕ ಪ್ರಧಾನ ವ್ಯವಸ್ಥಾಪಕರು ಸೇರಿದಂತೆ ವಿವಿಧ ಅಧಿಕಾರಿಗಳ ಸಮ್ಮುಖದಲ್ಲಿ ಯೋಜನೆ ಜಾರಿ ಒಪ್ಪಂದಕ್ಕೆ ಸಹಿ ಮಾಡಿದರು.












Click it and Unblock the Notifications