ಭಾರತ ಬೂಟಾಟಿಕೆಗೆ ನಾಲ್ಕು ಫೈಟ್ ಮೇಲೆ ಕಳಿಸಿದ್ದು ಬಿಟ್ರೆ ಏನೂ ಮಾಡಿಲ್ಲ: ಕಾಂಗ್ರೆಸ್ ಶಾಸಕ
ಕೋಲಾರ, ಮೇ 16: ಭಾರತ ಬೂಟಾಟಿಕೆಗೆ ನಾಲ್ಕು ಫೈಟ್ ಮೇಲೆ ಕಳಿಸಿದ್ದು ಬಿಟ್ರೆ ಏನೂ ಮಾಡಿಲ್ಲ. 26 ಜನ ಮಹಿಳೆಯರ ಅರಿಶಿನ ಕುಂಕುಮಕ್ಕೆ ಬೆಲೆ ಇಷ್ಟೆನಾ? ಆ ಹೆಣ್ಣು ಮಕ್ಕಳಿಗೆ ಸಿಕ್ಕ ಪರಿಹಾರ ಇದೇನಾ ಎಂದು ಭಾರತದ ಆಪರೇಷನ್ ಸಿಂಧೂರ ವಿಚಾರಕ್ಕೆ ಕೋಲಾರ ಕಾಂಗ್ರೆಸ್ ಶಾಸಕ ಕೊತ್ತೂರು ಮಂಜುನಾಥ್ ಬೇಸರ ವ್ಯಕ್ತಪಡಿಸಿದರು.
ಕೋಲಾರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಾಮಾನ್ಯ ಪ್ರಜೆಗಳ ಮೇಲೆ ಯುದ್ಧ ಮಾಡೋದಕ್ಕೆ ನಮ್ಮ ವಿರೋಧ. ಆದ್ರೆ ನಮ್ಮ ದೇಶದೊಳಗೆ ಬಂದು ಪತ್ನಿಯರ ಎದುರೆ ಪತಿಯರನ್ನ ಹೊಡೆದ್ರೆ ಹೇಗೆ ಸಹಿಸೋದು, ಆ ಹೆಣ್ಣು ಮಕ್ಕಳು ಗಟ್ಟಿಯಾಗಿರೋದಕ್ಕೆ ಪರವಾಗಿಲ್ಲ, ಇಲ್ಲಾ ಅಂದ್ರೆ ಹಾರ್ಟ್ ಅಟ್ಯಾಕ್ ಆಗಿ ಸಾಯಬೇಕಿತ್ತು. ಅಂತಹದಕ್ಕೆ ಪರಿಹಾರ ಇದಲ್ಲ, ಬೇರಿಂದ ಕೊಂಬೆ ತನಕ ಎಲ್ಲವನ್ನ ಹೊಡಿಯಬೇಕು ಇದು ಒಳ್ಳೆಯ ಅವಕಾಶ ಇತ್ತು. ಆದ್ರೆ ಏನೂ ಮಾಡಿಲ್ಲ ಅನ್ನೋದು ಬೇಸರ ತಂದಿದೆ ಎಂದು ಪ್ರಧಾನಿ ಹಾಗೂ ಸೇನೆ ವಿರುದ್ದ ಕಾಂಗ್ರೆಸ್ ಶಾಸಕ ಕೊತ್ತೂರು ಮಂಜುನಾಥ್ ಬೇಸರ ಹೊರಹಾಕಿದ್ರು.

ಆಪರೇಷನ್ ಸಿಂಧೂರ ಹೆಸರಲ್ಲಿ ಅಷ್ಟು ಜನ ಇಷ್ಟು ಜನ ಉಗ್ರರು ಹೊಡೆದಿದ್ದೇವೆ ಅಂತಾರೆ, ಆದ್ರೆ ಇಲ್ಲಿಯವರೆಗೂ ಎಲ್ಲೂ ಕನ್ಫರ್ಮ್ ಆಗಿಲ್ಲ, ಮಾಧ್ಯಮಗಳಲ್ಲಿ ಬಂದಿದ್ದು ಬಿಟ್ರೆ ಎಲ್ಲೂ ನೋಡಿಲ್ಲ. ನಮ್ಮ ಊರಲ್ಲಿ ಬಂದು ನಮ್ಮನ್ನ ಹೊಡೆದು ತಪ್ಪಿಸಿಕೊಂಡು ಹೋಗ್ತಾರೆ ಅಂದ್ರೆ ನಮ್ಮ ಭದ್ರತಾ ವೈಫಲ್ಯ. ಗಡಿಯಲ್ಲಿ ಸೇನೆ ಏನು ಮಾಡುತ್ತಿತ್ತು. ಇವರೆ ಏನಾದ್ರು ಪ್ಲಾನ್ ಮಾಡಿ ಭಯೋತ್ಪಾದಕರನ್ನು ಬಿಟ್ಟುಕೊಂಡ್ರಾ? ಇದ್ರಲ್ಲಿ ಯಾವುದು ನಿಜ, ಯಾವುದು ಸುಳ್ಳು ನಮಗೆ ಗೊತ್ತಿಲ್ಲ. ಆದ್ರೆ ಭಾರತ ಕೊಟ್ಟ ಪ್ರತ್ಯುತ್ತರ ನಮಗೆ ಸಮಾಧಾನ ತಂದಿಲ್ಲ.
ಇದು ಒಳ್ಳೆಯ ಚಾನ್ಸ್ ಇತ್ತು. ಉಗ್ರವಾದವನ್ನ ಬೇರು ಸಮೇತ ಕಿತ್ತೊಗೆಯಬಹುದಿತ್ತು, ಆದ್ರೆ ನಮ್ಮ ನಿರೀಕ್ಷೆ ಹುಸಿಯಾಗಿದೆ. ಸಿಂಧೂರ ಕಳೆದುಕೊಂಡ ಹಣ್ಣು ಮಕ್ಕಳಿಂದಲೇ ಆ ಉಗ್ರರನ್ನು ಫಿನಿಶ್ ಮಾಡಿಸಬೇಕಿತ್ತು. ಸಿಂಧೂರ ಕಳೆದುಕೊಂಡವರ ಕೈಗೆ ಗನ್ ಕೊಟ್ಟು ಸುಡೋದು, ಸೂಜಿಯಿಂದ ಚುಚ್ಚಿ ಕೊಲ್ಲೋದು ಎಂಬ ನಿರೀಕ್ಷೆ ಇತ್ತು. ಆದ್ರೆ ಕದನ ವಿರಾಮ ಎಂದು ಹೇಳುವ ಭಾರತ ಇಸ್ರೇಲ್ ದೇಶವನ್ನು ನೋಡಿ ಕಲಿಯಬೇಕು. ನಮ್ಮ ಹೆಣ್ಣು ಮಕ್ಕಳಿಗೆ ಬೆಲೆ ಇಲ್ವಾ. ಆ ಉಗ್ರರನ್ನ ಹಿಡಿದುಕೊಂಡು ಬಂದು ನಮ್ಮ ಹೆಣ್ಣು ಮಕ್ಕಳ ಕೈಗೆ ಕೊಡಬೇಕಿತ್ತು, ಅಮೇರಿಕಾದ ಒಬ್ಬ ಪ್ರಜೆಯನ್ನ ಮುಟ್ಟಿದ್ರೆ ಬಿಡ್ತಾರ ಎಂದು ಶಾಸಕ ಕೊತ್ತೂರು ಮಂಜುನಾಥ ಪ್ರಶ್ನೆ ಮಾಡಿದರು.












Click it and Unblock the Notifications