Rain Alert: ಕರಾವಳಿಗೆ ರಣಮಳೆ ಮುನ್ಸೂಚನೆ! ಇಂದು 8 ಜಿಲ್ಲೆಗಳಿಗೆ ಅಲರ್ಟ್, ಶಾಲೆಗಳಿಗೆ ರಜೆ ಘೋಷಣೆ
Karnataka Rains: ಕರ್ನಾಟಕದಾದ್ಯಂತ ಅಬ್ಬರಿಸುತ್ತಿರುವ ಮುಂಗಾರು ಮಳೆಯು ಕರಾವಳಿಗೆ ಬಿಟ್ಟು ಬಿಡದೇ ಸುರಿಯಲಿದೆ. ಮುಂದಿನ ಒಂದು ವಾರಗಳ ಕಾಲ ರಾಜ್ಯದ ಕರಾವಳಿಗೆ ಭಾರೀ ವರುಣಾತಂಕ ಎದುರಾಗಿದೆ. ಮಲೆನಾಡು ಹಾಗೂ ಒಂದೆರಡು ಒಳನಾಡು ಜಿಲ್ಲೆಗಳಿಗೆ ಮುಂದಿನ ಎರಡು ದಿನ ಧಾರಕಾರ ಮಳೆ ನಿರೀಕ್ಷೆ ಇದೆ. ಆದರೆ ಕರಾವಳಿಗೆ ಗರಿಷ್ಠ 200 ಮಿಲಿ ಮೀಟರ್ ವರೆಗೆ ಬಿರುಗಾಳಿ ಸಹಿತ ಮಳೆ ಎಚ್ಚರಿಕೆ ನೀಡಲಾಗಿದೆ. ಇಂದು ಶನಿವಾರ ಶಾಲೆಗಳಿಗೆ ರಜೆ ನೀಡಲಾಗಿದೆ.
ಮುಂಗಾರಿನ ಮೂರು ತಿಂಗಳು (ಜೂನ್-ಆಗಸ್ಟ್) ಕಳೆದಿದ್ದೇವೆ. ಮುಂದಿನ ಒಂದು ತಿಂಗಳು ಸಹ ಉತ್ತಮ ಮಳೆ ಸಾಧ್ಯತೆ ಇದೆ. ಬೆಂಗಳೂರು, ಶಿವಮೊಗ್ಗ, ಹಾವೇರಿ, ಧಾರವಾಡ, ಬೆಳಗಾವಿ, ದಾವಣಗೆರೆ, ಉತ್ತರ ಕನ್ನಡ, ಉಡುಪಿ, ಚಾಮರಾಜನಗರ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಮಳೆ ಮುಂದುವರಿದಿದೆ. ಇಂದು ಶನಿವಾರ ಒಟ್ಟು 08 ಜಿಲ್ಲೆಗಳಿಗೆ ಭಾರೀ ಮಳೆ ಎಚ್ಚರಿಕೆ ನೀಡಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಇಂದು ಮತ್ತು ನಾಳೆ ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಜಿಲ್ಲೆಗಳಲ್ಲಿ ರಣ ಮಳೆ ಸುರಿಯಲಿದ್ದು, ಆರೆಂಜ್ ಅಲರ್ಟ್ ನೀಡಲಾಗಿದೆ. ಒಳನಾಡಿನ ಬೆಳಗಾವಿ, ಧಾರವಾಡ, ಚಿಕ್ಕಮಗಳೂರು, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಇವತ್ತು ಗರಿಷ್ಠ 115 ಮಿಲಿ ಮೀಟರ್ ಮಳೆ ಸಂಭವವಿದೆ. ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ಇನ್ನುಳಿದಂತೆ ರಾಜ್ಯದ ಇತರ ಜಿಲ್ಲೆಗಳಲ್ಲಿ ಸಾಧಾರಣ ಮಳೆ ಆಗಬಹುದು.
ಹವಾಮಾನದಲ್ಲಿನ ನಿರಂತರ ಬದಲಾವಣೆಗಳು ಆಗುತ್ತಿವೆ. ಸದ್ಯ ಚಂಡಮಾರುತ ಪ್ರಸರಣವು ಬಂಗಾಳಕೊಲ್ಲಿಯ ನೈಋತ್ಯ ಭಾಗದಲ್ಲಿ ಸಂಭವಿಸಿದೆ. ಇದರಿಂದ ಕರ್ನಾಟಕದ ಬೆಂಗಳೂರು, ಕೋಲಾರ, ಚಿಕ್ಕಮಗಳೂರು, ರಾಮನಗರ, ಚಿತ್ರದುರ್ಗ, ದಾವಣಗೆರೆ, ಬೆಳಗಾವಿ, ಹಾವೇರಿ, ಹಾಸನ ಹೀಗೆ ರಾಜ್ಯದ ಬಹುತೇಕ ಎಲ್ಲ ಭಾಗಗಳಲ್ಲಿ ಉತ್ತಮ ಮಳೆ ಆಗುತ್ತಿದೆ. ಸೋಮವಾರದಿಂದ ಒಳನಾಡಿನಲ್ಲಿ ಮಳೆ ಕೊಂಚ ಕಡಿಮೆ ಆಗುವ ಲಕ್ಷಣಗಳು ಗೋಚರಿಸಿವೆ.
ಭಾರೀ ಮಳೆಗೆ ಶಾಲೆಗಳಿಗೆ ರಜೆ ಘೋಷಣೆ
ಕರ್ನಾಟಕ ಕರಾವಳಿ ಹಾಗೂ ಮಲೆನಾಡಿನಗೆ ಮಳೆ ಅಬ್ಬರ ಮುಂದುವರಿಯಲಿದೆ. ಇಂದು ಸಹ ಚಿಕ್ಕಮಗಳೂರಿಗೆ ಭಾರೀ ಮಳೆ ಕಾರಣಕ್ಕೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ಮಳೆ ಮಾಹಿತಿ ಅರಿತ ಜಿಲ್ಲಾಡಳಿತವು ಶಾಲೆಗಳು ಮತ್ತು ಅಂಗನವಾಡಿಗಳಿಗೆ ಶನಿವಾರವು ರಜೆ ಘೋಷಿಸಿದೆ. ಶುಕ್ರವಾರ ರಜೆ ನೀಡಲಾಗಿತ್ತು. ಅದೀಗ ಮುಂದುವರಿದಿದೆ. ಸೋಮವಾರದಿಂದ ಎಂದಿನಂತೆ ಶಾಲೆಗಳು ತೆರೆಯುವ ಸಾಧ್ಯತೆ ಇದೆ.
ಇನ್ನೂ ಉಡುಪಿ, ಮಂಗಳೂರು, ದಕ್ಷಿಣ ಕನ್ನಡ, ಶಿವಮೊಗ್ಗ ಭಾಗಗಳಲ್ಲಿ ಮುಂದಿನ ಎರಡು ದಿನಗಳಲ್ಲಿ ಮಳೆ ಹೆಚ್ಚಾದರೆ ಮುಂದಿನ ವಾರ ಮತ್ತೆ ಆಯಾ ಜಿಲ್ಲೆಗಳ ಶಾಲೆಗಳಿಗೆ ಮಳೆ ರಜೆ ಘೋಷಣೆ ಆಗುವ ಸಂಭವವೂ ಇದೆ. ಮಕ್ಕಳ ರಕ್ಷಣೆ, ಹಿತದೃಷ್ಟಿಯಿಂದ ಜಿಲ್ಲಾಧಿಕಾರಿಗಳು ಈ ನಿರ್ಧಾರ ಕೈಗೊಳ್ಳುತ್ತಾರೆ.
ಬೆಂಗಳೂರಿನಲ್ಲಿ ಸಾಮಾನ್ಯ ಮಳೆ, ಚಳಿ
ರಾಜಧಾನಿಯಲ್ಲಿ ಮುಂದಿನ ಮೂರು ದಿನಗಳ ಕಾಲ ಇದೇ ರೀತಿ ಹಗುರ ಮಳೆ ಹಾಗೂ ತಂಪು ವಾತಾವರಣ ಸ್ಥಿತಿ ಮುಂದುವರಿಯಲಿದೆ. ಮಬ್ಬು ಕವಿದ ವಾತಾವರಣದ ಸ್ಥಿತಿ ಕಂಡು ಬರಲಿದೆ. ನಗರದಲ್ಲಿ ಗರಿಷ್ಠ ತಾಪಮಾನ 28-27 ಮತ್ತು ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಬೆಂಗಳೂರು ಕೇಂದ್ರ ಮಾಹಿತಿ ನೀಡಿದೆ.












Click it and Unblock the Notifications