ಹವಾಮಾನ ವರದಿ; ಬೆಂಗಳೂರಲ್ಲಿ ಮತ್ತೆ ಜಿಟಿ-ಜಿಟಿ ಮಳೆ
ಬೆಂಗಳೂರು, ಅಕ್ಟೋಬರ್ 08; ಕರ್ನಾಟಕದಲ್ಲಿ ಅಕ್ಟೋಬರ್ 10ರ ತನಕ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಶುಕ್ರವಾರ ಮುಂಜಾನೆಯೇ ಜಿಟಿ-ಜಿಟಿ ಮಳೆ ಸುರಿಯುತ್ತಿದೆ.
ಬೆಂಗಳೂರಿನಲ್ಲಿ ಮಂಗಳವಾರ ರಾತ್ರಿ ಮತ್ತು ಬುಧವಾರ ಮಲೆನಾಡನ್ನು ನೆನೆಪಿಸುವ ರೀತಿ ಮಳೆ ಸುರಿದಿತ್ತು. ಬುಧವಾರ ಸಂಜೆ ಮತ್ತು ಗುರುವಾರ ನಗರದಲ್ಲಿ ಮಳೆ ಇರಲಿಲ್ಲ. ಇಂದು ಮುಂಜಾನೆ ಮತ್ತೆ ಮಳೆ ಆರಂಭವಾಗಿದೆ.
ಬಂಗಾಳಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದ ಪರಿಣಾಮ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ನೈಋತ್ಯ ಮುಂಗಾರು ಸೆಪ್ಟೆಂಬರ್‌ಗೆ ಅಂತ್ಯಗೊಂಡಿದ್ದರೂ ಚಂಡಮಾರುತದಿಂದಾಗಿ ಮಳೆ ಮುಂದುವರೆದಿದೆ.

ಯೆಲ್ಲೋ ಅಲರ್ಟ್; ಶುಕ್ರವಾರ ದಕ್ಷಿಣ ಕನ್ನಡ, ಉಡುಪಿ, ಹಾಸನ, ಶಿವಮೊಗ್ಗ, ಚಿಕ್ಕಮಗಳೂರು, ಮೈಸೂರು, ಮಂಡ್ಯ, ಚಾಮರಾಜನಗರ ಮತ್ತು ಕೊಡಗು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಹೆಚ್ಚಾಗುವ ಸೂಚನೆ ಇದ್ದು ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.
ತುಮಕೂರು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಬೀದರ್, ಕೊಪ್ಪಳ, ರಾಯಚೂರು, ಕಲಬುರಗಿ, ವಿಜಯಪುರ, ಧಾರವಾಡ, ಗದಗ ಜಿಲ್ಲೆಗಳಲ್ಲಿಯೂ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಎಲ್ಲಿ ಎಷ್ಟು ಮಳೆ?; ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಗುರುವಾರವೂ ಮಳೆಯಾಗಿದೆ. ಚಿತ್ರದುರ್ಗದಲ್ಲಿ ಗರಿಷ್ಠ 13 ಸೆಂ. ಮೀ. ಮಳೆಯಾಗಿದೆ. ಕಾರವಾರ, ಪಾವಗಡದಲ್ಲಿ 7. ಹಿರಿಯೂರು, ಗೌರಿಬಿದನೂರಿನಲ್ಲಿ 6. ಶಿವಮೊಗ್ಗದಲ್ಲಿ 4, ದಾವಣಗೆರೆಯಲ್ಲಿ 5 ಸೆಂ. ಮೀ. ಮಳೆಯಾಗಿದೆ.
ಬೆಂಗಳೂರು ನಗರದಲ್ಲಿ ಮಳೆಯಿಂದ ಆಗುವ ಅನಾಹುತಗಳ ನಿರ್ವಹಣೆಗಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ 63 ಉಪ ವಿಭಾಗದಲ್ಲಿ ನಿಯಂತ್ರಣ ಕೊಠಡಿ ಸ್ಥಾಪನೆ ಮಾಡಿದೆ. ಅಕ್ಟೋಬರ್ ಅಂತ್ಯದ ತನಕ ಇವುಗಳು ಕಾರ್ಯ ನಿರ್ವಹಣೆ ಮಾಡಲಿವೆ. ಭಾನುವಾರ ನಗರದಲ್ಲಿ ಸುರಿದ ಮಳೆ ಅವಾಂತರ ಸೃಷ್ಟಿ ಮಾಡಿತ್ತು. ಹಲವು ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗಿತ್ತು.
ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗುತ್ತಿದ್ದು ಜಲಾಶಯಗಳಿಗೆ ನೀರಿನ ಒಳಹರಿವು ಸಹ ಹೆಚ್ಚಿದೆ. ಆದರೆ ಲಿಂಗನಮಕ್ಕಿ, ಕೆಆರ್‌ಎಸ್ ಹೊರತುಪಡಿಸಿ ಉಳಿದ ಜಲಾಶಯಗಳು ಜುಲೈ, ಆಗಸ್ಟ್ ತಿಂಗಳಿನಲ್ಲಿ ಸುರಿದ ಮಳೆಗೆ ಭರ್ತಿಯಾಗಿವೆ.
ಲಿಂಗನಮಕ್ಕಿ ಜಲಾಶಯಕ್ಕೆ 8554, ಸೂಪಾ ಜಲಾಶಯಕ್ಕೆ 13,769, ಕೆಆರ್‌ಎಸ್ ಜಲಾಶಯಕ್ಕೆ 13,795, ಭದ್ರಾ ಜಲಾಶಯಕ್ಕೆ 14,869, ತುಂಗಭದ್ರಾ ಜಲಾಶಯಕ್ಕೆ 30,495 ಕ್ಯುಸೆಕ್ ಒಳಹರಿವು ದಾಖಲಾಗಿದೆ.
ಗುರುವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕೊಡಗು ಜಿಲ್ಲೆಯಲ್ಲಿ ಸರಾಸರಿ 4.81 ಮಿ.ಮೀ.ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 0.33 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯ ತನಕ ಜಿಲ್ಲೆಯಲ್ಲಿ 2552.15 ಮಿ.ಮೀ ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 2468.42 ಮಿ.ಮೀ ಮಳೆ ಸುರಿದಿತ್ತು.
ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳು. ಗುರುವಾರದ ನೀರಿನ ಮಟ್ಟ 2858.22 ಅಡಿಗಳು. ಕಳೆದ ವರ್ಷ ಇದೇ ದಿನ 2857.96 ಅಡಿ ನೀರಿನ ಸಂಗ್ರಹವಿತ್ತು. 1,814 ಕ್ಯುಸೆಕ್ ಒಳಹರಿವು ಇದ್ದು, ಹೊರ ಹರಿವು ನದಿಗೆ 700 ಕ್ಯುಸೆಕ್, ನಾಲೆಗೆ 237 ಕ್ಯುಸೆಕ್ ಆಗಿದೆ.
ಜುಲೈ ತಿಂಗಳಿಗೆ ಹೋಲಿಕೆ ಮಾಡಿದರೆ ಕರ್ನಾಟಕದಲ್ಲಿ ಆಗಸ್ಟ್‌ನಲ್ಲಿ ಮಳೆ ಕೊರತೆ ಎದುರಾಗಿತ್ತು. ಆದರೆ ಸೆಪ್ಟೆಂಬರ್ ತಿಂಗಳಿನಲ್ಲಿ ಚಂಡಮಾರುತದ ಪ್ರಭಾವದಿಂದ ಮಳೆಯಾಗಿತ್ತು. ಅಕ್ಟೋಬರ್‌ನಲ್ಲಿ ಸಹ ಮಳೆ ಮುಂದುವರೆದಿದೆ. ಮುಂಗಾರು ಅವಧಿಯಲ್ಲಿ ರಾಜ್ಯದಲ್ಲಿ ಶೇ 8ರಷ್ಟು ಮಳೆ ಕೊರತೆಯಾಗಿದೆ.
ಅಕ್ಟೋಬರ್ 10ರ ತನಕ ಕೇರಳ, ತಮಿಳುನಾಡು, ಪುದುಚೇರಿ, ಮಧ್ಯ ಮಹಾರಾಷ್ಟ್ರ, ಗೋವಾ, ದಕ್ಷಿಣ ಅಸ್ಸಾಂ, ಮೇಘಾಲಯ, ಆಂಧ್ರ ಪ್ರದೇಶದ ಕರಾವಳಿ, ಕರ್ನಾಟಕದ ಕರಾವಳಿ, ಪಶ್ಚಿಮ ಬಂಗಾಳ, ನಾಗಾಲ್ಯಾಂಡ್, ದೆಹಲಿ, ಗುಜರಾತ್ ರಾಜ್ಯಗಳಲ್ಲಿ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಲಾಗಿದೆ.












Click it and Unblock the Notifications