Breaking: ಕರ್ನಾಟಕದಲ್ಲಿ ಮಂಗಳವಾರ ನಂತರ ಮಳೆ ಕ್ಷೀಣ, ಇಂದು 12 ಜಿಲ್ಲೆಗೆ ಯೆಲ್ಲೋ ಅಲರ್ಟ್
ಬೆಂಗಳೂರು, ಡಿಸೆಂಬರ್ 12: ಹವಾಮಾನದಲ್ಲಿ ನಿರಂತರವಾಗಿ ಉಂಟಾಗುತ್ತಿರುವ ವೈಪರಿತ್ಯಗಳ ಪ್ರಭಾವದಿಂದಾಗಿ ಚಂಡಮಾರುತ ದುರ್ಬಲಗೊಂಡರು ಸಹ ಕರ್ನಾಟಕದಲ್ಲಿ ಮಂಗಳವಾರ ಬೆಳಗ್ಗೆವರೆಗೆ ಧಾರಾಕಾರ ಮಳೆ ಬರುವ ಮುನ್ಸೂಚನೆ ಇದೆ. ನಂತರ ಮಳೆ ಇಳಿಕೆ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD)ಯ ಕರ್ನಾಟಕ ಕೇಂದ್ರ ತಿಳಿಸಿದೆ.
'ಮಾಂಡೌಸ್' ದುರ್ಬಲಗೊಂಡಿರುವ ಅರಬ್ಬಿ ಸಮುದ್ರದ ಮೇಲ್ಮೈನಲ್ಲಿ 5.8 ಕಿಲೋ ಮೀಟರ್ ಎತ್ತರದಲ್ಲಿ ಮೇಲ್ಮೈ ಸುಳಿಗಾಳಿ ಎದ್ದಿದೆ. ಇದರ ಪರಿಣಾಮವಾಗಿ ಕರಾವಳಿ ಭಾಗ ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳು ಸೇರಿದಂತೆ ಒಟ್ಟು 12 ಜಿಲ್ಲೆಗೆ 'ಹಳದಿ' ಎಚ್ಚರಿಕೆ ನೀಡಲಾಗಿದೆ.
ಕರಾವಳಿ ಭಾಗದ ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಹಾಗೂ ಚಾಮರಾಜನಗರ, ಚಿಕ್ಕಮಗಳೂರು, ಕೊಡಗು, ಮೈಸೂರು, ಶಿವಮೊಗ್ಗ ಬೆಂಗಳೂರು ನಗರ ಮತ್ತು ಗ್ರಾಮಾಂತರ ಸೇರಿದಂತೆ 12 ಜಿಲ್ಲೆಗಳ ವ್ಯಾಪ್ತಿಯಲ್ಲಿ ಮಂಗಳವಾರದವರೆಗೆ ಗುಡುಗು ಸಹಿತ ಜೋರು ಮಳೆ ಅಬ್ಬರಿಸಲಿದೆ. ಹೀಗಾಗಿ ಇಷ್ಟು ಜಿಲ್ಲೆಗಳಿಗೆ ಹಳದಿ ಎಚ್ಚರಿಕೆ ಘೋಷಿಸಲಾಗಿದೆ. ಮಂಗಳವಾರದಿಂದ ಕರ್ನಾಟಕಕ್ಕೆ ಭಾರಿ ಮಳೆ ಮುನ್ಸೂಚನೆ ಆಗಲಿ, ಅಥವಾ ಹವಾಮಾನದಲ್ಲಿ ಯಾವುದೇ ಗಂಭೀರ ರೂಪದ ಬದಲಾವಣೆಗಳು ಇಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಸದ್ಯ ಅರಬ್ಬಿ ಸಮುದ್ರದಲ್ಲಿ ಎದ್ದಿರುವ ಮೇಲ್ಮೈ ಸುಳಿಗಾಳಿ ಮಂಗಳವಾರದ ಹೊತ್ತಿಗೆ ಮೂಲ ಸ್ಥಳದಿಂದ ಪಶ್ಚಿಮ ವಾಯು ದಿಕ್ಕಿನತ್ತ ಸಾಗಲಿದೆ. ಹೀಗಾಗಿ ರಾಜ್ಯಕ್ಕೆ ಯಾವುದೇ ಮಳೆ ಸಮಸ್ಯೆ ಉದ್ಭಸುವುದಿಲ್ಲ. ಅದಲ್ಲದೇ ಅಂಡಮಾನ್ ಸಮುದ್ರದ ಪ್ರದೇಶದಲ್ಲಿ ಡಿಸೆಂಬರ್ 13ರಂದು ಮತ್ತೊಂದು ಮೇಲ್ಮೈ ಸುಳಿಗಾಳಿ ಸೃಷ್ಟಿ ಸಾಧ್ಯತೆ ಇದೆ. ಇದು ತೀವ್ರಗೊಂಡಿದ್ದೇ ಆದರೆ ಆಗ ಜೋರು ಮಳೆ ಬರಬಹುದು. ಅಲ್ಲಿಯವರೆಗೆ ಮಳೆ ಭೀತಿ ದೂರಾಗಲಿದೆ.
ಹಗುರದಿಂದ ಸಾಧಾರಣ ಮಳೆ ನಿರೀಕ್ಷೆ
ಹಳದಿ ಎಚ್ಚರಿಕೆಯ ಹೊರತಾದ ಜಿಲ್ಲೆಗಳಲ್ಲಿ ಡಿಸೆಂಬರ್ 14ರವರೆಗೆ ಕೆಲವು ಕಡೆಗಳಲ್ಲಿ ಹಗುರ ಮಳೆ ಬರಲಿದೆ. ಒಂದೆರಡು ಕಡೆಗಳಲ್ಲಿ ಸಾಧಾರಣ ಮಳೆ ಸುರಿಯುವ ಲಕ್ಷಣಗಳು ಇವೆ. ಇದರಲ್ಲಿ ಕರಾವಳಿ ಭಾಗದ ಜಿಲ್ಲೆಗಳಲ್ಲಿ ಮಳೆ ತುಸು ಹೆಚ್ಚಿರಲಿದೆ. ರಾಜ್ಯದ ಬಹುತೇಕ ಕಡೆಗಳಲ್ಲಿ ಬೆಳಗ್ಗೆ ಮತ್ತು ರಾತ್ರಿ ಚಳಿ ಹಾಗೂ ಮಂಜಿನ ವಾತಾವರಣ ಕಂಡು ಬರಲಿದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ.

ಕಳೆದ 24ಗಂಟೆಯಲ್ಲಿ ಚಾಮರಾಜನಗರ, ಚಿಕ್ಕಮಗಳೂರು ಜಿಲ್ಲೆ ವ್ಯಾಪ್ತಿಯಲ್ಲಿ ಅಧಿಕ ಮಳೆ ದಾಖಲಾಗಿದೆ. ರಾಜ್ಯದ ಗರಿಷ್ಠ ತಾಪಮಾನ ಗೋಕರ್ಣ ಮತ್ತು ಕಾರವಾರ ತಲಾ 32.5ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಕನಿಷ್ಠ ತಾಪಮಾನ
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶದಲ್ಲಿ 16.9 ಡಿಗ್ರಿ ಸೆಲ್ಸಿಯಸ್ ಮತ್ತು ಮೈಸೂರು, ಬೀದರ್, ಬಾದಾಮಿ, ಬೆಂಗಳೂರು ಜಿಕೆವಿಕೆಯಲ್ಲಿ ತಲಾ 17ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ಕಂಡು ಬಂದಿದೆ.












Click it and Unblock the Notifications