ಹವಾಮಾನ ವರದಿ; ಕರ್ನಾಟಕ ಕರಾವಳಿಗೆ 4 ದಿನ ಯೆಲ್ಲೋ ಅಲರ್ಟ್
ಬೆಂಗಳೂರು, ಸೆಪ್ಟೆಂಬರ್ 11: ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಮಳೆ ಮುಂದುವರೆಯಲಿದೆ. ಕರಾವಳಿ ಜಿಲ್ಲೆಗಳಿಗೆ 4 ದಿನ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಭಾನುವಾರ 10 ಜಿಲ್ಲೆಗಳಲ್ಲಿ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.
ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಇನ್ನೂ ನಾಲ್ಕು ದಿನ ಮಳೆ ಮುಂದುವರೆಯಲಿದೆ. ಭಾರತೀಯ ಹವಾಮಾನ ಇಲಾಖೆ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದೆ.
ಭಾನುವಾರ ಮಳೆನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಮಳೆಯಾಗಲಿದೆ. ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ಬೆಳವಾವಿ, ಬೀದರ್, ರಾಯಚೂರು ಜಿಲ್ಲೆಗಳಲ್ಲಿ ಮಳೆಯ ಮುನ್ಸೂಚನೆ ನೀಡಲಾಗಿದೆ.

ಬೆಂಗಳೂರಿನಲ್ಲಿಯೂ ಮಳೆ; ಕಳೆದ ವಾರ ಬೆಂಗಳೂರು ನಗರದಲ್ಲಿ ಸುರಿದ ಮಳೆ ಅವಾಂತರ ಸೃಷ್ಟಿ ಮಾಡಿತ್ತು. ಆದರೆ ಕಳೆದ ಮೂರು ದಿನಗಳಿಂದ ಮಳೆ ಅಬ್ಬರ ಕಡಿಮೆಯಾಗಿದೆ. ಆದರೆ ಮೋಡ ಕವಿದ ವಾತಾವರಣವಿದೆ, ಆಗಾಗ ತುಂತುರು ಮಳೆಯಾಗುತ್ತಿದೆ. ನಗರದ ಉಷ್ಣಾಂಶ ಸದ್ಯ 21 ಡಿಗ್ರಿ ಸೆಲ್ಸಿಯಸ್ ಆಗಿದೆ.
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಹಾನಸ, ದಾವಣಗೆರೆ, ಮೈಸೂರು, ಮಂಡ್ಯ ಜಿಲ್ಲೆಗಳಲ್ಲಿ ಭಾನುವಾರ ಮಳೆಯಾಗುವ ಸಾಧ್ಯತೆ ಇದ್ದು, ಯೆಲ್ಲೋ ಅಲರ್ಟ್ ನೀಡಲಾಗಿದೆ.

ಉತ್ತರ ಒಳನಾಡಿನ ಜಿಲ್ಲೆಗಳಾದ ಬಾಗಲಕೋಟೆ, ಗದಗ, ಹಾವೇರಿ, ಕಲಬುರಗಿ, ವಿಜಯಪುರ, ಯಾದಗಿರಿ, ಬೀದರ್ ಮತ್ತು ರಾಯಚೂರು ಜಿಲ್ಲೆಗಳಲ್ಲಿಯೂ ಭಾನುವಾರ ಮಳೆ ಮುನ್ಸೂಚನೆ ಕೊಡಲಾಗಿದೆ.
ಕಳೆದ ಶನಿವಾರ, ಭಾನುವಾರ ಮತ್ತು ಸೋಮವಾರ ಬೆಂಗಳೂರು ನಗರದ ಉತ್ತರ ಭಾಗದಲ್ಲಿ ಭಾರೀ ಮಳೆಯಾಗಿತ್ತು. ಮಹದೇವಪುರ, ಸರ್ಜಾಪುರ, ಹೊರ ವರ್ತುಲ ರಸ್ತೆಗಳಲ್ಲಿ ನೀರು ತುಂಬಿತ್ತು. ಹಲವು ಬಡಾವಣೆಗಳು ಜಲಾವೃತವಾಗಿದ್ದವು. ಆದರೆ ನಗರದ ದಕ್ಷಿಣ ಭಾಗದಲ್ಲಿ ಹೆಚ್ಚು ಮಳೆಯಾಗಿರಲಿಲ್ಲ.
ಮಂಗಳವಾರದ ಬಳಿಕ ನಗರದಲ್ಲಿ ಸಂಜೆ ಮಳೆ ಸ್ಪಲ್ಪ ಬಿಡುವು ನೀಡಿದೆ. ಆಗಾಗ ತುಂತುರು ಮಳೆಯಾಗುತ್ತಿದೆ. ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಭಾನುವಾರವೂ ಉತ್ತರ ಭಾಗದಲ್ಲಿ ಮಳೆ ಸುರಿಯಲಿದೆ. ನಗರದ ದಕ್ಷಿಣ ಭಾಗದಲ್ಲಿ ತುಂತುರು ಮಳೆಯಾಗಲಿದೆ.
ಯೆಲ್ಲೋ ಅಲರ್ಟ್; ಭಾರತೀಯ ಹವಾಮಾನ ಇಲಾಖೆ ಸೆಪ್ಟೆಂಬರ್ 12ರ ಸೋಮವಾರ ಬೆಳಗಾವಿ, ಗದಗ, ಧಾರವಾಡ, ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದೆ.
ಶನಿವಾರವೂ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗಿದೆ. ಜಮೀನಿನಲ್ಲಿ ಕೆಲಸ ಮಾಡುವಾಗ ನಿಂಗಪ್ಪ ಸಂಗವಾರ (44), ರಾಜು ಮಲ್ಲಿಕಾರ್ಜುನ (33) ಸಿಡಿಲು ಬಡಿದು ಮೃತಪಟ್ಟ ಘಟನೆ ಯಾದಗಿರಿ ಜಿಲ್ಲೆಯಲ್ಲಿ ನಡೆದಿದೆ.
ಉಡುಪಿಯಲ್ಲಿ ಸತತವಾಗಿ ಮಳೆ ಸುರಿಯುತ್ತಿದ್ದು 13 ಮನೆಗಳಿಗೆ ಹಾನಿಯಾಗಿದೆ. ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಗಂಡೋರಿ ನಾಲೆಯ ಪ್ರವಾಹದಲ್ಲಿ ಸಿದ್ದಪ್ಪ ಕ್ಯಾಸರ್ ಕೊಚ್ಚಿ ಹೋಗಿದ್ದಾರೆ. ಶವ ಬೆಳಕೋಟಾ ಜಲಾಶಯದ ಸಮೀಪ ಸಿಕ್ಕಿದೆ.
ಕಲಬುರಗಿ, ಯಾದಗಿರಿ, ಬೀದರ್, ರಾಯಚೂರು ಜಿಲ್ಲೆಗಳಲ್ಲಿ ಮಳೆಯಾಗಿದೆ. ಬೀದರ್‌ನಲ್ಲಿ ಒಂದು ಮತ್ತು ಹುಮನಾಬಾದ್‌ನಲ್ಲಿ ಮೂರು ಮನೆಗಳು ಕುಸಿದು ಬಿದ್ದಿವೆ.
ಕೇಂದ್ರ ತಂಡದ ಅಧ್ಯಯನ; ರಾಜ್ಯದಲ್ಲಿ ಮಳೆಯಿಂದ ಆದ ಹಾನಿಯ ಬಗ್ಗೆ ಕೇಂದ್ರದ ತಂಡ ಅಧ್ಯಯನ ನಡೆಸಿದೆ. ಒಟ್ಟು ಮೂರು ತಂಡಗಳು ವಿವಿಧ ಜಿಲ್ಲೆಗಳಲ್ಲಿ ಪರಿಶೀಲನೆ ನಡೆಸಿದ್ದು, ಜಿಲ್ಲಾಡಳಿತದ ಜೊತೆ ಸಭೆ ನಡೆಸಿ ಮಾಹಿತಿ ಸಂಗ್ರಹ ಮಾಡಿವೆ.
ರೈತರು ಬೆಳೆಯುವ ಪ್ರತಿಯೊಂದು ಬೆಳೆಗಳನ್ನೂ ಹಾಗೂ ಕರಾವಳಿ ಪ್ರದೇಶದಲ್ಲಿ ಮೀನುಗಾರಿಕಾ ಬೋಟ್ ಹಾಗೂ ಪರಿಕರಗಳನ್ನು ವಿಮಾ ವ್ಯಾಪ್ತಿಗೆ ತರುವಂತೆ ಪ್ರೋತ್ಸಾಹಿಸಬೇಕು ಎಂದು ಜಿಲ್ಲಾಡಳಿತಕ್ಕೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ಕೇಂದ್ರ ಮಳೆಹಾನಿ ಅಧ್ಯಯನ ತಂಡದ ಮುಖ್ಯಸ್ಥ ಹಾಗೂ ಕೇಂದ್ರ ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ ಆಶೀಶ್ ಕುಮಾರ್ ಉಡುಪಿ ಜಿಲ್ಲೆಯಲ್ಲಿ ಮಳೆಹಾನಿ ಪರಿಸ್ಥಿತಿಯ ಅಧ್ಯಯನ ನಡೆಸಿದರು, ಜಿಲ್ಲಾಡಳಿತದಿಂದ ನಷ್ಟದ ಅಂಕಿ ಅಂಶಗಳ ವಿವರ ಪಡೆದರು.
ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಸೇರಿದಂತೆ ಮತ್ತಿತರ ಬೆಳೆ ವಿಮೆಗೆ ಸರ್ಕಾರವು ಪ್ರೀಮಿಯಂ ಹಣವನ್ನು ಶೇ.98 ರಷ್ಟು ತುಂಬುತ್ತಿದ್ದು, ಬಾಕಿ ಉಳಿದ ಶೇ. 2 ರಷ್ಟು ಹಣವನ್ನು ರೈತರು ಪಾವತಿಸಿದ್ದಲ್ಲಿ ರೈತರು ತಮಗಾದ ಬೆಳೆ ನಷ್ಠ ಪರಿಹಾರವನ್ನು ಪಡೆಯಬಹುದು. ಈ ಬಗ್ಗೆ ರೈತರಲ್ಲಿ ಅರಿವು ಮೂಡಿಸಬೇಕು, ಹೆಚ್ಚಿನ ಸಂಖ್ಯೆಯಲ್ಲಿ ಬೆಳೆ ವಿಮೆ ವ್ಯಾಪ್ತಿಗೆ ರೈತರನ್ನು ಒಳಪಡಿಸಬೇಕು ಎಂದು ನಿರ್ದೇಶನ ನೀಡಿದರು.
ಮೀನುಗಾರಿಕೆಗೆ ತೆರಳುವ ಬೋಟ್‌ಗಳು ಕಡ್ಡಾಯವಾಗಿ ವಿಮೆಯನ್ನು ಮಾಡಿಸಲು ಮುಂದಾಗಬೇಕು. ವಿಮೆ ನೋಂದಣಿಯಿಂದ ಬೋಟ್‌ಗಳಿಗೆ ನಷ್ಠ ಉಂಟಾದಾಗ ಹೆಚ್ಚಿನ ಪರಿಹಾರವನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಕರೆ ನೀಡಿದರು.












Click it and Unblock the Notifications