ಸ್ವಾತಂತ್ರ್ಯ ದಿನಾಚರಣೆ 2023: ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಭರ್ಜರಿ ಸಿದ್ಧತೆ
ಬೆಂಗಳೂರು, ಆಗಸ್ಟ್ 13: ಸ್ವಾತಂತ್ರ್ಯ ದಿನಾಚರಣೆಗೆ ದಿನಗಣನೆ ಶುರುವಾಗಿದೆ. ಈ ಬಾರಿ ಸಿಲಿಕಾನ್ ಸಿಟಿಯಲ್ಲಿ ಸ್ವಾತಂತ್ರ್ಯೋತ್ಸವಕ್ಕೆ ತಯಾರಿ ಯಾವ ರೀತಿ ಇದೆ ಗೊತ್ತಾ? ಸಿಲಿಕಾನ್ ಸಿಟಿಯಲ್ಲಿ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಅದ್ಧೂರಿ ಕಾರ್ಯಕ್ರಮ ನಡೆಯಲಿದೆ.
ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮ ಯಾವ ರೀತಿ ಇರಲಿದೆ ಎಂದು ಕಾರ್ಯಕ್ರಮ ರೂಪುರೇಷೆ ಬಗ್ಗೆ ಬಿಬಿಎಂಪಿ ಪಾಲಿಕೆ ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್, ನಗರ ಪೊಲೀಸ್ ಆಯುಕ್ತರಾದ ದಯಾನಂದ್ ಹಾಗೂ ಬೆಂಗಳೂರು ನಗರ ಜಿಲ್ಲಾಧಿಕಾರಿಯಾದ ಡಾ. ದಯಾನಂದ್ ಜಂಟಿ ಸುದ್ದಿಗೋಷ್ಠಿ ನಡೆಸಿದರು.

ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಸಿದ್ಧತೆ ಬಗ್ಗೆ ಮಾಹಿತಿ ನೀಡಿರುವ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ದಿನಾಚರಣೆಯ ಸಮಾರಂಭಕ್ಕಾಗಿ ಮೈದಾನ ಸಿದ್ಧಗೊಳಿಸಲಾಗಿದೆ. ಶಾಮಿಯಾನ, ವೇದಿಕೆಯ ನಿರ್ಮಾಣ, ಬ್ಯಾರಿಕೇಡಿಂಗ್ ಮತ್ತು ಆಸನಗಳ ವ್ಯವಸ್ಥೆ ಮಾಡಲಾಗಿದೆವೇದಿಗೆ ಆಲಂಕಾರಿಕ ಬ್ಯಾಸ್ ಪರಿಕರಗಳನ್ನ ಆಳವಡಿಸಲಾಗುತ್ತದೆ. ಧ್ವಜಾರೋಹಣ ಮಾಡಲು ಧ್ವಜ ಸ್ಥಂಭ ನಿರ್ಮಿಸಲಾಗಿದೆ ಎಂದರು.
ಸ್ವಾತಂತ್ರ್ಯ ದಿನಾಚರಣೆಯ ದಿನ ಬೆಳಿಗ್ಗೆ 8-55 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಲಿದ್ದಾರೆ. ಭಾರತೀಯ ರಕ್ಷಣಾ ಸೇವೆಯ ಮೂವರು ಹಿರಿಯ ಅಧಿಕಾರಿಗಳನ್ನು ಸಿಎಂಗೆ ಪರಿಚಯಿಸಲಾಗುತ್ತದೆ. ಮುಖ್ಯಮಂತ್ರಿಗಳು ಬೆಳಗ್ಗೆ 9ಗಂಟೆಗೆ ಧ್ವಜಾರೋಹಣ ನೆರವೇರಿಸಲಿದ್ದಾರೆ. ಬಳಿಕ ಮುಖ್ಯಮಂತ್ರಿಗಳು ತೆರೆದ ಜೀಪಿನಲ್ಲಿ ಪೆರೇಡ್ ಪರಿವೀಕ್ಷಣೆ ಮಾಡಿ ಮತ್ತು ಗೌರವ ರಕ್ಷೆ ಸ್ವೀಕರಿಸಲಿದ್ದಾರೆ. ನಂತರ ನಾಡಿನ ಜನತೆಗೆ ಸ್ವಾತಂತ್ರೋತ್ಸವದ ಸಂದೇಶ ನೀಡಲಿದ್ದಾರೆ ಎಂದು ತಿಳಿಸಿದರು.
ಇನ್ನು ಪೊಲೀಸ್ ಆಯುಕ್ತ ಬಿ ದಯಾನಂದ್ ಕೂಡ ತಯಾರಿ ಬಗ್ಗೆ ಮಾಹಿತಿ ನೀಡಿದ್ದು, ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಎಲ್ಲಾ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಪೆರೇಡ್ ಸುತ್ತಮುತ್ತ ಸುಗಮ ಸಂಚಾರಕ್ಕೆ ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಧ್ವಜಾರೋಹಣ, ಕವಾಯತು ಸಂದರ್ಭದಲ್ಲಿ ಬಂದೋಬಸ್ತ್‌ಗೆ ಬೆಂಗಳೂರಿನ ಎಲ್ಲಾ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ಹಾಗೂ
ಡಿಸಿಪಿ, ಎಸಿಪಿ, ಇನ್ಸ್ಪೆಕ್ಟರ್ ಸೇರಿ ಎಲ್ಲಾ ದರ್ಜೆ ಅಧಿಕಾರಿಗಳ ಬಳಕೆ ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಇನ್ನು ಕೆಎಸ್ಆರ್‌ಪಿ, ಸಿಎಆರ್, ಅಗ್ನಿಶಾಮಕ, ಮೊಬೈಲ್ ಕಮಾಂಡ್ ಮತ್ತು ಕಂಟ್ರೋಲ್ ಸೇರಿದಂತೆ ಎಲ್ಲಾ ವಿಶೇಷ ತಂಡಗಳು ಇರಲಿವೆ. ಮೈದಾನ ಸುತ್ತ ಸುರಕ್ಷತೆ ದೃಷ್ಠಿಯಿಂದ 100ಸಿಸಿ ಟಿವಿ ಕ್ಯಾಮರಾ ಅಳವಡಿಕೆ ಮಾಡಲಾಗಿದೆ. ಪ್ರವೇಶ ದ್ವಾರಗಳಲ್ಲಿ ಸ್ಕ್ಯಾನರ್‌ಗಳ ವ್ಯವಸ್ಥೆ ಮಾಡಲಾಗಿದೆ. ಪಾಸ್ ಹೊಂದಿರುವವರಿಗೆ ಮಾತ್ರ ಪರೇಡ್ ಗ್ರೌಂಡ್‌ಗೆ ಪ್ರವೇಶಕ್ಕೆ ಅವಕಾಶ ಮಾಡಲಾಗಿದೆ. ಪಾಸ್‌ನ ಮೂಲಕ ಯಾವ ಗೇಟ್‌ನಲ್ಲಿ ಪ್ರವೇಶ ಎನ್ನುವುದನ್ನು ನೋಡಿ ಬರಬೇಕು. 8.30ರ ಒಳಗೆ ಗ್ರೌಂಡ್‌ನಲ್ಲಿ ಇರಬೇಕು ಎಂದು ಕಮಿಷನರ್ ಮನವಿ ಮಾಡಿದ್ದಾರೆ.
ಒಟ್ಟಾರೆ ಬೆಂಗಳೂರಿನಲ್ಲಿ ಸಿಟಿಯಲ್ಲಿ ಸ್ವಾತಂತ್ರ್ಯ ದಿನಾಚರಣೆಗೆ ಸಕಲ ರೀತಿಯ ಸಿದ್ಧತೆ ನಡೆಯುತ್ತಿದ್ದು ಸ್ವಾತಂತ್ರ್ಯ ದಿನಾಚರಣೆ ಕಣ್ತುಂಬಿ ಕೊಳ್ಳುವುದೊಂದೇ ಬಾಕಿಯಾಗಿದೆ.











Click it and Unblock the Notifications