ರಕ್ಷಣಾ ವಲಯಕ್ಕೆ ಪೂರಕವಾದ 'ಏರೋಸ್ಪೇಸ್ ಮತ್ತು ಡಿಫೆನ್ಸ್ ನೀತಿ 2022-27' ಜಾರಿ: ಸುಧಾಕರ್
ಬೆಂಗಳೂರು, ನವೆಂಬರ್ 14: ಕರ್ನಾಟಕ ರಾಜ್ಯ ಸರ್ಕಾರ ಜಾರಿಗೊಳಿಸುತ್ತಿರುವ 'ಏರೋಸ್ಪೇಸ್ ಮತ್ತು ಡಿಫೆನ್ಸ್ ನೀತಿ 2022-2027' ಯು ರಕ್ಷಣಾ ವಲಯದಲ್ಲಿ ಸ್ವದೇಶಿ ಉತ್ಪನ್ನಗಳನ್ನು ಹೆಚ್ಚಿಸಿ ಆತ್ಮನಿರ್ಭರತೆ ಸಾಧಿಸಲು ನೆರವಾಗಲಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ಬೆಂಗಳೂರಿನಲ್ಲಿ ಆರ್ಮಿ ಡಿಸೈನ್ ಬ್ಯೂರೋದ ರೀಜಿನಲ್ ಟೆಕ್ನಾಲಜಿ ನೋಡ್ (ಆರ್‌ಟಿಎನ್) ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಸಚಿವರು, ಭಾರತ ದೇಶ ವೈಮಾನಿಕ ಕ್ಷೇತ್ರದಲ್ಲಿ ಹೆಚ್ಚು ಪ್ರಗತಿ ಸಾಧಿಸಿದೆ. ಇತ್ತೀಚೆಗೆ ಕೊಚ್ಚಿಯಲ್ಲಿ ಸ್ವದೇಶಿ ನಿರ್ಮಿತ ಐಎನ್‌ಎಸ್ ವಿಕ್ರಾಂತ್ ಮೂಲಕ ರಕ್ಷಣಾ ಕ್ಷೇತ್ರದ ಸಾಮರ್ಥ್ಯ ಹೆಚ್ಚಾಗಿದೆ. ಕರ್ನಾಟಕವು ಎಲ್ಲಾ ಕ್ಷೇತ್ರಗಳಲ್ಲಿ ಹೂಡಿಕೆದಾರರ ಆದ್ಯತೆಯ ಕೇಂದ್ರವಾಗಿದೆ ಎಂದರು.
ಬೆಂಗಳೂರಿನಲ್ಲಿ ಬಹಳ ಹಿಂದೆಯೇ ಎಚ್‌ಎಎಲ್ ಸಂಸ್ಥೆ ಆರಂಭವಾಗಿದ್ದರಿಂದ ವಿಮಾನಯಾನ ಕ್ಷೇತ್ರದಲ್ಲಿ ಕರ್ನಾಟಕ ಮುಂಚೂಣಿ ಸಾಧಿಸಿತು. ಏರೋಸ್ಪೇಸ್ ಮತ್ತು ಡಿಫೆನ್ಸ್ ನೀತಿ ತಂದ ಮೊದಲ ರಾಜ್ಯವೂ ಕರ್ನಾಟಕವೇ ಆಗಿದೆ. ಹೀಗಾಗಿ ವೈಮಾನಿಕ ಕ್ಷೇತ್ರದಲ್ಲಿ ನಾವು ಮುಂಚೂಣಿ ಸಾಧಿಸಿದ್ದೇವೆ ಎಂದು ತಿಳಿಸಿದರು.

ಕರ್ನಾಟಕದಲ್ಲಿ ಶೇ.67ರಷ್ಟು ಹೆಲಿಕಾಪ್ಟರ್, ವಿಮಾನ ತಯಾರು
ದೇಶದ ಶೇ.25 ರಷ್ಟು ವಿಮಾನ ಹಾಗೂ ಅಂತರಿಕ್ಷ ನೌಕೆಯ ತಯಾರಿಕಾ ಉದ್ಯಮಗಳು ಕರ್ನಾಟಕದಲ್ಲೇ ಇವೆ. ಈ ಕ್ಷೇತ್ರದಲ್ಲಿ ರಾಜ್ಯವು ಪ್ರಾಬಲ್ಯವನ್ನು ಹೊಂದಿದೆ. ರಕ್ಷಣಾ ಕ್ಷೇತ್ರಕ್ಕೆ ಪೂರೈಕೆಯಾಗುವ ಹೆಲಿಕಾಪ್ಟರ್ ಮತ್ತು ವಿಮಾನಗಳ ಫೈಕಿ ಶೇ.67 ರಷ್ಟು ಕರ್ನಾಟಕದಲ್ಲೇ ತಯಾರಿಸಲಾಗುತ್ತಿದೆ. ರಾಜ್ಯ ಸರ್ಕಾರ ಏರೋಸ್ಪೇಸ್ ಮತ್ತು ಡಿಫೆನ್ಸ್ ನೀತಿಯನ್ನು ಜಾರಿ ಮಾಡಲಿದೆ. ಇದು ಹೊಸ ತಂತ್ರಜ್ಞಾನಗಳೊಂದಿಗೆ ಸ್ವದೇಶಿ ಉತ್ಪನ್ನಗಳ ತಯಾರಿಕೆಗೆ ಸಂಪೂರ್ಣ ಉತ್ತೇಜನ ನೀಡಲಿದೆ ಎಂದರು.

5 ವರ್ಷದಲ್ಲಿ 50,00 ಕೋಟಿ ರೂ. ಹೂಡಿಕೆ ನಿರೀಕ್ಷೆ
ಪ್ರಧಾನಿ ನರೇಂದ್ರ ಮೋದಿ ಅವರ ಆತ್ಮನಿರ್ಭರ ಪರಿಕಲ್ಪನೆಯಡಿ 'ಮೇಕ್ ಇನ್ ಇಂಡಿಯಾ' ಹಾಗೂ 'ಸ್ಕಿಲ್ ಇಂಡಿಯಾ' ಯೋಜನೆ ನೀಡಿದ್ದಾರೆ. ಈಗ ಹೊಸ 'ಏರೋಸ್ಪೇಸ್ ಮತ್ತು ಡಿಫೆನ್ಸ್ ನೀತಿ 2022-2027' ಜಾರಿಯಿಂದ ಕರ್ನಾಟಕ ರಾಜ್ಯದಲ್ಲಿ 4ರಿಂದ 5 ವರ್ಷಗಳಲ್ಲಿ 45ರಿಂದ 50 ಸಾವಿರ ಕೋಟಿ ರೂ. ಹೂಡಿಕೆ ನಿರೀಕ್ಷಿಸಬದಾಗಿದೆ. ಇದರಿಂದ ಹೆಚ್ಚು ಉದ್ಯೋಗ ಸೃಷ್ಟಿಯ ಜೊತೆಗೆ ಸಂಶೋಧನೆ ಮತ್ತು ಅಭಿವೃದ್ಧಿಯ ಬಲವರ್ಧನೆಯಾಗಲಿದೆ. ಇನ್ನೂ ಈ ನೀತಿಯಿಂದ ಉದ್ಯಮ ನಡೆಸುವ ಪ್ರಕ್ರಿಯೆಗಳು (ಈಸ್ ಆಫ್ ಡೂಯಿಂಗ್ ಬಿಸ್‌ನೆಸ್) ಸರಳವಾಗಲಿದೆ ಎಂದು ಅವರು ವಿವರಿಸಿದರು.
ಕೋವಿಡ್ ಸಾಂಕ್ರಾಮಿಕದ ನಂತರ ಆರ್ಥಿಕತೆಯ ಪ್ರಗತಿಗೆ ಜಾಗತಿಕ ಹೂಡಿಕೆದಾರರ ಸಮಾವೇಶವನ್ನು ರಾಜ್ಯ ಸರ್ಕಾರ ಆಯೋಜಿಸಿತ್ತು. ಈ ವೇಳೆ 9.5 ಲಕ್ಷ ಕೋಟಿ ಹೂಡಿಕೆಗೆ ಒಪ್ಪಂದಗಳು ಏರ್ಪಟ್ಟಿವೆ. ಹೂಡಿಕೆಯ ವಿಚಾರದಲ್ಲಿ ಈ ಮಟ್ಟಿಗೆ ಉದ್ಯಮಿಗಳ ವಿಶ್ವಾಸವನ್ನು ಕರ್ನಾಟಕ ಗಳಿಸಿರುವುದು ಹೆಮ್ಮೆಯ ಸಂಗತಿ ಎಂದರು.

ಆತ್ಮನಿರ್ಭರ ಸಾಧಿಸಲು ಸಾಧ್ಯವಾಗುತ್ತದೆ
ಭಾರತೀಯ ಸೇನೆಯ ಯಾವುದೇ ಕಾರ್ಯಕ್ರಮ, ಯೋಜನೆಗಳಿಗೆ ಕರ್ನಾಟಕ ಸರ್ಕಾರ ಸಂಪೂರ್ಣ ಸಹಕಾರ ನೀಡಲಿದೆ. ಬೆಂಗಳೂರಿನಲ್ಲಿ ಭಾರತೀಯ ಸೇನೆಯ ರೀಜಿನಲ್ ಟೆಕ್ನಾಲಜಿ ನೋಡ್ ಸ್ಥಾಪನೆ ಮಾಡಿರುವ ಭಾರತೀಯ ಸೇನೆಯ ನಡೆ ಅತ್ಯಂತ ಸ್ವಾಗತಾರ್ಹವಾಗಿದೆ. ಇದು ನವೋದ್ಯಮ, ಎಂಎಸ್‌ಎಂಇ ಮೊದಲಾದವುಗಳಿಗೆ ಹೊಸ ಅವಕಾಶ ನೀಡಲಿದೆ.
ರಾಜ್ಯ ಸರ್ಕಾರವು 'ಏರೋಸ್ಪೇಸ್ ಮತ್ತು ಡಿಫೆನ್ಸ್ ನೀತಿ 2022-2027ʼ ಜಾರಿಗೊಳಿಸುತ್ತಿರುವ ಕಾಲದಲ್ಲೇ ಆರ್‌ಟಿಎನ್ ಆರಂಭವಾಗುತ್ತಿದೆ. ರಕ್ಷಣಾ ವಲಯದ ಆಧುನೀಕರಣ, ರಕ್ಷಣಾ ಕ್ಷೇತ್ರದಲ್ಲಿ ಆಮದು ಇಳಿಕೆ ಹಾಗೂ ರಫ್ತು ಉತ್ತೇಜನದಲ್ಲಿ ಕರ್ನಾಟಕ ಮುಖ್ಯ ಪಾತ್ರ ವಹಿಸಲು ಈ ಕ್ರಮಗಳು ಕಾರಣವಾಗಲಿದೆ. ಈ ಮೂಲಕ ಆತ್ಮನಿರ್ಭರ ಭಾರತವನ್ನು ಸಾಧಿಸಬಹುದಾಗಿದೆ ಎಂದು ಸುಧಾಕರ್ ಹೇಳಿದರು.

ಉದ್ಯಮಿ ಕೇಂದ್ರ
ಕನ್ನಡಿಗರೇ ಆದ ಲೆಫ್ಟಿನೆಂಟ್ ಜನರಲ್ ಬಿ.ಎಸ್.ರಾಜು ಹಾಗೂ ಲೆಫ್ಟಿನೆಂಟ್ ಕರ್ನಲ್ ಬಿ.ಕೆ.ರೆಪ್ಸ್‌ವಾಲ್ ಅವರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಆರ್‌ಟಿಎನ್ ಆರಂಭವಾಗಿದೆ. ಬೆಂಗಳೂರು ತಂತ್ರಜ್ಞಾನದ ರಾಜಧಾನಿ, ನವೋದ್ಯಮಗಳ ಕೇಂದ್ರವಾಗಿದೆ. ಇಲ್ಲಿ ಆರ್‌ಟಿಎನ್‌ಗೆ ಪೂರಕ ವಾತಾವರಣ ಇದೆ. ಈ ಕೇಂದ್ರದಿಂದ ಪ್ರಧಾನಿ ನರೇಂದ್ರ ಮೋದಿಯವರ ಆತ್ಮನಿರ್ಭರ ಭಾರತ ಪರಿಕಲ್ಪನೆ ಸಾಕಾರವಾಗಲಿದೆ.
ಸೇನೆಗೆ ಬೇಕಾದ ಎಲ್ಲ ತಂತ್ರಜ್ಞಾನ, ಉಪಕರಣಗಳನ್ನು ಭಾರತೀಯರೇ ಭಾರತದಲ್ಲೇ ಅದರಲ್ಲೂ ಬೆಂಗಳೂರಿನಲ್ಲಿ ತಯಾರಿಸುವ ಕೆಲಸವನ್ನು ಸೇನೆ ಮಾಡುತ್ತಿದೆ. ಇದಕ್ಕಾಗಿ ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪರವಾಗಿ ಸಚಿವರು ಅಭಿನಂದನೆ ತಿಳಿಸಿದರು.












Click it and Unblock the Notifications