ಹಿಂದೂ ರಾಷ್ಟ್ರ ಮಾಡುವುದೇನಿದೆ? ಹೀಗಿದ್ದಿದ್ದಕ್ಕೆ 'ಮುಸ್ಲಿಂ, ಕ್ರಿಶ್ಚಿಯನ್, ಪಾರ್ಸಿಗಳು ಇಲ್ಲಿದ್ದಾರೆ: ಪೇಜಾವರ ಶ್ರೀ
ಹುಬ್ಬಳ್ಳಿ, ಜನವರಿ 05: ರಾಮಜನ್ಮಭೂಮಿ ಪ್ರಕರಣದಲ್ಲಿ ಇಲ್ಲಿನ ಶ್ರೀಕಾಂತ ಪೂಜಾರಿ ಬಂಧನದಲ್ಲಿ ಸರ್ಕಾರ ಅದರದ್ದೇ ಕಾರ್ಯವನ್ನು ನಿರ್ವಹಿಸುತ್ತಿದೆ. ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಸಂದರ್ಭದಲ್ಲಿ ಬಂಧನದಂತಹ ಬೆಳವಣಿಗೆಗಳು ಜನರಲ್ಲಿ ಹಿಂದೂಗಳ ಟಾರ್ಗೆಂಟ್ ಭಾವನೆ ಬರುತ್ತಿದೆ ಎಂದು ಉಡುಪಿ ಪೇಜಾವರ ಮಠದ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥರು ಪ್ರತಿಕ್ರಿಯಿಸಿದರು.
ಶುಕ್ರವಾರ ಬೆಳಿಗ್ಗೆ ಹುಬ್ಬಳ್ಳಿಯಲ್ಲಿ ಅಯೋಧ್ಯೆಯ ಶ್ರೀರಾಮಮಂದಿರದ ಮಂತ್ರಾಕ್ಷತೆ ನೀಡಲು ಆಗಮಿಸಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮಮಂದಿರ ಉದ್ಘಾಟನೆಯ ಸಂದರ್ಭದಲ್ಲಿ ಇವೆಲ್ಲ ನಡೆಯುತ್ತಿವೆ. ಸರ್ಕಾರ ಸಹ ಸ್ವಲ್ಪ ಎಚ್ಚರಿಕೆ ವಹಿಸಬೇಕಾಗಿದೆ ಎಂದು ಶ್ರೀಗಳು ಸರ್ಕಾರ ಸಲಹೆ ನೀಡಿದ್ದಾರೆ.

ಹಿಂದೂ ರಾಷ್ಟ್ರದಲ್ಲಿ ನೀವೆಲ್ಲರು ನೆಲೆಸಿದ್ದೀರಿ
ಭಾರತ ಈಗಾಗಲೇ ಹಿಂದೂ ರಾಷ್ಟ್ರವಾಗಿದ್ದು, ಮತ್ತೆ ಮಾಡುವುದೇನಿದೆ. ಭಾರತ ಈಗ ಹಿಂದೂ ರಾಷ್ಟ್ರವಾಗಿರುವ ಕಾರಣಕ್ಕಾಗಿಯೇ ಇಲ್ಲಿ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ ಸೇರಿದಂತೆ ಎಲ್ಲಾ ಧರ್ಮಗಳು ಇಲ್ಲಿ ನೆಲೆಸಿವೆ. ಈ ವೈವಿದ್ಯಮಯತೆಯನ್ನು ಬೇರಾವ ರಾಷ್ಟ್ರದಲ್ಲಿ ಕಾಣಲು ಸಾಧ್ಯವಿಲ್ಲ ಎಂದು ಪೇಜಾವರ ಶ್ರೀಗಳು ತಿಳಿಸಿದರು.
ಹಿಂದೂಸ್ತಾನ ಹಮಾರಾ ಎನ್ನುವ ಘೋಷಣೆ ಇಂದು ನಿನ್ನೆಯದಲ್ಲ. ಇದನ್ನು ಎಲ್ಲರೂ ಒಪ್ಪಿಕೊಂಡಾಗಿದೆ. ಕಾಂಗ್ರೆಸ್, ಬಿಜೆಪಿ ಹುಟ್ಟುವ ಮೊದಲೇ ಎಲ್ಲಾ ಧರ್ಮದವರು ಈ ರಾಷ್ಟ್ರದಲ್ಲಿದ್ದಾರೆ.
ಸಂಕುಚಿತ ಭಾವನೆ ಸರಿಯಲ್ಲ: ಶ್ರೀಗಳು
ಹಿಂದೂರಾಷ್ಟ್ರದಲ್ಲಿ ಹಿಂದೂಗಳಿಗೆ ಮಾತ್ರ ಅವಕಾಶ ಎನ್ನುವ ಸಂಕುಚಿತ ಭಾವನೆ ಸರಿಯಲ್ಲ. ಎಲ್ಲರೂ ಒಟ್ಟಿಗೆ ಇರಬೇಕು ಎಂಬುದು ಈ ರಾಷ್ಟ್ರದ ಪರಿಕಲ್ಪನೆಯಾಗಿದೆ. ಸರ್ವೇ ಜನ ಸುಖಿನೋ ಭವಂತು ಎಂದು ಹೇಳುತ್ತೇವೆಯೆ ಹೊರತು ಹಿಂದೂಗಳಷ್ಟೇ ಸುಖವಾಗಿರಲಿ ಎಂದು ಹೇಳುವುದಿಲ್ಲ. ಇದು ಈ ರಾಷ್ಟ್ರದ ಭಾವನೆಯಾಗಿದೆ. ಇದನ್ನು ಪಾಕಿಸ್ತಾನ, ಚೀನಾದಂತಹ ಬೇರಾವ ರಾಷ್ಟ್ರದಲ್ಲಿ ಕಾಣಲು ಸಾಧ್ಯವಿಲ್ಲ ಎಂದು ವಿವರಿಸಿದರು.

ಚುನಾವಣೆ-ರಾಮಮಂದಿರಕ್ಕೆ ಸಂಬಂಧವಿಲ್ಲ
ಮುಂಬರಲಿರುವ ಲೋಕಸಭಾ ಚುನಾವಣೆಗೂ ಮತ್ತು ಶ್ರೀರಾಮ ಮಂದಿರ ಉದ್ಘಾಟನೆಗೂ ಸಂಬಂಧವಿಲ್ಲ. ಇಂತಹ ದೊಡ್ಡ ಮಂದಿರ ನಿರ್ಮಿಸಲು ಐದಾರು ವರ್ಷಗಳು ಬೇಕು. ಹೀಗಿರುವಾಗ ಲೋಕಸಭೆ, ವಿಧಾನಸಭೆ ಸೇರಿದಂತೆ ಹಲವು ಚುನಾವಣೆಗಳು ಬರುತ್ತವೆ. ಹೀಗಾಗಿ ಚುನಾವಣೆ ಹಾಗೂ ಇಂತಹ ಮಾತುಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.












Click it and Unblock the Notifications