Karnataka rains: ಇಂದಿನಿಂದ 4ದಿನ ಈ ಜಿಲ್ಲೆಗಳಲ್ಲಿ ಭಾರೀ ಮಳೆ, ಹವಾಮಾನ ವರದಿ
ಬೆಂಗಳೂರು, ಸೆಪ್ಟಂಬರ್ 08: ಕರ್ನಾಟಕ ರಾಜ್ಯದಲ್ಲಿ ಕರಾವಳಿಯಲ್ಲಿ ಮುಂದಿನ ನಾಲ್ಕು ದಿನ ಹಾಗೂ ಮಲೆನಾಡು ಮತ್ತು ಉತ್ತರ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಸಹ ಗುಡುಗು ಸಹಿತ ಸಾಧಾರಣದಿಂದ ಭಾರಿ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕಳೆದ ತಿಂಗಳು ದುರ್ಬಲಗೊಂಡಿದ್ದ ಮುಂಗಾರು ಮಳೆ ಇದೀಗ, ರಾಜ್ಯದ ವಿವಿಧ ಭಾಗಗಳಲ್ಲಿ ಚುರುಕಾಗಿದೆ. ಕರಾವಳಿ ಜಿಲ್ಲೆಗಳಲ್ಲಂತೂ ಪ್ರತಿನಿತ್ಯ ನಿರೀಕ್ಷಿತ ಮಳೆ ಆಗುತ್ತಿದೆ. ಉತ್ತರ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಮಾತ್ರವೇ ಮಳೆ ಆಗುತ್ತಿದೆ. ಇನ್ನುಳಿದಂತೆ ದಕ್ಷಿಣ ಒಳನಾಡು ಭಾಗದಲ್ಲೂ ಸಹ ಮಳೆ ಅಷ್ಟಕಷ್ಟೇ ಎಂಬಂತಾಗಿದ್ದು, ಆಗಾಗ ಬಂದು ಹೋಗುತ್ತಿದೆ. ದಿನವಿಡಿ ಮೋಡ ಕವಿದ ವಾತಾವರಣ ಕಂಡು ಬರುತ್ತದೆ.

ಇಂದಿನಿಂದ ನಾಲ್ಕು ದಿನ ರಾಜ್ಯದಲ್ಲಿ ಅಲ್ಲಲ್ಲಿ ಭಾರೀ ಮಳೆ ಬೀಳುವ ಸಂಭವವಿದೆ. ಕರಾವಳಿಯ ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಜಿಲ್ಲೆಗಳಲ್ಲಿ ಸೆಪ್ಟಂಬರ್ 9ರಿಂದ ಮೂರು ದಿನಗಳ ಕಾಲ ಗುಡುಗು ಮಿಂಚು ಸಹಿತ ಭಾರಿ ಮಳೆ ಆಗಲಿದೆ. ಹೀಗಾಗಿ ಇವುಗಳಿಗೆ ಹಳದಿ ಎಚ್ಚರಿಕೆ ನೀಡಲಾಗಿದೆ ಎಂದು ಐಎಂಡಿ ತಿಳಿಸಿದೆ.
ಒಳನಾಡಿನ ಈ ಜಿಲ್ಲೆಗಳಿಗೆ ಭಾರಿ ಮಳೆ
ಉತ್ತರ ಒಳನಾಡಿನ ಬೀದರ್ ಮತ್ತು ಕಲಬುರಗಿ, ಮಲೆನಾಡಿನ ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ಇಂದು ಮಳೆ ಆರ್ಭಟಿಸಲಿದ್ದು, ಇಲ್ಲಿ ಸಹ ಇವತ್ತು ಮಾತ್ರ (ಸೆ.8) ಹಳದಿ ಎಚ್ಚರಿಕೆ ಕೋಡಲಾಗಿದೆ.

ಒಳನಾಡು ಜಿಲ್ಲೆಗಳಲ್ಲಿ ಇಂದು ಒಂದು ದಿನ ಹೊರತುಪಡಿಸಿದರೆ ಮುಂದಿನ ಮೂರರಿಂದ ನಾಲ್ಕು ದಿನಗಳು ಅಷ್ಟಾಗಿ ಮಳೆ ನಿರೀಕ್ಷಿಸುವಂತಿಲ್ಲ. ಬೆಳಗಾವಿ, ವಿಜಯಪುರ, ಬಾಗಲಕೋಟೆ, ಧಾರವಾಡ, ಹಾವೇರಿ, ಗದಗ, ಕೊಪ್ಪಳ, ಬೀದರ್ ಕಲಬುರಗಿ, ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲಿ ಮತ್ತು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ಚಾಮರಾಜನಗರ, ಮಂಡ್ಯ, ಮೈಸೂರು, ಹಾಸನ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆ ಬೀಳಲಿದೆ ಎಂದು ಅಂದಾಜಿಸಲಾಗಿದೆ.
ತಂಪು ವಾತಾವರಣ ಮುಂದುವರಿಕೆ
ಇದರ ಹೊರತಾಗಿ ಒಳನಾಡು ಭಾಗದಲ್ಲಿ ಗಂಭೀರ ಹವಾಮಾನ ಬದಲಾವಣೆಗಳು ಇಲ್ಲ ಎನ್ನಲಾಗಿದೆ. ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿಯಿಂದ ರಾಜ್ಯದಲ್ಲಿ ಮಳೆ, ಮಬ್ಬು ಮತ್ತು ತಂಪು ವಾತಾವರಣ ಕಂಡು ಬರುತ್ತಿದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ.
ಬೆಂಗಳೂರು ನಗರದಲ್ಲಿ ಇಂದು ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣ ಕಂಡು ಬರುತ್ತಿದೆ. ವಿವಿಧೆಡೆ ಉತ್ತಮ ಮಳೆ ಸಂಭವವಿದೆ. ಸಂಜೆ ನಂತರ ಮಳೆ ಶುರುವಾದರೆ ಅದು ತಡರಾತ್ರಿವರೆಗೆ ಮುಂದುವರಿಯುವ ಸಾಧ್ಯತೆಗಳು ಇವೆ. ನಗರದಲ್ಲಿ ಗರಿಷ್ಠ ತಾಪಮಾನದಲ್ಲಿ ಇಳಿಕೆ ಆಗಿದೆ.












Click it and Unblock the Notifications