Rain News: ಮತ್ತೆ ಮಳೆ ಅಬ್ಬರ ಶುರು, ಕರ್ನಾಟಕದ ಡ್ಯಾಂಗಳ ಕಥೆ ಏನು?
ಮಳೆ ಕೈಕೊಟ್ಟು ಕರ್ನಾಟಕ ಚಿಂತೆಯಲ್ಲಿ ಮುಳುಗಿತ್ತು, ರಾಜ್ಯದ ರೈತರು ಮಳೆಯೇ ಇಲ್ಲ ಎಂಬ ಚಿಂತೆಯಲ್ಲಿ ಕಣ್ಣೀರು ಹಾಕುತ್ತಿದ್ದರು. ಆದ್ರೆ ಇದೀಗ ದಿಢೀರ್ ಭಾರಿ ಪ್ರಮಾಣದಲ್ಲಿ ಮಳೆ ಸುರಿಯಲು ಆರಂಭಿಸಿದೆ. ಇವತ್ತು ಮಾತ್ರವಲ್ಲ ಮುಂದಿನ 1 ವಾರ ಹೀಗೆ ಭರ್ಜರಿ ಮಳೆ ಸುರಿಯುವ ಮುನ್ಸೂಚನೆ ಸಿಕ್ಕಿದೆ. ಹಾಗಾದರೆ ರಾಜ್ಯದ ಡ್ಯಾಂಗಳ ಕಥೆ ಏನಾಗುತ್ತೆ? ಜಲಾಶಯಗಳು ತುಂಬುಲಿವೆಯಾ? ಸಂಪೂರ್ಣ ಮಾಹಿತಿ ಇಲ್ಲಿದೆ.
ಮುಂಗಾರು ಮಳೆ ಈ ವರ್ಷ ಎಂಟ್ರಿ ಕೊಟ್ಟಿದ್ದೇ ತಡವಾಗಿ. ಆದ್ರೆ ಜುಲೈ ತಿಂಗಳಲ್ಲಿ ಭಾರಿ ಮಳೆ ಬಿದ್ದ ಪರಿಣಾಮ ಪರಿಸ್ಥಿತಿ ಒಂದಷ್ಟು ಸುಧಾರಿಸಿತ್ತು. ಇನ್ನೇನು ಒಣಗಿ ಹೋಗುತ್ತಿದ್ದ ರಾಜ್ಯದ ಡ್ಯಾಂಗಳಿಗೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಬಂದಿತ್ತು. ಹೀಗಾಗಿ ಕೆಆರ್‌ಎಸ್ ಸೇರಿದಂತೆ ಕಾವೇರಿ ಕಣಿವೆಯ ಜಲಾಶಯಗಳು ಹಾಗೂ ಉತ್ತರ ಕರ್ನಾಟಕದ ಡ್ಯಾಂಗಳಿಗೆ ನೀರು ಹರಿದು ಬಂತು. ಹೀಗೆ ಒಂದಷ್ಟು ನೆಮ್ಮದಿ ನೀಡಿದ ಮಳೆರಾಯ ಆಗಸ್ಟ್ ತಿಂಗಳಲ್ಲಿ ಮತ್ತೆ ಕಣ್ಣಿಗೆ ಕಾಣದಂತೆ ಮಾಯವಾಗಿದ್ದ. ಹೀಗಾಗಿ ಜನರು & ರೈತರು ಭೀತಿಯಲ್ಲಿ ದಿನ ದೂಡುವಂತಾಗಿತ್ತು. ಈಗ ಕನ್ನಡಿಗರಿಗೆ ಭರ್ಜರಿ ಸುದ್ದಿ ನೀಡಿದ್ದಾನೆ ಮಳೆರಾಯ.

ರಾಜ್ಯದ ಜಲಾಶಯಗಳಲ್ಲಿ ಏರುತ್ತೆ ನೀರು!
ನಿನ್ನೆಯಿಂದ ಮೆಲ್ಲಗೆ ಶುರುವಾಗಿದ್ದ ಮಳೆ ಆರ್ಭಟ ಇಂದಿನಿಂದ ಬಲು ಜೋರಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಕಾವೇರಿ ಕಣಿವೆ ಸೇರಿದಂತೆ ಉತ್ತರ ಕರ್ನಾಟಕದ ಬಹುತೇಕ ಹಳ್ಳ, ಕೊಳ್ಳಗಳಲ್ಲಿ ಭಾರಿ ಪ್ರಮಾಣದ ನೀರು ಹರಿಯುತ್ತಿದೆ. ಮಳೆ ಕೊರತೆಯಿಂದ ಬರದ ಛಾಯೆ ಎದುರಿಸಿದ್ದ ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕದ ವಿವಿಧೆಡೆ ನಿನ್ನೆಯಿಂದ ಭಾರಿ ಮಳೆ ಸುರಿಯುತ್ತಿದೆ. ಹೀಗಾಗಿ ಕನ್ನಡ ನಾಡಿನ ರೈತರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದು ಕೃಷಿಗೆ ಮತ್ತು ಕುಡಿಯುವ ನೀರಿಗೆ ಬೇಕಾದಷ್ಟು ನೀರು ಕೆರೆ, ಹಳ್ಳಗಳಲ್ಲಿ ಸಂಗ್ರಹವಾಗಿದೆ. ಹಾಗಾದರೆ ಕಾವೇರಿ ಕೊಳ್ಳದ ಮುಂದಿನ ಪರಿಸ್ಥಿತಿ ಏನು? ಬನ್ನಿ ತಿಳಿಯೋಣ.
ಸುಳಿಗಾಳಿ ತರಲಿದೆ ಭಾರಿ ಮಳೆ!
ರಾಜ್ಯ ರಾಜಧಾನಿ ಬೆಂಗಳೂರು ಸೇರಿ ಇಡೀ ಕರ್ನಾಟಕದಾದ್ಯಂತ ಬರಗಾಲ ಛಾಯೆ ಆವರಿಸಿದ ಬೆನ್ನಲ್ಲೇ ಹವಾಮಾನದಲ್ಲಿ ದಿಢೀರ್ ಉಂಟಾಗಿದೆ. ಹೀಗಾಗಿ ಮುಂದಿನ ಕೆಲ ದಿನ ರಾಜ್ಯದಲ್ಲಿ ಉತ್ತಮ ಮಳೆ ಬೀಳಲಿದೆ. ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು ಹೀಗೆ ದಿಢೀರ್ ಮಳೆ ಶುರುವಾಗಿದೆ. ವಾಯುಭಾರ ಕುಸಿತದ ಸ್ಥಳದಲ್ಲಿ ಸಮುದ್ರ ಮೇಲ್ಮೈನಲ್ಲಿ 7.6 ಕೀಲೋ ಮಿಟರ್ ಎತ್ತರದಲ್ಲಿ ಸುಳಿಗಾಳಿ ಸೃಷ್ಟಿಯಾಗಿದೆ. ಸುಳಿಗಾಳಿ ದಕ್ಷಿಣಕ್ಕೆ ಓರೆಯಾಗಿದ್ದು ಅದೇ ಮಾರ್ಗವಾಗಿ ದಟ್ಟ ಗಾಳಿ ಬೀಸುವ ಸಾಧ್ಯತೆ ಇದೆ. ಹೀಗಾಗಿಯೇ ಕರ್ನಾಟಕದ ಉತ್ತರ ಒಳನಾಡಿನ ಜಿಲ್ಲೆಗಳಿಗೆ ಭಾರಿ ಮಳೆ ಬೀಳಲಿದೆ. ಕರಾವಳಿ ಜಿಲ್ಲೆಗೂ ಭಾರಿ ಮಳೆ ಬೀಳಲಿದೆ.

ಕರ್ನಾಟಕದ ಯಾವ ಜಿಲ್ಲೆಯಲ್ಲಿ ಮಳೆ?
ವಾಯುಭಾರ ಕುಸಿದ ಕಾರಣ ಕರ್ನಾಟಕದ ಉತ್ತರ ಒಳನಾಡು ಜಿಲ್ಲೆಗಳಲ್ಲಿ ಮಳೆ ಹೆಚ್ಚಿರುತ್ತೆ. ಈ ಕಾರಣಕ್ಕೆ ಸೆಪ್ಟಂಬರ್ 6 ಮತ್ತು 7ರಂದು ಬೀದರ್, ಕಲಬುರಗಿ, ಕೊಪ್ಪಳ, ರಾಯಚೂರು ಜಿಲ್ಲೆಗಳಿಗೆ ಅತ್ಯಧಿಕ ಮಳೆ ಬರಲಿದ್ದು, ದಕ್ಷಿಣದ ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ನಗರ, ಬೆಂಗಳೂರು ಗ್ರಾ., ಮಂಡ್ಯ, ರಾಮನಗರ, ಮೈಸೂರು, ಚಾಮರಾಜನಗರ ಹಾಗೂ ಹಾಸನ, ಚಿಕ್ಕಮಗಳೂರು, ತುಮಕೂರು, ಶಿವಮೊಗ್ಗ, ಚಿತ್ರದುರ್ಗ, ವಿಜಯನಗರ ಸೇರಿ ಬಳ್ಳಾರಿ ಜಿಲ್ಲೆಗಳಲ್ಲೂ ಮಳೆ ಬೀಳಲಿದೆ.
ಕಾವೇರಿ ನದಿಯಲ್ಲಿ ಭಾರಿ ನೀರು?
ಹೌದು ಮುಂದಿನ ಕೆಲವು ದಿನಗಳ ಕಾಲ ಕಾವೇರಿ ನದಿ ಕಣಿವೆಯಲ್ಲಿ ಭಾರಿ ಪ್ರಮಾಣದಲ್ಲಿ ಮಳೆ ಬೀಳುವ ನಿರೀಕ್ಷೆ ಇದೆ. ಹೀಗಾಗಿ ಕೆಆರ್‌ಎಸ್ ಡ್ಯಾಂ ಸೇರಿ ಕಾವೇರಿ ಕಣಿವೆ ಭಾಗದ ಜಲಾಶಯಗಳಿಗೆ ಭಾರಿ ನೀರು ಬರುವ ನಿರೀಕ್ಷೆ ಇದೆ. ತಮಿಳುನಾಡು ಸರ್ಕಾರದ ಕಿರಿಕಿರಿ ನಡುವೆ ಮಳೆರಾಯ ಕರ್ನಾಟಕಕ್ಕೆ ಒಂದಷ್ಟು ರಿಲೀಫ್ ನೀಡಿದ್ದಾನೆ. ಆದರೆ ಮುಂದೆಯೂ ತಮಿಳುನಾಡು ಯಾವ ರೀತಿ ಕಿರಿಕ್ ಶುರು ಮಾಡುತ್ತೋ ಗೊತ್ತಿಲ್ಲ. ಈಗಿನ ಪರಿಸ್ಥಿತಿಯನ್ನ ನೋಡಿದರೆ ಮತ್ತೆ ಕೆಆರ್‌ಎಸ್ ಡ್ಯಾಂ ತುಂಬುವ ನಿರೀಕ್ಷೆ ಇದೆ.












Click it and Unblock the Notifications