ಚಿತ್ರಗಳಲ್ಲಿ ನೋಡಿ : ವಜ್ರಮಹೋತ್ಸವಕ್ಕೆ ಸಜ್ಜಾದ ವಿಧಾನಸೌಧ
ಅಕ್ಟೋಬರ್ 25 ರಂದು ವಿಧಾನಸೌಧದ ವಜ್ರಮಹೋತ್ಸವ ಹಲವಾರು ವಿಶೇಷತೆಗಳಿಂದ ಕಳೆಗಟ್ಟಲಿದೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಪಾಲ್ಗೊಳ್ಳಲಿರುವ ಈ ಕಾರ್ಯಕ್ರಮ ಹಲವು ಮೊದಲುಗಳಿಗೆ ಸಾಕ್ಷಿಯಾಗಲಿದ್ದು, ನಗರದ ಡಿಎನ್‍ಎ ನೆಟ್‍ವರ್ಕ್ ಈವೆಂಟ್ ಮ್ಯಾನೇಜ್‍ಮೆಂಟ್ ಕಂಪನಿ ಇದಕ್ಕಾಗಿ ಹೊಸ ಆಯಾಮದ ಕಾರ್ಯಕ್ರಮಗಳನ್ನು ಆಯೋಜಿಸಿದೆ.
ಗ್ಯಾಲರಿ: ವಿಧಾನಸೌಧ ವಜ್ರಮಹೋತ್ಸವಕ್ಕೆ ಭರ್ಜರಿ ತಯಾರಿ
ಇದಲ್ಲದೆ, ವಿಧಾನಸೌಧವನ್ನು ನಿರ್ಮಾಣ ಮಾಡಿದ ಕೆಂಗಲ್ ಹನುಮಂತಯ್ಯ ಅವರ ವಂಶದ ಕುಡಿ, ಈ ವಿಶೇಷ ಮತ್ತು ಐತಿಹಾಸಿಕ ಕಾರ್ಯಕ್ರಮವನ್ನು ಆಯೋಜಿಸುತ್ತಿರುವ ಈವೆಂಟ್ ಮ್ಯಾನೇಜ್‍ಮೆಂಟ್ ಕಂಪನಿಯ ನೇತೃತ್ವ ವಹಿಸಿರುವುದು ವಿಶೇಷ. ಕೆಂಗಲ್ ಹನುಮಂತಯ್ಯ ಅವರ ದೊಡ್ಡ ಮಗಳ ಮಗನಾಗಿರುವ ಟಿ ವೆಂಕಟ ವರ್ಧನ್ ಅವರ ನೇತೃತ್ವದ ಡಿಎನ್‍ಎ ನೆಟ್‍ವಕ್ರ್ಸ್‍ನ ತಂಡ ಕಾರ್ಯಕ್ರಮವನ್ನು ರೂಪಿಸುತ್ತಿದೆ.
ಕಾರ್ಯಕ್ರಮದ ರೂಪುರೇಷೆ: ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ವಿಧಾನಸೌಧದಲ್ಲಿ ಭೇಟಿ ಕೊಡುವ ಎಲ್ಲಾ ಜಾಗದಲ್ಲಿ ಕೆಂಪುಹಾಸಿನ ಸ್ವಾಗತ ಇರುತ್ತದೆ. ಅಂದು ಬೆಳಗ್ಗೆ 11 ಗಂಟೆ ವೇಳೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ರಾಜಭವನದಿಂದ ವಿಧಾನಸೌಧದವರೆಗೆ ವಿಶೇಷ ಮೆರವಣಿಗೆಯಲ್ಲಿ ಬರಲಿದ್ದಾರೆ.

ವಿಶೇಷ ಮೆರವಣಿಗೆಯಲ್ಲಿ ರಾಷ್ಟ್ರಪತಿಗಳು
ರಾಷ್ಟ್ರಪತಿ ಅವರನ್ನು ಅಶ್ವಾರೂಢ ಪಡೆ ವಿಶೇಷವಾಗಿ ರಾಜಭವನದಿಂದ ವಿಧಾನಸೌಧದ ಕೆಂಗಲ್ ಹನುಮಂತಯ್ಯ ಪ್ರತಿಮೆವರೆಗೆ ಕರೆ ತರಲಿದೆ. ರಾಜಭವನದಿಂದ ವಿಧಾನಸೌಧದವರೆಗಿನ ಮಾರ್ಗದಲ್ಲಿ ನಳನಳಿಸುವ ವಿವಿಧ ಜಾತಿಯ ಹೂವುಗಳ ಕುಂಡಗಳನ್ನು ಇಟ್ಟು ಮಾರ್ಗವನ್ನು ಅಲಂಕರಿಸಲಾಗಿರುತ್ತದೆ.
ಕೆಂಗಲ್ ಹನುಮಂತಯ್ಯ ಪ್ರತಿಮೆಯಿಂದ ವಿಧಾನಸಭೆಯ ಸ್ಪೀಕರ್ ಆಸನದವರೆಗೆ ರಾಷ್ಟ್ರಪತಿಗಳೊಂದಿಗೆ ಸ್ಪೀಕರ್ ಕೆ.ಬಿ.ಕೋಳಿವಾಡ, ವಿಧಾನಪರಿಷತ್ತಿನ ಸಭಾಪತಿ ಡಿ.ಎಚ್.ಶಂಕರಮೂರ್ತಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸರ್ಕಾರದ ಸಚಿವರು, ಅಧಿಕಾರಿಗಳು ಹೆಜ್ಜೆ ಹಾಕಲಿದ್ದಾರೆ.
ಉಭಯ ಸದನಗಳನ್ನು ಉದ್ದೇಶಿಸಿ ಭಾಷಣ
ವಿಧಾನಸಭೆಯಲ್ಲಿ ರಾಷ್ಟ್ರಪತಿಗಳು ವಿಧಾನಮಂಡಲದ ಉಭಯ ಸದನಗಳ ಸದಸ್ಯರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಈ ಮೂಲಕ ಐತಿಹಾಸಿಕ ಕ್ಷಣಗಳಿಗೆ ಎಲ್ಲರೂ ಸಾಕ್ಷಿಯಾಗಲಿದ್ದಾರೆ.
ವಿಧಾನಸಭೆಯನ್ನು ವಿಶೇಷವಾಗಿ ಹೂವುಗಳಿಂದ ಅಲಂಕಾರ ಮಾಡಲಿದ್ದು, ಇದೇ ಮೊದಲ ಬಾರಿಗೆ ಇಡೀ ವಿಧಾನಸಭೆಗೆ ಹೊಸ ಕಳೆ ಬರಲಿದೆ. ಅದೇರೀತಿ, ಭಾಷಣ ಮುಗಿದ ನಂತರ ಕೋವಿಂದ್ ಅವರು ವಿಧಾನಪರಿಷತ್ತಿನ ಸಭಾಂಗಣಕ್ಕೂ ಭೇಟಿ ನೀಡಲಿದ್ದಾರೆ. ವಿಧಾನಸಭೆಯಲ್ಲಿ ಯಾವ ರೀತಿ ಅಲಂಕಾರ ಮಾಡಲಾಗಿರುತ್ತದೆಯೋ ಅದೇರೀತಿ ವಿಧಾನಪರಿಷತ್ತಿನ ಸಭಾಂಗಣವನ್ನೂ ಸುಂದರ ಹೂವುಗಳಿಂದ ಅಲಂಕಾರ ಮಾಡಲಾಗಿರುತ್ತದೆ.

ಒಂದು ವಾರದಿಂದ ನಡೆದಿರುವ ಸಿದ್ಧತೆ
ಟಿ ವೆಂಕಟ ವರ್ಧನ್ ನೇತೃತ್ವದ ಡಿಎನ್‍ಎ ನೆಟ್‍ವರ್ಕ್ ಇವೆಂಟ್ ಮ್ಯಾನೇಜ್‍ಮೆಂಟ್ ಕಂಪನಿಯ ಅವರ ತಂಡದ ನೂರಕ್ಕೂ ಹೆಚ್ಚು ಸಿಬ್ಬಂದಿ ಕಳೆದ ಒಂದು ವಾರದಿಂದ ಹಗಲಿರುಳೂ ಶ್ರಮಿಸುತ್ತಿದ್ದಾರೆ.
ಐತಿಹಾಸಿಕ ಕಟ್ಟಡ ಎನಿಸಿರುವ ವಿಧಾನಸೌಧಕ್ಕೆ ಹಿಂದೆಂದೂ ಕಾಣದಂತಹ ವಿಶೇಷವಾದ ವಿದ್ಯುದ್ದೀಪಾಲಂಕಾರ ಮಾಡಲಾಗಿರುತ್ತದೆ.
ಮೂರು ಕುಟುಂಬಗಳಿಗೆ ಸನ್ಮಾನ
ವಿಧಾನಸೌಧ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕೆಂಗಲ್ ಹನುಮಂತಯ್ಯ, ಕಡಿದಾಳ್ ಮಂಜಪ್ಪ ಮತ್ತು ಕೆ.ಸಿ.ರೆಡ್ಡಿ ಅವರ ಕುಟುಂಬ ಸದಸ್ಯರನ್ನು ರಾಷ್ಟ್ರಪತಿಗಳ ಭಾಷಣದ ನಂತರ ಬ್ಯಾಂಕ್ವೆಟ್ ಹಾಲ್‍ನಲ್ಲಿ ನಡೆಯಲಿರುವ ಸುಂದರ ಸಮಾರಂಭದಲ್ಲಿ ಸನ್ಮಾನಿಸಲಾಗುವುದು.

ಚಿತ್ರಮಂದಿರದ ರೀತಿಯಲ್ಲಿ ಮಾರ್ಪಾಟು
ಬ್ಯಾಂಕ್ವೆಟ್ ಹಾಲ್ ಅನ್ನು ಒಂದು ರೀತಿಯಲ್ಲಿ ಚಿತ್ರಮಂದಿರದ ರೀತಿಯಲ್ಲಿ ಮಾರ್ಪಾಟು ಮಾಡಿ ಅಲ್ಲಿ ವಿಧಾನಸೌಧ ನಡೆದು ಬಂದ ಹಾದಿ ಸೇರಿದಂತೆ ಪ್ರಮುಖವಾಗಿ ಮೂರು ಸಾಕ್ಷ್ಯಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ. ಟಿ.ಎನ್ ಸೀತಾರಾಮ್, ಗಿರೀಶ್ ಕಾಸರವಳ್ಳಿ ಹಾಗೂ ಮಾಸ್ಟರ್ ಕಿಶನ್ ಅವರು ಸಾಕ್ಷ್ಯಚಿತ್ರಗಳನ್ನು ನಿರ್ದೇಶಿಸಿದ್ದಾರೆ.

ಸಂಗೀತ ಕಾರ್ಯಕ್ರಮ
ಸಂಜೆ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖಾ ಅವರ ತಂಡದಿಂದದ ಸಂಗೀತ ಕಾರ್ಯಕ್ರಮ ಇರುತ್ತದೆ ಮತ್ತು ಇದಾದ ಬಳಿಕ ಬೆಂಗಳೂರು ಮೂಲದ ಕಲಾವಿದರಿಂದ ತ್ರಿಡಿ ಶೋ ಇರಲಿದೆ.

ಎಲ್ಲಾ ಪ್ರತಿಮೆಗಳಿಗೆ ಅಲಂಕಾರ
ವಿಧಾನಸೌಧದ ಆವರಣದಲ್ಲಿರುವ ಎಲ್ಲಾ ಪ್ರತಿಮೆಗಳಿಗೆ ಅಂದು ವಿಶೇಷ ಅಲಂಕಾರ ಮಾಡಲಾಗಿರುತ್ತದೆ.ಕಾರ್ಯಕ್ರಮಗಳ ನಂತರ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರೊಂದಿಗೆ ಉಭಯ ಸದನಗಳ ಎಲ್ಲಾ ಶಾಸಕರು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಪ್ರತಿಮೆ ಮುಂದೆ ಗ್ರೂಪ್ ಫೋಟೋ ತೆಗೆಸಿಕೊಳ್ಳಲಿದ್ದಾರೆ. ಮೊದಲ ಬಾರಿಗೆ ಉಭಯ ಸದನಗಳ 300 ಜನ ಸದಸ್ಯರು ಒಟ್ಟಿಗೆ ಸಿಂಗಲ್ ಫ್ರೇಂನಲ್ಲಿ ಫೋಟೋಗೆ ಸಾಕ್ಷಿಯಾಗಲಿದ್ದಾರೆ.












Click it and Unblock the Notifications