Karnataka weather: ರಾಜ್ಯದಲ್ಲಿ ಚಳಿ ಮುಂದುವರಿಯುವ ಸಾಧ್ಯತೆ, ಮಳೆ ಮುನ್ಸೂಚನೆ ಇದಿಯೇ?
ಬೆಂಗಳೂರು, ಜನವರಿ 12: ಕರ್ನಾಟಕ ರಾಜ್ಯದಲ್ಲಿ ಕೆಲವು ದಿನಗಳಿಂದ ಸುರಿದಿದ್ದ ಮಳೆ ಈಗ ತುಸು ಬಿಡುವು ನೀಡಿದೆ. ರಾಜ್ಯದ ವಿವಿಧೆಡೆ ಅಧಿಕ ಚಳಿ ಮುಂದುವರೆಯುವ ಎಲ್ಲ ಲಕ್ಷಣಗಳು ಕಾಣುತ್ತಿವೆ. ಉತ್ತರ ಒಳನಾಡಿನಲ್ಲಿ ಮತ್ತೆ ಮೈ ಕೊರೆಯುವ ಚಳಿ ಉಂಟಾಗುವ ಸಾಧ್ಯತೆ ಇದೆ. ಯಾವ ಭಾಗಕ್ಕೆ ಏನೆಲ್ಲ ಮುನ್ಸೂಚನೆ ಇದೆ ಎಂಬ ಮಾಹಿತಿ ಇಲ್ಲಿದೆ.
ಹಲವು ದಿನಗಳಿಂದ ಕರಾವಳಿಯ ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಆಗಿತ್ತು. ಇದರೊಂದಿಗೆ ಮೆಲನಾಡಿನ ಚಿಕ್ಕಮಗಳೂರು, ಶಿವಮೊಗ್ಗ, ಚಾಮರಾಜನಗರ, ಕೊಡಗು ಹಾಗೂ ಬೆಂಗಳೂರು, ಮಂಡ್ಯ, ಮೈಸೂರು, ಕೋಲಾರ, ಚಿಕ್ಕಮಗಳೂರು ಜಿಲ್ಲೆಗಲ್ಲಿ ಆಗಾಗ ಮಳೆ ದಾಖಲಾಗಿತ್ತು.

ಈ ಪ್ರದೇಶಗಳಲ್ಲಿ ಇದೀಗ ಮತ್ತೆ ತೀವ್ರ ಚಳಿ ಸೃಷ್ಟಿಯಾಗುವ ಸಾಧ್ಯತೆಗಳು ಕಂಡು ಬಂದಿವೆ. ಉತ್ತರ ಒಳನಾಡಿನ ಭಾಗದ ವಿಜಯಪುರ ಜಿಲ್ಲೆಗಳಲ್ಲಿ ಶುಕ್ರವಾರ ಮತ್ತೆ 12 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿದೆ. ಇದರೊಂದಿಗೆ ಧಾರವಾಡದಲ್ಲಿ 13.6 ಡಿಗ್ರಿ ಸೆಲ್ಸಿಯಸ್, ಬಾಗಲಕೋಟೆ 14.8 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿದೆ.
ಒಳನಾಡಿನಲ್ಲಿ ಚಳಿ, ಶುಷ್ಕ ವಾತಾವರಣ
ಈ ಭಾಗದ ಉಳಿದ ಜಿಲ್ಲೆಗಳಾದ ಬೆಳಗಾವಿ, ಹಾವೇರಿ, ಗದಗ, ಕೊಪ್ಪಳ, ಕಲಬುರಗಿ ಸೇರಿದಂತೆ ಮುಂತಾದೆಡೆ ಬೆಳಗ್ಗೆ ದಟ್ಟ ಮಂಜು, ಮೋಡ ಮುಸುಕಿನ ವಾತಾವರಣ ಕಂಡು ಬರಲಿದೆ. ಮಧ್ಯಾಹ್ನ ಗರಿಷ್ಠ ತಾಪಮಾನ ಮತ್ತು ಶುಷ್ಕ ವಾತಾವರಣ ಕಂಡು ಬರಲಿದೆ.
ಕರ್ನಾಟಕದ ಬಹುತೇಕ ಭಾಗದ ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲಿ ಚಳಿ, ಶುಷ್ಕ ವಾತಾವರಣ ಮುಂದುವರಿಯಲಿದೆ. ಒಂದೆರಡು ಕಡೆ ಸೋನೆ ಮಳೆ, ತುಂತುರು ಮಳೆ ಆಗಬಹುದು. ಇದರ ಹೊರತು ಯಾವ ಜಿಲ್ಲೆಗಳಿಗೂ ಗಂಭೀರ ಸ್ವರೂಪದ ಮಳೆ ಮುನ್ಸೂಚನೆ ಇಲ್ಲ ಎಂದು ಭಾರತೀಯ ಹವಾಮಾನ ಇಲಾಖೆ ವರದಿ ತಿಳಿಸಿದೆ.
ರಾಜಧಾನಿ ಹವಾಮಾನ ವರದಿ
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಎರಡು ದಿನ ಉಂಟಾಗಿದ್ದ ತುಂತುರು ಮಳೆಯ ವಾತಾವರಣ ಮರೆಯಾಗಿದೆ. ಇಂದು ಶುಕ್ರವಾರದಿಂದ ನಗರದ ಎಲ್ಲ ಕಡೆಗಳಲ್ಲಿ ಉತ್ತಮ ಬಿಸಿಲಿನ ವಾತಾವರಣ ಕಂಡು ಬಂದಿದೆ. ಆದರೆ ಸದ್ಯಕ್ಕೆ ಚಳಿಯ ಪ್ರಮಾಣ ಈಗಿದ್ದಂತೆ ಇನ್ನೂ ಕೆಲವು ದಿನ ಮುಂದುವರಿಯಲಿದೆ.
ನಗರದ ಹಲವೆಡೆ ಬೆಳಗ್ಗೆ ದಟ್ಟ ಮಂಜು, ಆಗಾಗ ಮಬ್ಬು ವಾತಾವರಣ ಕಂಡು ಬರಲಿದೆ. ಇದರ ಹೊರತು ಮಳೆಯ ಮುನ್ಸುಚನೆ ಇಲ್ಲ. ಮುಂದಿನ ಒಂದು ನಗರದಲ್ಲಿ ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಸಿಯಸ್ ಮತ್ತು ಗರಿಷ್ಠ 29 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತವಾರಿ ಕೇಂದ್ರ ಮಾಹಿತಿ ನೀಡಿದೆ.












Click it and Unblock the Notifications