Karnataka Cold Wave: ರಾಜ್ಯಾದ್ಯಂತ 5 ದಿನ ಚಳಿ, ಒಣ ಹವೆ ಮುನ್ಸೂಚನೆ
ಬೆಂಗಳೂರು, ಡಿಸೆಂಬರ್ 31: ಹವಾಮಾನದಲ್ಲಿ ವೈಪರಿತ್ಯಗಳ ಅಬ್ಬರ ಮುಂದುವರಿದಿದೆ. ಹಿಂಗಾರು ಮಳೆಯ ಅಬ್ಬರ ತಗ್ಗಿದ್ದು ಎಲ್ಲೆಡೆ ವ್ಯಾಪಕ ಚಳಿ ಹಾಗೂ ಒಣಹವೆ ಮುಂದುವರೆಯುವ ಲಕ್ಷಣಗಳು ಇವೆ. ಮುಂದಿನ ಹೊಸ ವರ್ಷದ ಮೊದಲ ವಾರ ರಾಜ್ಯಾದ್ಯಂತ ಒಣಹವೆ ಜೊತೆಗೆ ಮೈಕೊರೆವ ಚಳಿ ಕಂಡು ಬರಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ಮುನ್ಸೂಚನೆ ನೀಡಿದೆ.
ಕರ್ನಾಟಕ ಕರಾವಳಿಯಿಂದ ದೂರದಲ್ಲಿ ಅರಬ್ಬಿ ಸಮುದ್ರದ ಮೇಲ್ಮೈನಲ್ಲಿ ಸ್ಟ್ರಫ್ ಉಂಟಾಗಿದೆ. ಮಹಾರಾಷ್ಟ್ರ ಮತ್ತು ಗುಜರಾತ್ ಭಾಗದ ಸಮುದ್ರ ಮಟ್ಟದಲ್ಲಿ ಉಂಟಾಗಿದ್ದ ಚಂಡಮಾರುತ ಪರಿಚಲನೆ ಸೋಮವಾರ ಸಂಜೆಗೆ ದುರ್ಬಲಗೊಂಡಿದೆ. ವಾತಾವರಣದಲ್ಲಿನ ಈ ಬದಲಾವಣೆಯಿಂದಾಗಿ ಕರ್ನಾಟಕದ ಒಳನಾಡು ಜಿಲ್ಲೆಗಳಲ್ಲಿ ಚಳಿ ಆವರಿಸಿಕೊಂಡಿದೆ.

ಇಂದಿನಿಂದ ಮುಂದಿನ 05 ದಿನಗಳ ಕಾಲ ಕರ್ನಾಟಕದ ಒಳನಾಡು ಜಿಲ್ಲೆಗಳಲ್ಲಿ ಮಂಜು ಕವಿಯಲಿದೆ. ದಟ್ಟ ಮಂಜಿನ ಜೊತೆಗೆ ಚಳಿ ಆವರಿಸಲಿದೆ. ರಾಜ್ಯದ ಬೆಳಗಾವಿ, ಬಾಗಲಕೋಟೆ, ವಿಜಯಪುರ, ಬೀದರ್, ಹಾವೇರಿ, ಗದಗ, ಕೊಪ್ಪಳ, ರಾಯಚೂರು, ಕಲಬುರಗಿ, ಯಾದಗಿರಿ, ವಿಜಯನಗರ, ಬಳ್ಳಾರಿ, ಧಾರವಾಡ, ದಾವಣಗೆರೆ, ಚಿತ್ರದುರ್ಗ, ತುಮಕೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಒಣಹವೆ ಮುಂದುವರಿಯಲಿದೆ ಎಂದು ಹವಾಮಾನ ಕೇಂದ್ರವು ಮಂಗಳವಾರದ ಮುನ್ಸೂಚನಾ ವರದಿಯಲ್ಲಿ ತಿಳಿಸಿದೆ.
ಒಣಹವೆ ವೇಳೆ ಪಡುವಣ ಗಾಳಿ ಹೆಚ್ಚು ಬೀಸಲಿದೆ. ಇದರಿಂದ ಮೈ ಚರ್ಮ ಕಾಂತಿಯಲ್ಲಿ ಬದಲಾವಣೆ ಆಗುತ್ತದೆ. ಮುಖ, ಮೈ ಕೈ ಎಲ್ಲ ಬಿರಿದಂತೆ, ಒಣಗಿದ ರೀತಿಯಲ್ಲಿ ಭಾಸವಾಗುತ್ತದೆ. ಬೆಳಗ್ಗೆ ಮತ್ತು ರಾತ್ರಿ ಮೈಕೊರೆವ ಚಳಿಯಾದರೆ, ಮಧ್ಯಾಹ್ನ ಗರಿಷ್ಠ ಬಿಸಿಲು ಕಂಡು ಬರುವ ಸಾಧ್ಯತೆ ಇದೆ.
ಇನ್ನೂ ಕರಾವಳಿ ಜಿಲ್ಲೆಗಳಾದ ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಜಿಲ್ಲೆಗಳಲ್ಲಿ ಶುಷ್ಕ ವಾತಾವರಣ ಕಂಡು ಬರಲಿದೆ. ಮಲೆನಾಡಿನ ಚಿಕ್ಕಮಗಳೂರು, ಕೊಡಗು, ಮಡಿಕೇರಿ, ಹಾಸನ, ಶಿವಮೊಗ್ಗ ವ್ಯಾಪ್ತಿಯಲ್ಲಿ ತಂಪು ವಾತಾವರಣ ಸಹಿತ ಅಧಿಕ ಬಿಸಿಲು ಕಂಡು ಬರಲಿದೆ ಎಂದು ತಿಳಿಸಲಾಗಿದೆ.
ಕನಿಷ್ಠ ತಾಪಮಾನದ ಜಿಲ್ಲೆಗಳು
ರಾಜ್ಯಾದ್ಯಂತ ಚಳಿ ಆವರಿಸುತ್ತಿದೆ. ಕ್ರಮೇಣ ಒಂದೊಂದೇ ಜಿಲ್ಲೆಗಳಲ್ಲಿ ಚಳಿ ಹೆಚ್ಚಾಗುತ್ತಿದ್ದು, ಒಣಹವೆ ಮುಂದುವರಿಯುತ್ತಿದೆ. ಚಿಕ್ಕಮಗಳೂರಿನಲ್ಲಿ ಅತೀ ಕನಿಷ್ಠ 10 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಬಾಗಲಕೋಟೆಯಲ್ಲಿ 13 ಡಿ.ಸೆ. ಹಾಗೂ ಹಾಸನ, ಗದಗ, ಧಾರವಾರ, ಬೀದರ್, ವಿಜಯಪುರ ಜಿಲ್ಲೆಗಳ ವ್ಯಾಪ್ತಿಯಲ್ಲಿ ನೆನ್ನೆ 14 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಇದೇ ರೀತಿ ಕನಿಷ್ಠ ತಾಪಮಾನವು ರಾಜ್ಯಾದ್ಯಂತ ವಿಸ್ತರಣೆಗೊಳ್ಳಲಿದೆ.
ಬೆಂಗಳೂರಿನಲ್ಲಿ ಮುಂದಿನ ಒಂದು ವಾರಗಳ ಕಾಲ ಕೊಂಚ ಚಳಿ ಜೊತೆಗೆ ಒಣಹವೆ ಮುಂದುವರಿಯಲಿದೆ. ಕನಿಷ್ಠ 18 ಡಿಗ್ರಿ ಸೆಲ್ಸಿಯಸ್ ಹಾಗೂ ಗರಿಷ್ಠ 28 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ ಎಂದು ಹವಾಮಾನ ಕೇಂದ್ರ ಮಾಹಿತಿ ನೀಡಿದೆ.












Click it and Unblock the Notifications