Karnataka Weather: ರಾಜ್ಯದ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಜುಲೈ 28 ರವರೆಗೆ 'ಮಹಾ' ಮಳೆ ಆರ್ಭಟ
ಬೆಂಗಳೂರು, ಜುಲೈ 24: ಕರ್ನಾಟಕ ರಾಜ್ಯಾದ್ಯಂತ ಸಕ್ರಿಯಗೊಂಡಿರುವ ಮುಂಗಾರು ಮಳೆ ಮುಂದಿನ ಜುಲೈ 28ರವರೆಗೂ ಕರಾವಳಿ, ದಕ್ಷಿಣ ಮತ್ತು ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಮುಂದುವರಿಯಲಿದೆ. ವಿವಿಧ ಜಿಲ್ಲೆಗಳು ಎಂದಿನಂತೆ ಆರೆಂಜ್ ಮತ್ತು ಯೆಲ್ಲೋ ಅಲರ್ಟ್ ಪಡೆದಿವೆ.
ಹಗಲಿರುಳು ಎನ್ನದೇ ಬಿಟ್ಟು ಬಿಟದೇ ಸುರಿಯುತ್ತಿರುವ ವರ್ಷಧಾರೆ ಇನ್ನೂ ಹಲವು ದಿನಗಳು ರಾಜ್ಯದ ಮೂರು ಭಾಗಗಳಲ್ಲಿಯೂ ಮುಂದುವರಿಯಲಿದೆ. ಈಗಾಗಲೇ ಕರಾವಳಿ ಉಡುಪಿ ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಹಾಗೂ ಉತ್ತರ ಒಳನಡಿನ ಬೆಳಗಾವಿ, ಹಾವೇರಿ, ಧಾರವಾಡ, ವಿಜಯಪುರ, ಗದಗ, ಕೊಪ್ಪಳ, ಬೀದರ್, ಕಲಬುರಗಿಯಲ್ಲಿ ಸತತ ಕೆಲವು ದಿನಗಳಿಂದ ಅತ್ಯಧಿಕ ಮಳೆ ದಾಖಲಾಗಿದೆ. ಸದ್ಯಕ್ಕೆ ಈ ಮಹಾ ಮಳೆ ವಿಶ್ರಾಂತಿ ನೀಡುವ ಲಕ್ಷಣಗಳು ಕಂಡು ಬಂದಿಲ್ಲ.

ಕರ್ನಾಟಕ ಕರಾವಳಿಯ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಒಳನಾಡಿನ ಜಿಲ್ಲೆಗಳಾದ ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ಕಲಬುರಗಿ, ವಿಜಯಪುರ, ಯಾದಗಿರಿ ಹಾಗೂ ದಕ್ಷಿಣ ಒಳನಾಡಿನ ಬಳ್ಳಾರಿ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ಜುಲೈ 28ರವರೆಗೂ ಭಾರೀ ಮತ್ತು ಕೆಲವೊಮ್ಮೆ ಅತ್ಯಧಿಕ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ನಿರಂತರ 24 X 7 ಮಳೆ ಸುರಿಯುತ್ತಿದೆ
ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಉಳಿದಂತೆ ಚಿತ್ರದುರ್ಗ, ದಾವಣಗೆರೆ, ಕೋಲಾರ, ಹಾಸನ, ರಾಯಚೂರು, ಹಾವೇರಿ, ಗದಗ, ಕಲಬುರಗಿ, ಬೀದರ್ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ಈ ಜಿಲ್ಲೆಗಳಲ್ಲಿ ದಿನ ಬಿಟ್ಟು ದಿನ ಧಾರಾಕಾರವಾಗಿ ಮಳೆ ಸುರಿಯಲಿದೆ. ಕಳೆದ ಹಲವು ದಿನಗಳಿಂದ ಮೋಡ ಕವಿದ ಮಬ್ಬು ವಾತಾವರಣ ಕಂಡು ಬಂದಿದ್ದು, ಬಿಸಿಲಿನ ದರ್ಶನವೇ ಅಪರೂಪವಾಗಿದೆ. ಕರಾವಳಿ ಮತ್ತು ಉತ್ತರ ಕರ್ನಾಟಕಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದೆ.

ಕರಾವಳಿಯ ಸಮುದ್ರ ತೀರದಲ್ಲಿ ಗಾಳಿಯು ಪ್ರತಿ ಗಂಟೆಗೆ 40 ರಿಂದ 45 ಕಿಲೋ ಮೀಟರ್ ವೇಗದಲ್ಲಿ ಬೀಸಲಿದೆ. ಈ ಸಂಬಂಧ ಮೀನುಗಾರಿಕೆಗೆ ಇಳಿಯದಂತೆ ಮೀನುಗಾರರಿಗೆ ಐಎಂಡಿ ಎಚ್ಚರಿಕೆ ನೀಡಿದೆ. ಕೆಲವೊಮ್ಮೆ ಈ ಭಾಗದಲ್ಲಿ ಗಂಟೆಗೆ 55 ಕಿಲೋ ಮೀಟರ್ ವೇಗದಲ್ಲಿ ಗಾಳಿ ಬೀಸಲಿದೆ ಎಂದು ಹವಾಮಾನ ತಜ್ಞರು ಮಾಹಿತಿ ನೀಡಿದ್ದಾರೆ.
ನೆನ್ನೆ ಅನೇಕ ಕಡೆಗಳಲ್ಲಿ ಭಾರೀ ಮಳೆ: ವಿವರ
ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆ ವ್ಯಾಪ್ತಿಯಲ್ಲಿ ಅತ್ಯಧಿಕ ಮಳೆ (17 ಸೆಂ.ಮೀ) ದಾಖಲಾಗಿದೆ. ಇದರೊಂದಿಗೆ ಸುಬ್ರಹ್ಮಣ್ಯ, ಕೋಟಾ, ಉಪ್ಪಿನಂಗಡಿ, ಮಂಗಳೂರು ವಿಮಾನ ನಿಲ್ದಾಣ, ಧರ್ಮಸ್ಥಳ, ಪುತ್ತೂರು, ಲಿಂಗಮನಕ್ಕಿ, ಪೆಣಂಬೂರು, ಸಿದ್ದಾಪುರ, ನಾಪೋಕ್ಲು, ಕುಮಟಾ, ತಾಳಗುಪ್ಪ, ಲೊಂಡಾ, ಗೋಕರ್ಣ, ಶಿವಮೊಗ್ಗ, ಚಿತ್ರದುರ್ಗ, ಧಾರವಾಡ, ಬೆಳಗಾವಿ, ವಿಜಯನಗರ, ಹಾಸನ, ತುಮಕೂರು, ಬೆಂಗಳೂರು ನಗರ ಜಿಲ್ಲೆಗಳಲ್ಲಿ ಮಳೆ ಬಿದ್ದಿದೆ.












Click it and Unblock the Notifications