ಅಪಘಾತವಾದಾಗ ಜೀವ ಉಳಿಸಲು ನೆರವಾಗಿ

By: ಹುಬ್ಬಳ್ಳಿ ಪ್ರತಿನಿಧಿ
Subscribe to Oneindia Kannada

ಬೆಂಗಳೂರು, ಮಾರ್ಚ್ 08 : 'ಅಪಘಾತದಲ್ಲಿ ಗಾಯಗೊಂಡವರಿಗೆ ತಕ್ಷಣ ನೆರವು ಸಿಕ್ಕರೆ ಅನೇಕರ ಪ್ರಾಣ ಉಳಿಸಬಹುದು. ಆದ್ದರಿಂದ, ದೇಶದಲ್ಲಿಯೇ ಮಾದರಿಯಾಗುವಂತಹ ವಿನೂತನ ಯೋಜನೆಯನ್ನು ರಾಜ್ಯದಲ್ಲಿ ಜಾರಿಗೆ ತಂದಿದ್ದು, ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ಜತೆ ಒಪ್ಪಂದ ಮಾಡಿಕೊಳ್ಳಲಾಗಿದೆ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಮಂಗಳವಾರ ಬೆಳಗ್ಗೆ ವಿಧಾನಸೌಧದಲ್ಲಿ 'ಮುಖ್ಯಮಂತ್ರಿ ಸಾಂತ್ವನ ಹರೀಶ್ ಯೋಜನೆ'ಗೆ ಚಾಲನೆ ನೀಡಿ ಮಾತನಾಡಿದ ಸಿದ್ದರಾಮಯ್ಯ ಅವರು, ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಗೆ 48 ಗಂಟೆಗಳ ಅವಧಿಯಲ್ಲಿ ಗರಿಷ್ಠ 25 ಸಾವಿರ ರೂ. ವೆಚ್ಚದ ಚಿಕಿತ್ಸೆ ನೀಡುವ ಯೋಜನೆ ಇದಾಗಿದೆ' ಎಂದರು. [ಮುಖ್ಯಮಂತ್ರಿ ಸಾಂತ್ವನ ಹರೀಶ್ ಯೋಜನೆಗೆ ಚಾಲನೆ ಬಗ್ಗೆ ಓದಿ]

'ರಸ್ತೆ ಅಪಘಾತಕ್ಕೊಳಗಾದವರಿಗೆ ನಗದು ರಹಿತ ಚಿಕಿತ್ಸೆ ನೀಡುವ ಯೋಜನೆ ಇದಾಗಿದ್ದು, ಈ ಸಂಬಂಧ ಆಸ್ಪತ್ರೆಗಳೊಂದಿಗೂ ಒಪ್ಪಂದ ಮಾಡಿಕೊಳ್ಳಲಾಗಿದೆ. ಸರ್ಕಾರಿ, ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಗಾಯಗೊಂಡವರಿಗೆ ಚಿಕಿತ್ಸೆ ನೀಡಲಾಗುತ್ತದೆ' ಎಂದು ಹೇಳಿದರು. [ದೇಹ ತುಂಡಾದರೂ ಕಣ್ಣು ದಾನ ಮಾಡಿ ಬೆಳಕಾದರು]

ನೆಲಮಂಗಲ ಬಳಿ ಕೆಲವು ದಿನಗಳ ಹಿಂದೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ದೇಹ ಎರಡು ತುಂಡಾದರೂ ನೇತ್ರದಾನ ಮಾಡಿದ ತುಮಕೂರು ಮೂಲದ ಹರೀಶ್ ಅವರ ಸ್ಮರಣಾರ್ಥ ಸಾಂತ್ವನ ಯೋಜನೆಗೆ ಅವರ ಹೆಸರಿಡಲಾಗಿದೆ.ಆರೋಗ್ಯ ಸಚಿವ ಯು.ಟಿ.ಖಾದರ್, ಗೃಹ ಸಚಿವ ಡಾ.ಜಿ.ಪರಮೇಶ್ವರ, ಅಪಘಾತದಲ್ಲಿ ಮೃತಪಟ್ಟ ಹರೀಶ್ ತಾಯಿ ಗೀತಾ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು....

ಯೋಜನೆ ಬಗ್ಗೆ ತಿಳಿಯಲು ಸಹಾಯವಾಣಿ

ಯೋಜನೆ ಬಗ್ಗೆ ತಿಳಿಯಲು ಸಹಾಯವಾಣಿ

'ಈ ಯೋಜನೆ ಬಗ್ಗೆ ಜನರಿಗೆ ಮಾಹಿತಿ ನೀಡಲು 108 ಮತ್ತು 104 ಸಹಾಯವಾಣಿಯನ್ನು ಆರಂಭಿಸಲಾಗಿದೆ. ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಮೂಲಕ ಯೋಜನೆ ಜಾರಿಗೊಳಿಸಲಾಗುತ್ತಿದೆ. ಅಪಘಾತದ ಸಂದರ್ಭದಲ್ಲಿ ಸಾರ್ವಜನಿಕರು ಮತ್ತು ಪೊಲೀಸರ ಸಹಕಾರ ಅಗತ್ಯ. ಅವರ ಸಹಕಾರ ಸಿಕ್ಕರೆ ಅನೇಕರ ಪ್ರಾಣ ಉಳಿಸಬಹುದು' ಎಂದು ಸಿದ್ದರಾಮಯ್ಯ ಹೇಳಿದರು.

ಮಾನವೀಯತೆ ಮೆರೆಯಬೇಕು

ಮಾನವೀಯತೆ ಮೆರೆಯಬೇಕು

'ಅಪಘಾತಗಳಲ್ಲಿ ಗಾಯಗೊಂಡವರಿಗೆ ಸಾರ್ವಜನಿಕರು ನೆರವಾಗಿ ಮಾನವೀಯತೆ ಮೆರೆಯಬೇಕು. ಇದರಿಂದ ಅಮೂಲ್ಯ ಪ್ರಾಣ ಉಳಿಸಲು ಸಾಧ್ಯವಾಗಲಿದೆ. ರಸ್ತೆ ಅಪಘಾತಗಳಲ್ಲಿ ಯುವಕರು, ಉದ್ಯೋಗಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಸಾವಿಗೀಡಾಗುತ್ತಿದ್ದಾರೆ. ಅವರ ಜೀವ ಉಳಿಸಬೇಕಾದ್ದು ಅವಶ್ಯ. ತುರ್ತು ಚಿಕಿತ್ಸೆ ನೀಡುವುದಕ್ಕಾಗಿಯೇ ಈ ಯೋಜನೆ ರೂಪಿಸಲಾಗಿದೆ' ಎಂದು ಸಿದ್ದರಾಮಯ್ಯ ತಿಳಿಸಿದರು.

ಹೆಲ್ಮೆಟ್ ಕಡ್ಡಾಯಗೊಳಿಸಲಾಗಿದೆ

ಹೆಲ್ಮೆಟ್ ಕಡ್ಡಾಯಗೊಳಿಸಲಾಗಿದೆ

'ಅಪಘಾತದಲ್ಲಿ ತಲೆಗೆ ಪೆಟ್ಟು ಬಿದ್ದು ಸಾಯುವವರ ಸಂಖ್ಯೆ ಹೆಚ್ಚು. ಆದ್ದರಿಂದ, ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯ ಮಾಡಲಾಗಿದೆ. ನ್ಯಾಯಾಲಯದ ಆದೇಶದಂತೆ ಹೆಲ್ಮೆಟ್ ಕಡ್ಡಾಯಗೊಳಿಸಲಾಗಿದೆ. ಹೆಲ್ಮೆಟ್ ಹಾಕಿದರೆ ಕೇಶ ವಿನ್ಯಾಸ ಹಾಳಾಗುತ್ತದೆ ಎನ್ನುವ ಆರೋಪ ಸರಿಯಲ್ಲ. ಜೀವಕ್ಕಿಂತ ಕೇಶ ವಿನ್ಯಾಸ ದೊಡ್ಡದಲ್ಲ' ಎಂದು ಸಿದ್ದರಾಮಯ್ಯ ಕಿವಿಮಾತು ಹೇಳಿದರು.

'ಹರೀಶ್ ಆದರ್ಶ ವ್ಯಕ್ತಿ'

'ಹರೀಶ್ ಆದರ್ಶ ವ್ಯಕ್ತಿ'

'ಹರೀಶ್ ಅಪಘಾತ ಅಮಾನುಷವಾದದ್ದು. ಶರೀರ ಎರಡು ತುಂಡಾದರೂ ದೇಹದ ಅಂಗಾಂಗಗಳನ್ನು ಮತ್ತೊಬ್ಬರಿಗೆ ದಾನ ಮಾಡುವ ದೊಡ್ಡತನ ಪ್ರದರ್ಶಿಸಿದ್ದಾರೆ. ಅವರು ತಮ್ಮ ಕಣ್ಣುಗಳನ್ನು ದಾನ ಮಾಡಿದ್ದಾರೆ. ಸಮಾಜಕ್ಕೆ ಅವರು ಆದರ್ಶ ವ್ಯಕ್ತಿಯಾಗಿ ನಿಂತಿದ್ದಾರೆ, ಅವರ ಕುಟುಂಬಕ್ಕೆ ಅಗತ್ಯ ಸಹಾಯ ನೀಡಲಾಗುವುದು' ಎಂದು ಸಿದ್ದರಾಮಯ್ಯ ಭರವಸೆ ನೀಡಿದರು.

'ಸತ್ತ ಮೇಲೂ ನನ್ನ ಮಗ ಜೀವಂತ'

'ಸತ್ತ ಮೇಲೂ ನನ್ನ ಮಗ ಜೀವಂತ'

'ರಸ್ತೆ ಅಪಘಾತ ಸಂದರ್ಭದಲ್ಲಿ ಚಿಕಿತ್ಸೆ ನೀಡುವ ಯೋಜನೆಗೆ ನನ್ನ ಮಗನ ಹೆಸರಿಡಲಾಗಿದೆ. ಸತ್ತ ಮೇಲೂ ನನ್ನ ಮಗ ಜೀವಂತವಾಗಿದ್ದಾನೆ' ಎಂದು ಹರೀಶ್ ತಾಯಿ ಗೀತಾ ಸಂತಸ ವ್ಯಕ್ತಪಡಿಸಿದರು. ರಸ್ತೆ ಅಪಘಾತದಲ್ಲಿ ದೇಹ ತುಂಡಾಗಿ ಮೃತಪಟ್ಟ ನನ್ನ ಮಗನ ಹೆಸರನ್ನು ಯೋಜನೆಗೆ ನಾಮಕರಣ ಮಾಡಿದ್ದಕ್ಕೆ ಮುಖ್ಯಮಂತ್ರಿಗಳಿಗೆ ಕೃತಜ್ಞತೆ ಸಲ್ಲಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Karnataka Chief Minister Siddaramaiah on March 8, 2016 launched Mukhyamantri Santwana Harish Yojana in Vidhana Soudha, Bengaluru.
Please Wait while comments are loading...