ಕನ್ನಡ ಪುಸ್ತಕ ಪ್ರಿಯರಿಗೆ ಸಿಹಿಸುದ್ದಿ; ರಿಯಾಯಿತಿ ಘೋಷಣೆ
ಬೆಂಗಳೂರು, ಆಗಸ್ಟ್ 02; ಕನ್ನಡ ಪುಸ್ತಕ ಖರೀದಿ ಮಾಡುವ ಜನರಿಗೆ ಕನ್ನಡ ಪುಸ್ತಕ ಪ್ರಾಧಿಕಾರ ಸಿಹಿಸುದ್ದಿ ನೀಡಿದೆ. ಸ್ವಾತಂತ್ರ್ಯ ದಿನಾಚರಣೆ 2023ರ ಅಂಗವಾಗಿ ಕನ್ನಡ ಪುಸ್ತಕ ಖರೀದಿಗೆ ರಿಯಾಯಿತಿಯನ್ನು ಘೋಷಣೆ ಮಾಡಿದೆ. ಆಗಸ್ಟ್ ತಿಂಗಳು ಪೂರ್ಣವಾಗಿ ಈ ರಿಯಾಯಿತಿ ಲಭ್ಯವಿರಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಆಗಸ್ಟ್ ತಿಂಗಳಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಎಲ್ಲಾ ಪುಸ್ತಕಗಳನ್ನು ಶೇ 50ರ ರಿಯಾಯಿತಿ ದರಗಳಲ್ಲಿ ಮಾರಾಟ ಮಾಡಲಾಗುವುದು. ಪುಸ್ತಕ ಪ್ರಿಯರು ಈ ಅವಕಾಶ ಬಳಸಿಕೊಳ್ಳಬೇಕು ಎಂದು ಮನವಿ ಮಾಡಿದೆ. ನೀವು ಪುಸ್ತಕ ಖರೀದಿ ಮಾಡಲು ಯೋಚಿಸುತ್ತಿದ್ದರೆ ಇದು ಉತ್ತಮ ಸಮಯವಾಗಿದೆ.

ಬೆಂಗಳೂರಿನ ಕನ್ನಡ ಭವನದ ಸಿರಿಗನ್ನಡ ಪುಸ್ತಕ ಮಳಿಗೆಯಲ್ಲಿ ಹಾಗೂ ಎಲ್ಲಾ ಜಿಲ್ಲೆಗಳ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರದಿಂದ ತೆರೆಯಲಾದ ಎಲ್ಲಾ ಸಿರಿಗನ್ನಡ ಪುಸ್ತಕ ಮಾರಾಟ ಮಳಿಗೆಗಳಲ್ಲಿ ಈ ರಿಯಾಯಿತಿ ಸೌಲಭ್ಯ ದೊರೆಯಲಿದೆ ಎಂದು ಪ್ರಕಟಣೆ ಹೇಳಿದೆ.
ಆನ್‌ಲೈನ್‌ನಲ್ಲಿಯೂ ಲಭ್ಯವಿದೆ; ಈಗ ಆನ್‌ಲೈನ್ ಮೂಲವೂ ಈಗ ಕನ್ನಡ ಪುಸ್ತಕಗಳ ಖರೀದಿ ಜೋರಾಗಿದೆ. ಆದ್ದರಿಂದ ಕನ್ನಡ ಪುಸ್ತಕ ಪ್ರಾಧಿಕಾರ ಆನ್‌ಲೈನ್ ಮೂಲಕ ಸಹ ಪುಸ್ತಕ ಖರೀದಿ ಮಾಡಲು ವ್ಯವಸ್ಥೆಯನ್ನು ಮಾಡಿದೆ. ಜನರು ಪ್ರಾಧಿಕಾರದ www.kannadapustakapradhikara.com ವೆಬ್‌ಸೈಟ್‌ನಲ್ಲಿ ನಮ್ಮ ಪುಸ್ತಕಗಳ ವಿಭಾಗಕ್ಕೆ ಭೇಟಿ ನೀಡಿ, ಶೇ 50ರ ರಿಯಾಯಿತಿ ದರದಲ್ಲಿ ಪುಸ್ತಕ ಖರೀದಿ ಮಾಡಬಹುದು.
ಕನ್ನಡ ಪುಸ್ತಕ ಪ್ರಾಧಿಕಾರವು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ, ಎಲ್ಲಾ ಪ್ರಕಾರದ ಸಾಹಿತ್ಯ ಕೃತಿಗಳನ್ನು ಈವರೆಗೆ ಪ್ರಕಟಿಸುತ್ತಿದೆ. ಇವುಗಳಲ್ಲಿ ವ್ಯಕ್ತಿ ಚಿತ್ರಗಳು, ನಾಟಕಗಳು, ಅಲೆಮಾರಿ ಸಮುದಾಯ, ವೈದ್ಯಕೀಯ, ಪ್ರಾಚೀನ ಕನ್ನಡ ಸಾಹಿತ್ಯ, ಜಾನಪದ, ಪರಿಸರ, ಕೃಷಿ ಹೀಗೆ ಹಲವು ಪ್ರಕಾರಗಳಲ್ಲಿ ಸಾಹಿತ್ಯ ಕೃತಿಗಳನ್ನು ಇದುವರೆಗೆ ಪ್ರಕಟಿಸಿದೆ.
ಪ್ರಾಧಿಕಾರ ಸುಮಾರು 704 ಶೀರ್ಷಿಕೆಗಳನ್ನು ಮುದ್ರಿಸಿ ಪ್ರಕಟಿಸಿದೆ. ಅತ್ಯಂತ ಮೌಲಿಕವಾದ, ಪ್ರಾಜ್ಞರಿಂದ ರಚಿತವಾದ ಈ ಕೃತಿಗಳನ್ನು ಜನಸಾಮಾನ್ಯರಿಗೆ ಸುಲಭ ಬೆಲೆಯಲ್ಲಿ ತಲುಪಿಸಬೇಕೆಂಬ ಉದ್ದೇಶ ಕನ್ನಡ ಪುಸ್ತಕ ಪ್ರಾಧಿಕಾರದ್ದು ಎಂದು ಆಡಳಿತಾಧಿಕಾರಿಯಾದ ಕೆ. ಬಿ. ಕಿರಣ್‍ಸಿಂಗ್ ಹೇಳಿದ್ದಾರೆ.
ಕನ್ನಡ ರಾಜ್ಯೋತ್ಸವದ ಹಿನ್ನಲೆಯಲ್ಲಿ ನವೆಂಬರ್ ತಿಂಗಳಿನಲ್ಲಿ ಕನ್ನಡ ಪುಸ್ತಕ ಖರೀದಿ ಮಾಡುವಾಗ ರಿಯಾಯಿತಿಯನ್ನು ಘೋಷಣೆ ಮಾಡಲಾಗಿರುತ್ತದೆ. ಈಗ ಸ್ವಾತಂತ್ರ್ಯ ದಿನಾಚರಣೆಯ ಹಿನ್ನಲೆಯಲ್ಲಿಯೂ ಆಗಸ್ಟ್ ತಿಂಗಳು ಪೂರ್ತಿ ರಿಯಾಯಿತಿ ಸೌಲಭ್ಯವನ್ನು ನೀಡಲಾಗಿದೆ.
ಪುಸ್ತಕ ಖರೀದಿ; ಈ ವರ್ಷದ ಮೇ ತಿಂಗಳಿನಲ್ಲಿ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಏಕಗವಾಕ್ಷಿ ಯೋಜನೆಯಡಿ 2020ನೇ ಸಾಲಿನ ಪುಸ್ತಕಗಳ ಆಯ್ಕೆ ಪ್ರಕ್ರಿಯೆ ನಡೆದರೂ ಸಹ ಖರೀದಿ ನಡೆದಿಲ್ಲ ಎಂದು ಸುದ್ದಿಯಾಗಿತ್ತು. ಪುಸ್ತಕ ಬಿಡುಗಡೆಗೆ ಅನುದಾನ ಬಿಡುಗಡೆ ಮಾಡಬೇಕು ಎಂದು ಪ್ರಕಾಶಕರು, ಸಾಹಿತಿಗಳು ಕರ್ನಾಟಕ ಸರ್ಕಾರಕ್ಕೆ ಮನವಿಯನ್ನು ಸಹ ಮಾಡಿದ್ದರು. ಆದರೆ ಚುನಾವಣಾ ನೀತಿ ಸಂಹಿತೆ ಕಾರಣ ಅನುದಾನ ಸಿಕ್ಕಿರಲಿಲ್ಲ.
ಪ್ರಕಾಶಕರು ಗ್ರಂಥಾಲಯ ಇಲಾಖೆ ಖರೀದಿಸುವ ಪುಸ್ತಕಗಳ ಬೆಲೆ ಪರಿಷ್ಕರಣೆ ಮಾಡಬೇಕು ಎಂದು ಆಗ್ರಹಿಸುತ್ತಲೇ ಇದ್ದಾರೆ. ಸದ್ಯ ಪುಟವೊಂದಕ್ಕೆ 70 ಪೈಸೆ ಇದೆ, 30 ಪೈಸೆ ಹೆಚ್ಚಿಸಬೇಕು ಎಂಬುದು ಬೇಡಿಕೆಯಾಗಿದೆ. ಆದರೆ ಹಿಂದಿನ ಸರ್ಕಾರ ಈ ಪ್ರಸ್ತಾವನೆಯನ್ನು ತಿರಸ್ಕಾರ ಮಾಡಿತ್ತು.












Click it and Unblock the Notifications