7th Pay Commission; ಸರ್ಕಾರಿ ನೌಕರರು ಮುಷ್ಕರ ನಡೆಸಲು ಇರುವ ನಿಯಮಗಳು
ಬೆಂಗಳೂರು, ಜುಲೈ 16: ಕೆ. ಸುಧಾಕರ್ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗದ ವರದಿ ಶಿಫಾರಸು ಜಾರಿ ಕರ್ನಾಟಕ ಸರ್ಕಾರಿ ನೌಕರರ ಪ್ರಮುಖ ಬೇಡಿಕೆಯಾಗಿದೆ. ಈ ಕುರಿತು ಸಚಿವ ಸಂಪುಟ ಸಭೆಯಲ್ಲಿ ಕೇವಲ ತೀರ್ಮಾನ ಕೈಗೊಂಡರೆ ಸಾಲದು, ಆದೇಶವನ್ನು ಹೊರಡಿಸಬೇಕು ಎಂದು ನೌಕರರು ಒತ್ತಾಯಿಸುತ್ತಿದ್ದಾರೆ.
ರಾಜ್ಯದ ಕಾಂಗ್ರೆಸ್ ಸರ್ಕಾರ 7ನೇ ವೇತನ ಆಯೋಗದ ವರದಿ ಜಾರಿಗೊಳಿಸಲು ವಿಳಂಬ ಮಾಡುತ್ತಿರುವುದು ನೌಕರರ ಅಸಮಾಧಾನಕ್ಕೆ ಕಾರಣವಾಗಿದೆ. ಈಗಾಗಲೇ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಅನಿರ್ಧಿಷ್ಟಾವಧಿ ಮುಷ್ಕರದ ಕರೆಯನ್ನು ಕೊಟ್ಟಿದೆ. ಆಗಸ್ಟ್ 1ರಿಂದ ವೇತನ ಆಯೋಗದ ಶಿಫಾರಸು ಜಾರಿಯಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ ಮುಷ್ಕರದ ಕರೆಯನ್ನು ಇನ್ನೂ ವಾಪಸ್ ಪಡೆದಿಲ್ಲ.

ರಾಜ್ಯ ಸರ್ಕಾರಿ ವರದಿ ಶಿಫಾರಸು ಜಾರಿ ಕುರಿತು ಆದೇಶ ಹೊರಡಿಸದಿದ್ದರೆ, ಎನ್‌ಪಿಎಸ್ ರದ್ದು, ಆರೋಗ್ಯ ಸಂಜೀವಿನಿ ಯೋಜನೆ ಬಗ್ಗೆ ತೀರ್ಮಾನ ಕೈಗೊಳ್ಳದಿದ್ದರೆ ಜುಲೈ ಅಂತ್ಯ ಅಥವ ಆಗಸ್ಟ್‌ನಲ್ಲಿ ಸರ್ಕಾರಿ ನೌಕರರು ಮುಷ್ಕರ ನಡೆಸಲಿದ್ದಾರೆ. ಜುಲೈ 23ರಂದು ತಮ್ಮ ಹೋರಾಟದ ಕುರಿತು ಚರ್ಚಿಸಲು ಸರ್ಕಾರಿ ನೌಕರರು ಮಹತ್ವದ ಸಭೆಯನ್ನು ಸಹ ಕರೆದಿದ್ದಾರೆ.
ಸರ್ಕಾರಿ ನೌಕರರು ಸುಲಭವಾಗಿ ಮುಷ್ಕರ ನಡೆಸಬಹುದೇ?. ಎಸ್ಮಾ ಸೇರಿದಂತೆ ಯಾವ ನಿಯಮಗಳು ಅವರಿಗೆ ಅಡ್ಡಿ ಬರುತ್ತವೆ?, ನಿಯಮಗಳು ಹೇಳುವುದೇನು? ಎಂಬ ಮಾಹಿತಿ ಇಲ್ಲಿದೆ. ಸರ್ಕಾರಿ ನೌಕರರ ನೇಮಕಾತಿ ನಿಯಮಗಳಲ್ಲಿ ಈ ಕುರಿತು ವಿವರಣೆ ಇದೆ.
ನಿಯಮಗಳ ವಿವರಗಳು: ಬಹಿರಂಗ ಸಭೆ ಮತ್ತು ಮುಷ್ಕರಗಳು ಎಂಬ ನಿಯಮಗಳ ಅಡಿಯಲ್ಲಿ ಮುಷ್ಕರದ ಕುರಿತು ವಿವರಿಸಲಾಗಿದೆ. ಯಾರೇ ಸರ್ಕಾರಿ ನೌಕರನು ಭಾರತದ ಸಾರ್ವಭೌಮತ್ವ ಮತ್ತು ಅಖಂಡತೆಯ, ದೇಶದ ಭದ್ರತೆಯ, ವಿದೇಶಿ ರಾಷ್ಟ್ರಗಳೊಂದಿಗಿನ ಸ್ನೇಹಯುತ ಸಂಬಂಧದ ಹಿತದೃಷ್ಟಿಗೆ, ಸಾರ್ವಜನಿಕ ಸುವ್ಯವಸ್ಥೆಗೆ, ಸಭ್ಯತೆಗೆ ಅಥವಾ ನೈತಿಕತೆಗೆ ಧಕ್ಕೆಯುಂಟು ಮಾಡುವ ಅಥವಾ ನ್ಯಾಯಾಲಯ ನಿಂದನೆಗೆ, ಮಾನಹಾನಿಗೆ ಅಥವಾ ಅಪರಾಧಕ್ಕೆ ಪ್ರಚೋದನೆ ನೀಡುವುದನ್ನು ಒಳಗೊಂಡಿರುವ ಯಾವುದೇ ಪ್ರದರ್ಶನದಲ್ಲಿ ತನ್ನನ್ನು ತೊಡಗಿಸಿಕೊಳ್ಳತಕ್ಕದ್ದಲ್ಲ ಅಥವಾ ಭಾಗವಹಿಸತಕ್ಕದ್ದಲ್ಲ ಎಂದು ಹೇಳಿದೆ.
ಎಷ್ಟೇ ಸಂಖ್ಯೆಯ ಸರ್ಕಾರಿ ನೌಕರರೊಡನೆ ಸೇರಿ ಯಾವುದೇ ಬಗೆಯ ಮುಷ್ಕರಕ್ಕೆ ತೊಡಗತಕ್ಕದ್ದಲ್ಲ ಅಥವಾ ಯಾವುದೇ ರೀತಿಯಲ್ಲಿ ಅದಕ್ಕೆ ಪ್ರೇರೇಪಣೆ ಮಾಡತಕ್ಕದ್ದಲ್ಲ. ಪ್ರಚೋದನೆ ಮಾಡತಕ್ಕದ್ದಲ್ಲ ಅಥವಾ ದುಷ್ಪ್ರೇರಣೆ ಮಾಡತಕ್ಕದ್ದಲ್ಲ ಎಂದು ತಿಳಿಸಿದೆ.
ಈ ನಿಯಮದ ಉದ್ದೇಶಗಳಿಗಾಗಿ 'ಮುಷ್ಕರ' ಎಂದರೆ (ಕರ್ತವ್ಯದಿಂದ ಅನಧಿಕೃತ ಗೈರುಹಾಜರಾಗುವುದೂ ಸೇರಿದಂತೆ) ಸರ್ಕಾರಿ ನೌಕರರ ಒಂದು ಗುಂಪು ಒಟ್ಟಾಗಿ ಸೇರಿಕೊಂಡು ಕೆಲಸ ಮಾಡುವುದನ್ನು ನಿಲ್ಲಿಸುವುದು ಅಥವಾ ನಿಧಾನಗತಿಯಲ್ಲಿ ಕೆಲಸ ಮಾಡುವುದು ಅಥವಾ ಎಷ್ಟೇ ಸಂಖ್ಯೆಯ ಸರ್ಕಾರಿ ನೌಕರರು ಒಟ್ಟಾಗಿ ಸೇರಿ ಅಥವಾ ತಮ್ಮ ತಮ್ಮಲ್ಲೇ ಮಾತನಾಡಿಕೊಂಡು ಕೆಲಸ ಮಾಡಲು ನಿರಾಕರಿಸುವುದು ಎಂದು ಅರ್ಥ ಎಂದು ಸ್ಪಷ್ಟಪಡಿಸಲಾಗಿದೆ.
ಇತ್ತೀಚೆಗೆ ಚಿಕ್ಕಮಗಳೂರಿನಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಕಾರ್ಯಕಾರಣಿ ಸಭೆ ನಡೆಯಿತು. ಸಭೆಯಲ್ಲಿ ಸಂಘದ ಅಧ್ಯಕ್ಷ ಸಿ. ಎಸ್. ಷಡಾಕ್ಷರಿ ಮಾತನಾಡಿ, "7ನೇ ರಾಜ್ಯ ವೇತನ ಆಯೋಗದ ವರದಿ ಶಿಫಾರಸು ಜಾರಿ, ಹಳೆ ಪಿಂಚಣಿ ಯೋಜನೆ ಮುಂದುವರಿಕೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಕರ್ತವ್ಯಕ್ಕೆ ಗೈರಾಗುವ ಮೂಲಕ ಅನಿರ್ಧಿಷ್ಟಾವಧಿ ಮುಷ್ಕರ ನಡೆಸಲಾಗುತ್ತದೆ" ಎಂದು ಹೇಳಿದ್ದರು.
"ರಾಜ್ಯ ಸರ್ಕಾರ ಬೇಡಿಕೆಗೆ ಸ್ಪಂದಿಸದಿದ್ದಲ್ಲಿ ಅನಿರ್ಧಿಷ್ಟಾವಧಿ ಮುಷ್ಕರ ನಡೆಸಲಾಗುತ್ತದೆ. ಕರ್ತವ್ಯಕ್ಕೆ ಗೈರಾಗಿ ಮುಷ್ಕರ ನಡೆಸಲು ತೀರ್ಮಾನ ಕೈಗೊಳ್ಳಲಾಗುತ್ತದೆ. ಅಮಾನತು, ಎಸ್ಮಾ ಜಾರಿ ಸೇರಿದಂತೆ ಯಾವುದೇ ಒತ್ತಡ, ಬೆದರಿಕೆಗಳಿಗೆ ಬಗ್ಗದೆ ಕರ್ತವ್ಯ ಬಹಿಷ್ಕಾರ ಮಾಡಿ ಚಳವಳಿ ನಡೆಸಬೇಕು" ಎಂದು ಕರೆ ನೀಡಿದ್ದರು.
ಕರ್ನಾಟಕದ ಸರ್ಕಾರಿ ನೌಕರರು 7ನೇ ವೇತನ ಆಯೋಗದ ವರದಿ ಜಾರಿ, ಹಳೆ ಪಿಂಚಣಿ ಯೋಜನೆ ಮುಂದುವರೆಸುವುದು, ಆರೋಗ್ಯ ಸಂಜೀವಿನಿ ಯೋಜನೆ ಜಾರಿ ಎಂಬ ಮೂರು ಪ್ರಮುಖ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಮಾರ್ಚ್ 16 ರಂದು ಕೆ. ಸುಧಾಕರ್ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗ ವರದಿ ಸ್ವೀಕರಿಸಿದ್ದಾರೆ. ಆಯೋಗದ ತನ್ನ ವರದಿಯಲ್ಲಿ ನೌಕರರ ಮೂಲ ವೇತನದ ಶೇಕಡ 27.5ರಷ್ಟು ಹೆಚ್ಚಳ ಮಾಡಲು ಶಿಫಾರಸು ಮಾಡಿದೆ. ಆಗಸ್ಟ್ 1, 2024ರಿಂದ ಈ ಶಿಫಾರಸು ಜಾರಿಯಾಗಲಿದೆ.
ಇದರಿಂದ ಸರ್ಕಾರಕ್ಕೆ ಆಗುವ ಆರ್ಥಿಕ ಹೊರೆಯನ್ನು ಲೆಕ್ಕಚಾರ ಹಾಕಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶಿಫಾರಸು ಜಾರಿ ಕುರಿತು ಸೋಮವಾರದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಿದ್ದಾರೆ. ಸರ್ಕಾರಿ ನೌಕರರು ಮುಷ್ಕರ ವಾಪಸ್ ಪಡೆಯುವ ಕುರಿತು ಶೀಘ್ರವೇ ತೀರ್ಮಾನ ಮಾಡಲಿದ್ದಾರೆಯೇ? ಕಾದು ನೋಡಬೇಕಿದೆ.











Click it and Unblock the Notifications