ಲೋಕಾ ಚುನಾವಣೆ ವೇಳೆ ಅಬ್ಬರಿಸಿ ಬೊಬ್ಬಿರಿದಿದ್ದ ಇಂಡಿಕೂಟ ಮಂಕಾಗಿದ್ದೇಕೆ?
ಬೆಂಗಳೂರು, ಮಾರ್ಚ್ 17: ರಾಜಕೀಯ ಅಂದ್ರೆ ಸುಮ್ನೆನಾ? ಚುನಾವಣೆ ಹತ್ತಿರ ಬಂದಾಗ ಒಂದಷ್ಟು ಸಮಾವೇಶ, ಪ್ರಚಾರ ಭಾಷಣ ಮಾಡಿ ಮನೆಮನೆಗೆ ಹೋಗಿ ಮತಕೇಳಿ ಬಿಟ್ಟರೆ ಮುಗಿದು ಹೋಯಿತಾ? ಈ ಪ್ರಶ್ನೆ ಇಂಡಿ ಮೈತ್ರಿಕೂಟಕ್ಕೆ ಅನ್ವಯಿಸುತ್ತದೆ. ಕಾರಣ ಲೋಕಸಭಾ ಚುನಾವಣೆ ಕಳೆದು ವರ್ಷವಾಗುತ್ತಾ ಬರುತ್ತಿದೆ. ಇಲ್ಲಿವರೆಗೆ ಇಂಡಿ ಮೈತ್ರಿಕೂಟದ ನಾಯಕರು ಒಂದೆಡೆ ಸೇರಿ ಮುಂದೇನು ಮಾಡಬೇಕು ಎಂಬುದರ ಬಗ್ಗೆ ಚರ್ಚೆ ನಡೆಸುವುದಿರಲಿ ಮೈತ್ರಿಕೂಟದ ಪರವಾಗಿ ಒಂದೇ ಒಂದು ಹೇಳಿಕೆ ನೀಡದೆ ಮೌನಕ್ಕೆ ಜಾರಿರುವುದನ್ನು ನೋಡಿದರೆ ಹತ್ತು ಹಲವು ಅನುಮಾನಗಳು ಮೂಡದಿರದು.
ಕಳೆದ ವರ್ಷ ಈ ವೇಳೆಗೆ ಇಂಡಿ ಕೂಟದ ಅಬ್ಬರ ದೇಶದಲ್ಲಿ ಜೋರಾಗಿತ್ತು. ನರೇಂದ್ರ ಮೋದಿಯನ್ನು ವಿರೋಧಿಸುವ ಎಲ್ಲ ರಾಜಕೀಯ ಪಕ್ಷಗಳ ನಾಯಕರು ಒಗ್ಗೂಡಿ ಎನ್‌ಡಿಎ ಮೈತ್ರಿ ಕೂಟದ ವಿರುದ್ಧ ಸಮರ ಸಾರಿದ್ದರು. ಅದರ ಫಲವಾಗಿ ಒಂದೊಳ್ಳೆಯ ಸ್ಥಾನಗಳನ್ನು ಪಡೆಯಲು ಸಾಧ್ಯವಾಗಿತ್ತು. ಆದರೆ ಚುನಾವಣೆ ಮುಗಿಯುತ್ತಿದ್ದಂತೆಯೇ ಆ ಅಬ್ಬರ, ಉತ್ಸಾಹ ಎಲ್ಲವೂ ಮುಗಿದು ಹೋಗುವುದರೊಂದಿಗೆ ತಮ್ಮ ಹಾದಿ ತಮಗೆ ಎಂಬಂತೆ ಒಂದೊಂದು ಪಕ್ಷದವರು ಒಂದೊಂದು ಹಾದಿಯನ್ನು ಹಿಡಿದುಕೊಂಡು ಹೋಗುತ್ತಿರುವುದು ಕಾಣಿಸುತ್ತಿದೆ. ಈಗಿನ ಪರಿಸ್ಥಿತಿಯನ್ನು ನೋಡಿದರೆ ಬಹುಶಃ ಇವರೆಲ್ಲರೂ ಒಟ್ಟಾಗಿ ಸೇರಬೇಕಾರೆ ಮತ್ತೆ ಲೋಕಸಭಾ ಚುನಾವಣೆ ಬರಬೇಕಿದೆ. ಆಗ ಮತ್ತೊಮ್ಮೆ ಎದ್ದು ಬರುವ ಸಾಧ್ಯತೆಯಿದೆ.

ಲೋಕಸಭಾ ಚುನಾವಣೆ ಸಮಯದಲ್ಲಿ ಕಾಂಗ್ರೆಸ್ ಹೇಗೋ ಕಷ್ಟಪಟ್ಟು ನೂರರ ಹತ್ತಿರ ಹೋಗಿತ್ತು. ಅದೇ ದೊಡ್ಡ ಸಾಧನೆ ಎಂಬಂತೆ ಬಿಂಬಿತವಾಗಿತ್ತು. ಜತೆಗೆ ಜೆಡಿಯುನ ನಿತೀಶ್ ಕುಮಾರ್ ಮತ್ತು ಟಿಡಿಪಿಯ ಚಂದ್ರಬಾಬು ನಾಯ್ಡು ನಮಗೆ ಬೆಂಬಲ ನೀಡಿದರೆ ಸರ್ಕಾರವನ್ನೇ ರಚಿಸಿ ಬಿಡುತ್ತೇವೆ ಎಂಬ ಕನಸು ಕಂಡಿದ್ದರು. ಅಷ್ಟೇ ಅಲ್ಲದೆ ಫಲಿತಾಂಶ ಮುಗಿಯುತ್ತಿದ್ದಂತೆಯೇ ನಾವೇ ಸರ್ಕಾರ ರಚಿಸುತ್ತೇವೆ ಎಂಬಂತೆ ಪತ್ರಿಕಾಗೋಷ್ಟಿ ನಡೆಸಿ ಮಾತನ್ನಾಡಿದ್ದರು. ಅವತ್ತು ಇದ್ದ ಉತ್ಸಾಹ ಇವತ್ತು ಎಲ್ಲಿ ಹೋಯಿತು? ಎಂಬುದು ಹಲವರ ಪ್ರಶ್ನೆಯಾಗಿದೆ.
ಮತ್ತೆ ಎದ್ದು ನಿಲ್ಲಲು ಪ್ರಯತ್ನಿಸದ ಕಾಂಗ್ರೆಸ್
ಸುಮಾರು ಅರುವತ್ತು ವರ್ಷಕ್ಕೂ ಹೆಚ್ಚು ಕಾಲ ದೇಶವನ್ನಾಳಿದ ಕಾಂಗ್ರೆಸ್ ಇವತ್ತು ದೇಶದಲ್ಲಿ ಹೀನಾಯ ಪರಿಸ್ಥಿತಿಗೆ ಬಂದು ನಿಂತಿದೆ. ಇದಕ್ಕೆ ಕಾರಣಗಳು ಹಲವು ಇರಬಹುದಾದರೂ ಮತ್ತೆ ಎದ್ದು ನಿಲ್ಲುವ ಪ್ರಯತ್ನಗಳನ್ನು ಪಕ್ಷದ ನಾಯಕರು ಮಾಡದೆ ಇರುವುದು ವರ್ಷದಿಂದ ವರ್ಷಕ್ಕೆ ಪಕ್ಷವನ್ನು ದುರ್ಬಲ ಮಾಡುತ್ತಾ ಹೋಗುತ್ತಿದೆ. ರಾಷ್ಟ್ರೀಯ ಪಕ್ಷವೊಂದು ಇಂತಹ ಸ್ಥಿತಿಗೆ ತಲುಪಲು ಮುಖ್ಯ ಕಾರಣ ತಳಮಟ್ಟದಲ್ಲಿ ಪಕ್ಷ ಸಂಘಟನೆಯಾಗದಿರುವುದು ಹಾಗೂ ಕಾರ್ಯಕರ್ತರ ಪಡೆಯನ್ನು ಬೆಳೆಸದಿರುವುದು ಎನ್ನುವುದನ್ನು ಒಪ್ಪಿಕೊಳ್ಳಲೇ ಬೇಕಾಗಿದೆ. ಪಕ್ಷದಲ್ಲಿ ಎಲ್ಲರೂ ನಾಯಕರೇ ಆಗಿದ್ದು ಗ್ರಾಮಮಟ್ಟದಲ್ಲಿ ಕೆಲಸ ಮಾಡಿ ಪಕ್ಷವನ್ನು ಗಟ್ಟಿಯಾಗಿಸುವ ಸಾಮರ್ಥ್ಯ ಅವರಲ್ಲಿ ಇಲ್ಲದಾಗಿದೆ.
ಇದರಿಂದಾಗಿ ದೇಶ ಮಾತ್ರವಲ್ಲ ರಾಜ್ಯಮಟ್ಟದಲ್ಲಿಯಯೂ ಕಾರ್ಯಕರ್ತರ ಪಡೆಯಿಲ್ಲದೆ ಅಧಿಕಾರವನ್ನು ಕಳೆದುಕೊಳ್ಳುವಂತಾಗಿದೆ. ಇದರ ಮರ್ಮವರಿತ ರಾಜ್ಯದ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ರಾಜ್ಯದಲ್ಲಿ ತಳಮಟ್ಟದಲ್ಲಿ ಪಕ್ಷವನ್ನು ಸಂಘಟಿಸಿ ಅಧಿಕಾರಕ್ಕೆ ತರುವಂತೆ ಮಾಡಿದರು ಎಂಬುದನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಇಂತಹ ಕೆಲಸಗಳು ರಾಷ್ಟ್ರಮಟ್ಟದಲ್ಲಿ ನಡೆಯದ್ದರಿಂದಲೇ ಕಾಂಗ್ರೆಸ್ ಮಂಡಿಯೂರಬೇಕಾಗಿ ಬಂದಿದೆ. ಇನ್ನು ಕಾಂಗ್ರೆಸ್ ನೇತೃತ್ವದಲ್ಲಿ ಹುಟ್ಟಿಕೊಂಡ ಐಎನ್ ಡಿಐಎ ಒಂಥರಾ ಮಳೆಗಾಲದಲ್ಲಿ ಹುಟ್ಟಿಕೊಳ್ಳುವ ನಾಯಿಕೊಡೆಯಂತಾಗಿದೆ. ಚುನಾವಣೆ ಬಂದಾಗ ಕೇಂದ್ರದ ವಿರುದ್ಧ ಹೋರಾಟ, ಪಾದಯಾತ್ರೆ, ಪ್ರತಿಭಟನೆ ಮಾಡಿ ಉಳಿದಂತೆ ಮೌನಕ್ಕೆ ಜಾರಿ ಬಿಡುತ್ತದೆ.

ಪ್ರಾದೇಶಿಕ ಪಕ್ಷಕ್ಕೆ ಪೈಪೋಟಿ ನೀಡದ ಕಾಂಗ್ರೆಸ್
ಇಂತಹ ಗುಣಗಳಿಂದ ರಾಜಕೀಯದಲ್ಲಿ ಗಟ್ಟಿಯಾಗಿ ನೆಲೆಯೂರುವುದು ಅಸಾಧ್ಯವೇ. ಇವತ್ತು ಕಾಂಗ್ರೆಸ್ ಪಕ್ಷಕ್ಕಿಂತಲೂ ಪ್ರಾದೇಶಿಕ ಪಕ್ಷಗಳು ಗಟ್ಟಿಯಾಗಿವೆ. ಅವು ತಾವು ಆಡಳಿತ ನಡೆಸುವ ರಾಜ್ಯಗಳಲ್ಲಿ ಪ್ರಾಬಲ್ಯ ಸಾಧಿಸಿವೆ. ಜೊತೆಗೆ ಕಾಂಗ್ರೆಸ್ ನ್ನು ವಿರೋಧಿಸಿಕೊಂಡು ಬಂದು ಲೋಕಸಭಾ ಚುನಾವಣೆ ಕಾರಣಕ್ಕಾಗಿ ಮೈತ್ರಿ ಮಾಡಿಕೊಂಡಿವೆ. ಮುಂದೆ ವಿಧಾನಸಭಾ ಚುನಾವಣೆ ನಡೆದಾಗ ಅವು ಕಾಂಗ್ರೆಸ್ ಜತೆಗೆ ನಿಲ್ಲಲು ತಯಾರಿಲ್ಲದ ಪರಿಸ್ಥಿತಿಯಲ್ಲಿವೆ. ಇದಕ್ಕೆ ಉದಾಹರಣೆ ಇತ್ತೀಚೆಗೆ ನಡೆದ ದೆಹಲಿ ಚುನಾವಣೆ ಅಲ್ಲಿ ಏನೆಲ್ಲ ಬೆಳವಣಿಗೆ ಆಯಿತು. ಅದರಿಂದ ಯಾರಿಗೆ ಲಾಭವಾಯಿತು ಎನ್ನುವುದು ನಮ್ಮ ಕಣ್ಣಮುಂದೆಯೇ ಇದೆ.
ಲೋಕಸಭಾ ಚುನಾವಣೆ ಬಳಿಕ ಕಾಂಗ್ರೆಸ್ ವಿಧಾನಸಭಾ ಚುನಾವಣೆಗಳಲ್ಲಿ ಶೂನ್ಯ ಸಾಧನೆ ಮಾಡಿದೆ. ಹೀಗಾಗಿ ಅದರ ಜತೆ ಮೈತ್ರಿ ಮುಂದುವರೆಸಿದರೆ ತಮಗೆ ಉಳಿಗಾಲವಿಲ್ಲ ಎಂಬುದು ಜತೆಗಿದ್ದ ಬಹುತೇಕ ಮೈತ್ರಿ ಪಕ್ಷಗಳಿಗೆ ಗೊತ್ತಾಗಿದೆ. ಹೀಗಾಗಿಯೇ ಅವು ಅಂತರ ಕಾಪಾಡಿಕೊಳ್ಳುವ ಪ್ರಯತ್ನ ಮಾಡುತ್ತಿವೆ. ಇದು ಇಂಡಿ ಒಕ್ಕೂಟದ ಮೇಲೆ ಪರಿಣಾಮ ಬೀರುತ್ತಿದೆ. ಇದೆಲ್ಲದರ ನಡುವೆ ಇಂಡಿ ಒಕ್ಕೂಟದ ಸಹಕಾರದಿಂದ ಪ್ರಧಾನಿಯಾಗುವ ರಾಹುಲ್ ಗಾಂಧಿ ಅವರ ಬಯಕೆಯೂ ಸದ್ಯದ ಮಟ್ಟಿಗೆ ನನಸಾಗುವಂತೆ ಕಾಣುತ್ತಿಲ್ಲ. ಅವರ ನಾಯಕತ್ವಕ್ಕೆ ಟಿಎಂಸಿಯ ಮಮತಾ ಬ್ಯಾನರ್ಜಿ ಮತ್ತು ಎಎಪಿಯ ಅರವಿಂದ್ ಕೇಜ್ರಿವಾಲ್ ಸುತರಾಂ ಒಪ್ಪುತ್ತಿಲ್ಲ.
ಇಂಡಿ ಮೈತ್ರಿಕೂಟಕ್ಕೆ ಶಕ್ತಿ ತುಂಬುವ ಕೆಲಸ ಆಗುತ್ತಾ?
ದೆಹಲಿ ಚುನಾವಣೆಯ ಸೋಲಿನ ಬಳಿಕ ಅರವಿಂದ್ ಕೇಜ್ರಿವಾಲ್ ಕಾಂಗ್ರೆಸ್ ನಿಂದ ದೂರವಾಗಿದ್ದಾರೆ. ಅತ್ತ ಪಶ್ಚಿಮಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಕೂಡ ಅಂತರ ಕಾಪಾಡಿಕೊಂಡಿದ್ದಾರೆ. ಎಲ್ಲರನ್ನೂ ಒಟ್ಟಾಗಿಟ್ಟುಕೊಂಡು ನಾವು (ಇಂಡಿಕೂಟ) ಇನ್ನೂ ಕೂಡ ಒಂದಾಗಿದ್ದೇವೆ ಎನ್ನುವ ಸಂದೇಶವನ್ನು ಎನ್ ಡಿಎಗೆ ರವಾನಿಸುವ ಕಾರ್ಯದಲ್ಲಿ ವಿರೋಧಪಕ್ಷದ ನಾಯಕ ರಾಹುಲ್ ಗಾಂಧಿ, ಸೋನಿಯಾಗಾಂಧಿ ಮತ್ತು ಎಐಇಸಿ ಅಧ್ಯಕ್ಷ ಮಲ್ಲಿಕಾರ್ಜುನಖರ್ಗೆ ವಿಫಲರಾಗಿದ್ದಾರೆ. ಬದಲಿಗೆ ನರೇಂದ್ರಮೋದಿ ಮತ್ತು ಆರ್ ಎಸ್ ಎಸ್ ನ್ನು ಟೀಕೆ ಮಾಡುವುದರಲ್ಲಿಯೇ ದಿನ ಕಳೆಯುತ್ತಿದ್ದಾರೆ. ಸದ್ಯದ ಬೆಳೆವಣಿಗೆಯನ್ನು ಗಮನಿಸಿದರೆ ಮುಂದಿನ 2029ರ ಲೋಕಸಭಾ ಚುನಾವಣೆ ವೇಳೆಗೆ ಇಂಡಿ ಒಕ್ಕೂಟದ ಕಥೆ ಏನಾಗಬಹುದು ಎಂಬುದು ಪ್ರಶ್ನೆಯಾಗಿ ಉಳಿಯಲಿದೆ.

ಇಂಡಿ ಒಕ್ಕೂಟದ ಸದಸ್ಯ ಪಕ್ಷಗಳ ನಾಯಕರನ್ನು ಒಂದೆಡೆ ಸೇರಿಸಿ ಸಭೆ ನಡೆಸಿ ಭಿನ್ನಾಭಿಪ್ರಾಯಗಳಿಗೆ ಮುಲಾಮು ಹಚ್ಚಿ ಆಂತರಿಕ ಕಚ್ಚಾಟವನ್ನು ಸರಿ ಪಡಿಸಿಕೊಂಡು ಒಕ್ಕೂಟದ ನೇತೃತ್ವವನ್ನು ವಹಿಸಿಕೊಳ್ಳುವ ಸಾಮರ್ಥ್ಯ ಹೊಂದಿದವರಿಗೆ ಜವಬ್ದಾರಿ ನೀಡಿ ಮುಂದಿನ ಲೋಕಸಭಾ ಚುನಾವಣೆಗೆ ಬೇಕಾದ ತಯಾರಿಗಳನ್ನು ಈಗಿನಿಂದಲೇ ಮಾಡಲು ಆರಂಭಿಸಿದರೆ ಎನ್‌ಡಿಎ ಎದುರು ಪ್ರಬಲ ವಿರೋಧಿ ಪಡೆಯನ್ನು ಕಟ್ಟಲು ಸಾಧ್ಯವಾಗಬಹುದೇನೋ? ಆದರೆ ಅದ್ಯಾವುದೂ ಆಗುವ ಲಕ್ಷಣಗಳು ಸದ್ಯದ ಪರಿಸ್ಥಿತಿಯಲ್ಲಿ ಕಾಣಿಸುತ್ತಿಲ್ಲ. ಹೀಗಾಗಿ ಟೀಕೆ, ಆರೋಪ ಮಾಡುವುದಕ್ಕಷ್ಟೆ ಸೀಮಿತರಾಗುತ್ತಿದ್ದಾರೆ. ಇದೆಲ್ಲದರ ಪರಿಣಾಮ ಬಿಜೆಪಿ ತ್ರಿವಿಕ್ರಮನಾಗಿ ಬೆಳೆಯುತ್ತಿದೆ ಎನ್ನುವುದನ್ನು ಒಪ್ಪಿಕೊಳ್ಳಲೇ ಬೇಕಾಗುತ್ತದೆ.
-
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಇರಾನ್ ಪರಮಾಣು ವಿಜ್ಞಾನಿ ಕಥೆ ಮುಗಿಸಿದ ಇಸ್ರೇಲ್, ಮತ್ತಷ್ಟು ತಿಕ್ಕಾಟ ಶುರು | Operation Roaring Lion -
ಹೊಸೂರು ವಿಮಾನ ನಿಲ್ದಾಣ: ಬೆಂಗಳೂರು ಸಮೀಪ 2,979 ಎಕರೆ ಭೂಮಿ ಸ್ವಾಧೀನ; ಕನ್ನಡದಲ್ಲೇ ಮಾತನಾಡಿದ ತಮಿಳುನಾಡು ಶಾಸಕ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
Rashmika Mandanna: ಆ ಆಡಿಯೋ, ವಿಷಯವನ್ನ 24 ಗಂಟೆಯೊಳಗೆ ಡಿಲೀಟ್ ಮಾಡದಿದ್ದರೆ ಕಾನೂನು ಕ್ರಮ ಎಂದ ರಶ್ಮಿಕಾ ಮಂದಣ್ಣ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
ವಿಶ್ವಗುರು ಬಸವಣ್ಣ ಮತ್ತು ಅಕ್ಕಮಹಾದೇವಿ ಬಗ್ಗೆ ಅವಹೇಳನಕಾರಿ ಪೋಸ್ಟ್: ಆರೋಪಿ ಬಂಧನಕ್ಕೆ ಆಗ್ರಹ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ












Click it and Unblock the Notifications