78ನೇ ಸ್ವಾತಂತ್ರ್ಯ ದಿನಾಚರಣೆ: ಡಾ. ಬಿ. ಆರ್. ಅಂಬೇಡ್ಕರ್ ನೆನಪು
ಬೆಂಗಳೂರು, ಆಗಸ್ಟ್ 09: ಭಾರತ 2024ರ ಆಗಸ್ಟ್ 15 ರಂದು 78ನೇ ಸ್ವಾತಂತ್ರ್ಯ ದಿನಾಚರಣೆಯ ಆಚರಣೆಗೆ ಸಿದ್ಧವಾಗುತ್ತಿದೆ. ಈ ಸಂದರ್ಭದಲ್ಲಿ ಹಲವು ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿದೆ. ರಕ್ಷಣಾ ಸಚಿವಾಲಯ ದೇಶಾದ್ಯಂತ 15 ಲಕ್ಷ ಮರಗಳನ್ನು ನೆಡುವ ಅಭಿಯಾನವನ್ನು ಕೈಗೊಳ್ಳಲಿದೆ. ಕರ್ನಾಟಕದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ನೆನಪು ಮಾಡಿಕೊಳ್ಳುತ್ತಿದೆ.
ಬೆಂಗಳೂರು ನಗರದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಫಲಪುಷ್ಪ ಪ್ರದರ್ಶನ ಆರಂಭವಾಗಿದೆ. ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ವಿಷಯ ಆಧಾರಿತ ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನಕ್ಕೆ ಗುರುವಾರ ಲಾಲ್ ಬಾಗ್‌ನಲ್ಲಿ ಚಾಲನೆ ಸಿಕ್ಕಿದೆ. ಆಗಸ್ಟ್ 19ರ ತನಕ ಪ್ರದರ್ಶನ ನಡೆಯಲಿದೆ. ಈ ಮೂಲಕ ಅಂಬೇಡ್ಕರ್ ನೆನಪು ಮಾಡಿಕೊಳ್ಳಲಾಗುತ್ತಿದೆ.

ಅಲ್ಲದೇ ಕರ್ನಾಟಕ ಸರ್ಕಾರ ಸ್ವಾತಂತ್ರ್ಯ ದಿನಾಚರಣೆಯ ಸಮಾರಂಭಗಳಲ್ಲಿ ಭಾರತ ರತ್ನ ಡಾ. ಬಿ. ಆರ್. ಅಂಬೇಡ್ಕರ್ ಅವರ ಭಾವಚಿತ್ರವನ್ನು ಕಡ್ಡಾಯವಾಗಿ ಇಡುವಂತೆ ಈಗಾಗಲೇ ಆದೇಶ ನೀಡಿದೆ. ಸರ್ಕಾರದ ಅಧೀನ ಕಾರ್ಯದರ್ಶಿ-1, ಸಿಆಸುಇ (ರಾಜ್ಯ ಶಿಷ್ಟಾಚಾರ) ಈ ಕುರಿತು ಈಗಾಗಲೇ ಆದೇಶ ಹೊರಡಿಸಿದೆ.
ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆ, ಜನವರಿ 26ರ ಗಣರಾಜ್ಯೋತ್ಸವ ದಿನಾಚರಣೆ ಅಂಗವಾಗಿ ರಾಜ್ಯ ಸರ್ಕಾರಿ ಕಚೇರಿಗಳು, ಸರ್ಕಾರಿ ಸ್ವಾಮ್ಯಕ್ಕೆ ಒಳಪಡುವ ಸಂಸ್ಥೆಗಳು ಹಾಗೂ ಸರ್ಕಾರಿ ಶಾಲಾ ಕಾಲೇಜು ಸೇರಿದಂತೆ ಸರ್ಕಾರದ ವತಿಯಿಂದ ನಡೆಯುವ ಎಲ್ಲಾ ಸಮಾರಂಭಗಳಲ್ಲಿ ಭಾರತ ಸಂವಿಧಾನ ಪಿತಾಮಹ ಭಾರತ ರತ್ನ ಡಾ. ಬಿ. ಆರ್. ಅಂಬೇಡ್ಕರ್ ಅವರ ಭಾವಚಿತ್ರವನ್ನು ಕಡ್ಡಾಯವಾಗಿ ಇಡುವಂತೆ ಸೂಚನೆ ನೀಡಲಾಗಿದೆ.
ಸಂವಿಧಾನ ಶಿಲ್ಪಿ ನೆನಪು: ಬೆಂಗಳೂರು ನಗರದ ಲಾಲ್ ಬಾಗ್‌ನಲ್ಲಿ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಫಲಪುಷ್ಪ ಪ್ರದರ್ಶನ ಆರಂಭವಾಗಿದೆ. ಈ ಬಾರಿಯ ಪ್ರದರ್ಶನದ ವಿಶೇಷತೆ ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ವಿಷಯ ಆಧಾರಿತ ಫಲಪುಷ್ಪ ಪ್ರದರ್ಶನ.
ಲಾಲ್ ಬಾಗ್‌ನಲ್ಲಿ ಆಗಸ್ಟ್ 8ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ ನೀಡಿದ್ದಾರೆ. ಆಗಸ್ಟ್ 19ರ ತನಕ ಫಲಪುಷ್ಪ ಪ್ರದರ್ಶನ ನಡೆಯಲಿದೆ. ತೋಟಗಾರಿಕೆ ಇಲಾಖೆ ಹಮ್ಮಿಕೊಂಡಿರುವ 216ನೇ ಫಲಪುಷ್ಪ ಪ್ರದರ್ಶನವಿದು. ಈ ಬಾರಿ 200 ಪ್ರಭೇದದ ಸುಮಾರು 30-32 ಲಕ್ಷ ಹೂಗಳನ್ನು ಪ್ರದರ್ಶನದಲ್ಲಿ ಬಳಕೆ ಮಾಡಲಾಗುತ್ತಿದೆ.
ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, "ಅಂಬೇಡ್ಕರ್ ಎಂದೆಂದಿಗೂ ಪ್ರಸ್ತುತ. ಈ ಬಾರಿಯ ಫಲಪುಷ್ಪ ಪ್ರದರ್ಶನ ಜನರು ಸಂವಿಧಾನದ ಆಶಯಗಳನ್ನು ಅರಿಯಲು ಅಪೂರ್ವ ಅವಕಾಶ ಒದಗಿಸಿದೆ. ಸಂವಿಧಾನದ ಅರಿವು ಪಡೆದಾಗ ಮಾತ್ರ ಸಂವಿಧಾನದ ರೀತ್ಯ ನಡೆದುಕೊಳ್ಳಲು ಸಾಧ್ಯ" ಎಂದು ಹೇಳಿದರು.
ಅಂಬೇಡ್ಕರ್ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಮುಖ್ಯಮಂತ್ರಿಗಳು, "ಅಂಬೇಡ್ಕರ್ ಅವರ ಜೀವನ ಸಾಧನೆಯಿಂದ ಹಿಡಿದು ಅವರಿಗೆ ಸಂಬಂಧಿಸಿದ ಹಲವು ಪ್ರಮುಖ ವಿಷಯಗಳ ಮಾಹಿತಿಯನ್ನು ಸಂಗ್ರಹಿಸಿ ಪ್ರದರ್ಶನದಲ್ಲಿ ಬಿತ್ತರಿಸಲಾಗಿದೆ" ಎಂದು ತಿಳಿಸಿದರು.
ಫಲಪುಷ್ಪ ಪ್ರದರ್ಶನದ ಉದ್ಘಾಟನೆಗೆ ಆಗಮಿಸಿದ್ದ ಅಂಬೇಡ್ಕರ್ ಅವರ ಮೊಮ್ಮಗ ಭೀಮರಾವ್ ಯಶವಂತ್ ಅಂಬೇಡ್ಕರ್ ಮಾತನಾಡಿ, "ಸರ್ಕಾರಿ ಸಂಸ್ಥೆಯೊಂದು ಇಷ್ಟೊಂದು ಅದ್ಭುತವಾಗಿ ಅಂಬೇಡ್ಕರ್ ಅವರ ಜೀವನ ವೃತ್ತಾಂತವನ್ನು ಅನಾವರಣಗೊಳಿಸಿದ್ದನ್ನು ಕಂಡಿರಲಿಲ್ಲ. ಅಂಬೇಡ್ಕರ್ ಚಿಂತನೆ, ತತ್ವಾದರ್ಶ, ದೇಶಕ್ಕೆ ನೀಡಿರುವ ಕೊಡುಗೆ ಎಲ್ಲವನ್ನೂ ಪುಷ್ಪಗಳಲ್ಲಿ ಅರಳುವಂತೆ ಮಾಡಿರುವುದು ನೋಡಿ ಮೂಕ ವಿಸ್ಮಿತನಾಗಿದ್ದೇನೆ"ಎಂದರು.












Click it and Unblock the Notifications