Rain Alert: ಕರ್ನಾಟಕದಲ್ಲಿ ತಗ್ಗಿದ ಮುಂಗಾರು! ಈ ಜಿಲ್ಲೆಗಳಷ್ಟೇ ಭಾರೀ ಮಳೆ ಮುನ್ಸೂಚನೆ: ಯೆಲ್ಲೋ ಅಲರ್ಟ್
Karnataka Rains: ಕರ್ನಾಟಕದಾದ್ಯಂತ ಕವಿದಿದ್ದ ಮಬ್ಬು ಕೊನೆಯಾಗಲಿದೆ. ಇಂದಿನಿಂದ ರಾಜ್ಯಾದ್ಯಂತ ಬಿಸಿಲಿನ ದರ್ಶನವಾಗಲಿದೆ. ಕಳೆದ ಕೆಲವು ವಾರಗಳಿಂದ ಸುರಿಯುತ್ತಿದ್ದ ಹಗುರ, ಸಾಧಾರಣ ಮತ್ತು ಭಾರೀ ಮಳೆಯ ವಾತಾವರಣ ಇಳಿಕೆಯಾಗಿದೆ. ಚಂಡಮಾರುತ ಪ್ರಸರಣ ತಗ್ಗಿದ್ದರಿಂದ ಹವಾಮಾನದ ಸ್ಥಿತಿ ಸಹಜ ಸ್ಥಿತಿಗೆ ಬರುತ್ತಿದೆ. ರಾಜ್ಯದ ಒಂದೆರಡು ಜಿಲ್ಲೆಗಳಿಗೆ ಮಾತ್ರವೇ ಸಾಧಾರಣದಿಂದ ಭಾರೀ ಮಳೆ ಆಗಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಸುಮಾರು ಒಂದು ತಿಂಗಳಿನಿಂದ ಕರ್ನಾಟಕದ ಕರಾವಳಿ ಹಾಗೂ ಮಲೆನಾಡಿನಲ್ಲಿ ಮುಂಗಾರು ಮಳೆ ಅಬ್ಬರಿಸಿತ್ತು. ವಾಯುಭಾರ ಕುಸಿತ, ಹವಾಮಾನದ ತೀವ್ರ ಸ್ವರೂಪದ ಬದಲಾವಣೆಯಿಂದ ರಾಜ್ಯದೆಲ್ಲಡೆ ಮಳೆ ಹಾಗೂ ವ್ಯಾಪಕ ಚಳಿ ಉಂಟಾಗಿತ್ತು. ಇದೀಗ ಮಳೆ ತಗ್ಗಿದೆ. ಜುಲೈ 30 ರವರೆಗೆ ನಾಲ್ಕು ಜಿಲ್ಲೆಗಳಿಗೆ ಭಾರೀ ಮಳೆ ಆಗಲಿದೆ. ಗರಿಷ್ಠ 115 ಮಿಲಿ ಮೀಟರ್ ಮಳೆ ದಾಖಲಾಗಿದೆ.

ಕರಾವಳಿಯ ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳ ಹಲವೆಡೆ ಸಾಧಾರಣದಿಂದ ಭಾರೀ ಮಳೆ ಆಗಲಿದೆ. ಹೀಗಾಗಿ ಇಂದಿನಿಂದ ಎರಡು ದಿನ 'ಯೆಲ್ಲೋ ಅಲರ್ಟ್' ಘೋಷಿಸಲಾಗಿದೆ. ಉಳಿದಂತೆ ಬೆಂಗಳೂರು ನಗರ, ಮೈಸೂರು, ಚಾಮರಾಜನಗರ, ಹಾಸನ, ಕೊಡಗು ಸೇರಿದಂತೆ ಕೆಲವು ಕಡೆಗಳಲ್ಲಿ ಹಗುರ ಮಳೆ ಆಗುವ ಸಾಧ್ಯತೆ ಇದೆ. ಉಳಿದೆಡೆ ಮಳೆ ಸಂಪೂರ್ಣ ಕಡಿಮೆಯಾಗಿ ಬಿಸಿಲಿನ ದರ್ಶನವಾಗಲಿದೆ. ಚಳಿ ಕಡಿಮೆ ಆಗಲಿದೆ ಎಂದು ಮುನ್ಸೂಚನೆ ನೀಡಲಾಗಿದೆ.
ದಕ್ಷಿಣ ಒಳನಾಡಿನಲ್ಲಿ ಮುಂದಿನ ನಾಲ್ಕೈದು ದಿನ ಸಾಮಾನ್ಯ ಮಳೆ ನಿರೀಕ್ಷೆ ಇದೆ. ಉತ್ತರ ಒಳನಾಡಿನ ಪ್ರದೇಶಗಳಾದ ಹಾವೇರಿ, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಬೀದರ್, ಕೊಪ್ಪಳ, ರಾಯಚೂರು, ಕಲಬುರಗಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಒಣಹವೆ ಮುಂದುವರಿಯಲಿದೆ.
ಬೆಂಗಳೂರು ಹವಾಮಾನ ಮುನ್ಸೂಚನೆ
ಬೆಂಗಳೂರಿನಲ್ಲಿ ಕನಿಷ್ಠ ತಾಪಮಾನ ಏರಿಕೆ ಆಗಲಿದೆ. ಎರಡು ವಾರಗಳಿಂದ ಇದ್ದ ಚಳಿಗೆ ಮುಕ್ತಿ ಸಿಗಲಿದೆ. ಕೆಲವೆಡೆ ಸೋನೆ ಮಳೆ ಬಂದರೆ ಬರಬಹುದು. ಇನ್ನೂ ಮೂರು ದಿನಗಳ ಕಾಲ ಕೊಂಚ ಚಳಿ ದಾಖಲಾಗಬಹದು. ಇಷ್ಟು ಬಿಟ್ಟರೆ ಭಾರೀ ಮಳೆ ಬರುವ ಸೂಚನೆ, ಲಕ್ಷಣಗಳು ಸದ್ಯಕ್ಕೆ ಇಲ್ಲ. ನಗರದಲ್ಲಿ ಕನಿಷ್ಠ 21 ಡಿಗ್ರಿ ಸೆಲ್ಸಿಯಸ್, ಗರಿಷ್ಠ 29 ಡಿಗ್ರಿ ಸೆಲ್ಸಿಯಸ್‌ವರೆಗೂ ತಾಪಮಾನ ದಾಖಲಾಗಲಿದೆ ಎಂದು ರಾಜ್ಯ ಹವಾಮಾನ ಕೇಂದ್ರದ ಮಂಗಳವಾರದ ಮುನ್ಸೂಚನೆ ತಿಳಿಸಿದೆ.












Click it and Unblock the Notifications