ಸ್ವತಂತ್ರ ಲಿಂಗಾಯತ ಧರ್ಮ : ಮಂತ್ರಿಗಳಿಗೆ ನೋಟೀಸ್

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 09 : ಸ್ವತಂತ್ರ ಲಿಂಗಾಯತ ಧರ್ಮಕ್ಕೆ ಅಲ್ಪಸಂಖ್ಯಾತ ಧರ್ಮದ ಸ್ಥಾನಮಾನ ಕುರಿತು ಮುಖ್ಯಮಂತ್ರಿಗಳಿಗೆ ಸಲ್ಲಿಸಿರುವ ಮನವಿಯನ್ನು ಹಿಂಪಡೆಯುವಂತೆ ರಾಜ್ಯದ ನಾಲ್ಕು ಸಚಿವರು ಮತ್ತು ಇಬ್ಬರು ಶಾಸಕರಿಗೆ ಲೀಗಲ್ ನೋಟೀಸ್ ನೀಡಲಾಗಿದೆ. ಈ ಬೆಳವಣಿಗೆಯಿಂದ ಪ್ರತ್ಯೇಕ ಲಿಂಗಾಯತ ಧರ್ಮ ಕುರಿತ ವಿವಾದ ಹೊಸ ತಿರುವನ್ನು ಪಡೆದಿದೆ.

ಲಿಂಗಾಯಿತ ಪ್ರತ್ಯೇಕ ಧರ್ಮ: ಶಿವಶಿವಾ.. ಸಂತರ ಬಾಯಿಯಿಂದ ಇಂಥಾ ಮಾತಾ?

ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕಿನ ತರಲಘಟ್ಟ ಗ್ರಾಮದ ವಾಸಿಯಾದ ಶಶಿಧರ್ ಶಾನಭೋಗ್ ಎಂಬುವರು ತಮ್ಮ ವಕೀಲರಾದ ಗಂಗಾಧರ ಗುರುಮಠ ಅವರ ಮೂಲಕ ನೋಟೀಸ್ ಜಾರಿಗೊಳಿಸಿದ್ದಾರೆ. ಈ ನೋಟೀಸನ್ನು ಮಂತ್ರಿಗಳಾದ ಎಂ.ಬಿ.ಪಾಟೀಲ್, ವಿನಯ್ ಕುಲಕರ್ಣಿ, ಬಸವರಾಜ ರಾಯರೆಡ್ಡಿ, ಶರಣಪ್ರಕಾಶ ಪಾಟೀಲ್, ಶಾಸಕರಾದ ಬಿ.ಆರ್. ಪಾಟೀಲ್ ಹಾಗೂ ಬಸವರಾಜ ಹೊರಟ್ಟಿ ಮತ್ತು ನಿವೃತ್ತ ಐಎಎಸ್ ಅಧಿಕಾರಿ ಡಾ. ಎಸ್.ಎಂ. ಜಾಮದಾರ್ ಅವರಿಗೆ ನೀಡಲಾಗಿದೆ.

ಮಂತ್ರಿಗಳು ಮತ್ತು ಶಾಸಕರು ಅಧಿಕಾರ ವಹಿಸಿಕೊಳ್ಳುವ ಸಂದರ್ಭದಲ್ಲಿ ಭಾರತೀಯ ಸಂವಿಧಾನದ ಜಾತ್ಯತೀತ ತತ್ವಗಳಿಗೆ ಬದ್ಧರಾಗಿರುವುದಾಗಿ ಪ್ರಮಾಣವಚನ ಸ್ವೀಕರಿಸುತ್ತಾರೆ. ಆದರೆ, ಚುನಾಯಿತ ಪ್ರತಿನಿಧಿಗಳಾಗಿ, ಪ್ರತ್ಯೇಕ ಧರ್ಮಸ್ಥಾಪನೆಗಾಗಿ ಬೇಡಿಕೆಯನ್ನಿಟ್ಟು, ಜಾತಿ-ಧರ್ಮಗಳ ಹೆಸರಿನಲ್ಲಿ ಸಮಾಜದಲ್ಲಿ ದ್ವೇಷ ಬಿತ್ತುವ ಕಾರ್ಯ ಅಧಿಕಾರದ ಪ್ರಮಾಣವಚನಕ್ಕೆ ತನ್ಮೂಲಕ ಸಾಂವಿಧಾನಿಕ ತತ್ವಗಳಿಗೆ ವ್ಯತಿರಿಕ್ತವಾದ ನಡವಳಿಕೆ. ಹೀಗಾಗಿ ಸದರಿ ಚುನಾಯಿತ ಪ್ರತಿನಿಧಿಗಳು ಭಾರತೀಯ ದಂಡ ಸಂಹಿತೆ ಅನ್ವಯ ಶಿಕ್ಷಾರ್ಹವಾದ ಅಪರಾಧವನ್ನು ಎಸಗಿರುತ್ತಾರೆ ಎಂದೂ ನೋಟೀಸಿನಲ್ಲಿ ಹೇಳಲಾಗಿದೆ.

Independent Lingayat religion : Legal notice to ministers

ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ದಿನಾಂಕ ಏಪ್ರಿಲ್ 10ರಂದು ಸ್ವತಂತ್ರ ಲಿಂಗಾಯತ ಧರ್ಮಕ್ಕೆ ಅಲ್ಪಸಂಖ್ಯಾತ ಧರ್ಮದ ಸ್ಥಾನಮಾಡ ನೀಡುವಂತೆ ಕೋರಿ ಮನವಿ ಸಲ್ಲಿಸುವುದರೊಂದಿಗೆ ಪ್ರತ್ಯೇಕ ಲಿಂಗಾಯತ ಧರ್ಮಸ್ಥಾಪನೆಯ ವಿವಾದ ಪ್ರಾರಂಭವಾಯಿತು.

ನೋಟೀಸಿನ ಪ್ರಕಾರ, 12ನೆ ಶತಮಾನದ ಸಮಾಜ ಸುಧಾರಕರಾದ ಬಸವಣ್ಣನವರು ಎಂದಿಗೂ ಹೊಸ ಧರ್ಮವನ್ನು ಸ್ಥಾಪಿಸಲಿಲ್ಲ ಹಾಗೂ ಅವರು ವೇದ ವಿರೋಧಿಯೂ ಆಗಿರಲಿಲ್ಲ. ಹನ್ನೆಡನೆಯ ಶತಮಾನಕ್ಕಿಂತ ಮುಂಚೆಯೇ ಸಾವಿರಾರು ವರ್ಷಗಳ ಭವ್ಯ ಇತಿಹಾಸ ಮತ್ತು ಉಜ್ವಲ ಪರಂಪರೆಗಳಿದ್ದ ವೀರಶೈವ ಧರ್ಮಕ್ಕೆ ಬಸವಣ್ಣನವರು ಮತಾಂತರವಾದರು.

ಮೃತ್ಯುಂಜಯ ಸ್ವಾಮಿ ಹೇಳಿಕೆ ಸಮರ್ಥಿಸಿಕೊಂಡ ಎಂ.ಬಿ ಪಾಟೀಲ್

ಬಸವಣ್ಣನವರೇ ಎಲ್ಲಿಯೂ ಅವರ ವಚನಗಳಲ್ಲಿ ಲಿಂಗಾಯತ ಶಬ್ದದ ಬಳಕೆಯನ್ನೇ ಮಾಡಿಲ್ಲ. ಅವರೇ "ಬರೀ ಶೈವನಾಗಿದ್ದ ನನ್ನನ್ನು ನಿಜ ವೀರಶೈವನನ್ನಾಗಿ ಮಾಡಿದ ಚನ್ನಬಸವಣ್ಣನಿಗೆ ನಮೋ ನಮಃ"(ಕರ್ನಾಟಕ ಸರ್ಕಾರವೇ ಪ್ರಕಟಿಸಿದ ಎಂ.ಎಂ. ಕಲಬುರಗಿಯವರ ಪ್ರಧಾನ ಸಂಪಾದಕತ್ವದ ಮಹಾಸಂಪುಟ 1ರ ಪುಟಸಂಖ್ಯೆ 98ರ ವಚನಸಂಖ್ಯೆ 1092) ಎಂದು ಹೇಳಿಕೊಂಡಿದ್ದಾರೆ.

ಹಾಗೆಯೇ ಚನ್ನಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ, ಮತ್ತು ಇತರೆ ವಚನಕಾರರು ತಮ್ಮ ವಚನಗಳಲ್ಲಿ ವೇದ, ಆಗಮ, ಉಪನಿಷತ್ತು, ಪುರಾಣ ಮತ್ತು ಮಹಾಭಾರತದ ಉಲ್ಲೇಖಗಳನ್ನು ವಿಪುಲವಾಗಿ ಬಳಸಿಕೊಂಡಿದ್ದಾರೆ. ಆದ್ದರಿಂದ ನಿಮ್ಮ ಲಿಂಗಾಯತ ಬೇರೆ ಎನ್ನುವ ವಾದವು ಸಂಪೂರ್ಣ ಆಧಾರರಹಿತ ಅಲ್ಲದೇ ಬಸವದ್ರೋಹವೂ ಹೌದು ಎಂದು ನೋಟೀಸಿನಲ್ಲಿ ಹೇಳಲಾಗಿದೆ.

ಹಲವಾರು ವೀರಶೈವ ಲಿಂಗಾಯತ ಉಪಪಂಗಡಗಳು ಪ್ರಸ್ತುತ 2-ಎ ಮತ್ತು 3-ಬಿ ಪ್ರವರ್ಗಗಳ ಅಡಿಯಲ್ಲಿ ಜಾತಿ ಆಧಾರಿತ ಮೀಸಲಾತಿ ಸೌಲಭ್ಯವನ್ನು ಪಡೆಯುತ್ತಿವೆ. ಆದರೆ, ಲಿಂಗಾಯತವೆಂಬ ಪ್ರತ್ಯೇಕ ಅಲ್ಪಸಂಖ್ಯಾತ ಸ್ಥಾನಮಾನವುಳ್ಳ ಧರ್ಮ ಸ್ಥಾಪನೆಯಾದಲ್ಲಿ ಸದರಿ ಉಪಪಂಗಡಗಳು ಜಾತ್ಯಾಧಾರಿತ ಮೀಸಲಾತಿ ಸೌಲಭ್ಯವನ್ನು ಕಳೆದುಕೊಳ್ಳುತ್ತವೆ. ಭಾರತೀಯ ಸಂವಿಧಾನ ಜಾತ್ಯಾಧಾರಿತ ಮೀಸಲಾತಿಯನ್ನು ನೀಡುತ್ತದೆಯೇ ವಿನ: ಧರ್ಮಾಧಾರಿತ ಮೀಸಲಾತಿಯನ್ನಲ್ಲ.

ಈ ನಾಡಿನ ಅಪ್ರತಿಮ ಜ್ಞಾನದಾಸೋಹಿ, ಅನ್ನ ದಾಸೋಹಿ, ನಡೆದಾಡುವ ದೇವರು ಎಂದು ಪೂಜಿಸಲ್ಪಡುತ್ತಿರುವ ಶತಾಯುಷಿ ಪರಮ ಪೂಜ್ಯ ಸಿದ್ಧಗಂಗಾ ಶ್ರೀಗಳು ವೀರಶೈವ ಲಿಂಗಾಯತ ಬೇರೆಯಲ್ಲ ಎಂದು ಅಪ್ಪಣೆ ಕೊಡಿಸಿದ್ದಾರೆ. ಅದಾಗ್ಯೂ ನೀವು ಗೋಬೆಲ್ಲನ ಸತ್ಯದ ರೀತಿಯಲ್ಲಿ ಮತ್ತೆ ಮತ್ತೆ ಪ್ರತಿಪಾದಿಸುತ್ತಿರುವುದು ನನ್ನ ಕಕ್ಷಿದಾರರಿಗೆ ತೀವ್ರ ಖೇದವನ್ನುಂಟುಮಾಡಿದೆ. ಪರಮ ಪೂಜ್ಯ ಸಿದ್ದಗಂಗಾ ಶ್ರೀಗಳನ್ನೇ ಧಿಕ್ಕರಿಸಿದ ನಿಮ್ಮ ಚಿತ್ರ ವಿಚಿತ್ರ ಕೂಟಕ್ಕಾಗಲಿ ಅಥವಾ ವೀರಶೈವ ಲಿಂಗಾಯತ ಸಮುದಾಯಕ್ಕಾಗಲಿ ಒಳ್ಳೆಯದಾಗುವುದಿಲ್ಲ ಎಂದು ನೋಟೀಸಿನಲ್ಲಿ ತಿಳಿಸಲಾಗಿದೆ. ಅಷ್ಟೇ ಅಲ್ಲದೆ, ಸಚಿವರ ನೇತೃತ್ವದ ಬಸವ ಸೇನೆಯನ್ನು ವಿಸರ್ಜಿಸುವಂತೆ ಸೂಚಿಸಲಾಗಿದೆ.

ನೋಟೀಸು ತಲುಪಿದ ಏಳು ದಿನಗಳೊಳಗಾಗಿ ಮುಖ್ಯಮಂತ್ರಿಗಳಿಗೆ ಸಲ್ಲಿಸಿದ ಮನವಿಯನ್ನು ಹಿಂಪಡೆಯುವಂತೆಯೂ ಇಲ್ಲದಿದ್ದಲ್ಲಿ ಸಕ್ಷಮ ನ್ಯಾಯಾಲಯದಲ್ಲಿ ಮಂತ್ರಿಗಳು ಹಾಗೂ ಶಾಸಕರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Independent Lingayat religion : Legal notice has been to ministers, assembly members, IAS officers who have been fighting for separate identity. In the notice, it is said that these fighters have hurt the sentiments of people.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ