Karnataka Rain: ಸೈಕ್ಲೋನ್ ಪ್ರಭಾವದಿಂದ ಅ.29 ರಿಂದ ಮಳೆ, ಈ ಜಿಲ್ಲೆಗಳಿಗೆ 'ಯೆಲ್ಲೋ ಅಲರ್ಟ್' ಎಚ್ಚರಿಕೆ
ಬೆಂಗಳೂರು, ಅಕ್ಟೋಬರ್ 26: ಬಂಗಾಳಕೊಲ್ಲಿಯ ಸೃಷ್ಟಿಯಾಗಿರುವ ಚಂಡಮಾರುತ 'ಹ್ಯಾಮೂನ್' ತೀವ್ರಗೊಂಡಿದೆ. ಪರಿಣಾಮವಾಗಿ ಕರ್ನಾಟಕದಲ್ಲಿ ಅಕ್ಟೋಬರ್ 29ರಿಂದ ಭಾರಿ ಮಳೆ ಆರ್ಭಟ ಕಂಡು ಬರಲಿದೆ. ರಾಜ್ಯ ಒಳನಾಡಿನ ಮೂರು ಜಿಲ್ಲೆಗಳಲ್ಲಿ ಎರಡು ದಿನ ಭಾರಿ ಮಳೆ ಸಾಧ್ಯತೆ ಹಿನ್ನೆಲೆಯಲ್ಲಿ ಹಳದಿ ಎಚ್ಚರಿಕೆ ಕೊಡಲಾಗಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕರ್ನಾಟಕದಾದ್ಯಂತ ಹಿಂಗಾರು ಮಳೆ ಸಕ್ರಿಯವಾಗುವ ಲಕ್ಷಣಗಳು ಕಂಡು ಬಂದಿವೆ. ಈ ಮಧ್ಯೆ ಅರಬ್ಬಿ ಸಮುದ್ರದಲ್ಲಿ ಸೃಷ್ಟಿಯಾಗಿದ್ದ 'ತೇಜ್' ಚಂಡಮಾರುತ ತೀವ್ರತೆ ಅಷ್ಟಾಗಿಲ್ಲ. ಆದರೆ ಬಂಗಾಳಕೊಲ್ಲಿಯಲ್ಲಿ ಎದ್ದಿರುವ ಚಂಡಮಾರುತ ಹ್ಯಾಮೂನ್ ದೇಶದ ಅನೇಕ ರಾಜ್ಯದಲ್ಲಿ ತನ್ನ ಪ್ರಭಾವ ಉಂಟು ಮಾಡಲಿದೆ.

ಅಕ್ಟೋಬರ್ 29ರಿಂದ ಕರ್ನಾಟಕದ ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಜಿಲ್ಲೆಗಳಲ್ಲಿ ಎರಡು ದಿನ ಗುಡಗು ಸಹಿತ ಭಾರೀ ಮಳೆ ಅಬ್ಬರಿಸಲಿದೆ. ಹೀಗಾಗಿ ಈ ಮೂರು ಜಿಲ್ಲೆಗಳಿಗೆ ಅಕ್ಟೋಬರ್ 30-31ರಂದು ಹಳದಿ ಎಚ್ಚರಿಕೆ ನೀಡಲಾಗಿದೆ.
ಕೆಲವೆಡೆ ಜೋರು ಮಳೆ ಸಂಭವ
ಉಳಿದಂತೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಮೈಸೂರು, ಚಿಕ್ಕಬಳ್ಳಾಪುರ, ರಾಮನಗರ, ತುಮಕೂರು, ಶಿವಮೊಗ್ಗ, ವಿಜಯನಗರ, ಚಾಮರಾಜನಗರ ಸೇರಿ ಇನ್ನಿತರ ಜಿಲ್ಲೆಗಳಲ್ಲಿ ಸಾಧಾರಣವಾಗಿ, ಕೆಲವೊಮ್ಮೆ ಜೋರು ಮಳೆ ಆಗಲಿದೆ.
ಇತ್ತರ ಕರಾವಳಿ ಜಿಲ್ಲೆಗಳಾದ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ವ್ಯಾಪ್ತಿಯಲ್ಲಿ ಆಗಾಗ ತುಂತುರು ಮಳೆಯಾಗುವ ಸಾಧ್ಯತೆಗಳು ಇವೆ. ಉಳಿದಂತೆ ಬಿಸಿಲಿನ ತಾಪಮಾನ ಅಧಿಕವಾಗಿರಲಿದೆ ಎಂದು ಅಂದಾಜಿಸಲಾಗಿದೆ.
ಉತ್ತರ ಒಳನಾಡಿನಲ್ಲಿ ಸಣ್ಣ ಪ್ರಮಾಣದಲ್ಲೂ ಮಳೆಯ ಲಕ್ಷಣಗಳು ಇಲ್ಲದಾಗಿದೆ. ಇಲ್ಲಿ ಶುಷ್ಕ, ಒಣ ಹವೆಯ ವಾತಾವರಣವೇ ಮುಂದುವರಿಯಲಿದೆ. ಈಗಾಗಲೇ ಕಲಬುರಗಿ, ಹೊನ್ನಾವರ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನದಲ್ಲಿ 2-3 ಡಿಗ್ರಿ ಸೆಲ್ಸಿಯಸ್ ಏರಿಕೆ ಆಗಿದೆ. ಇಲ್ಲಿ ನೀಲಿ ಶುಭ್ರ ಆಕಾಶ ಕಂಡು ಬರಲಿದ್ದು, ಸೆಕೆಯ ವಾತಾವರಣ ಹೀಗೆಯೇ ಮಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.












Click it and Unblock the Notifications