Karnataka rain: ಕರ್ನಾಟಕದ ಈ ಜಿಲ್ಲೆಗಳಿಗೆ 'ಯೆಲ್ಲೋ ಅಲರ್ಟ್', ಸೆ.29ರ ತನಕ ಮಳೆ, ಎಲ್ಲೆಲ್ಲಿ
ಬೆಂಗಳೂರು, ಸೆಪ್ಟಂಬರ್ 24: ಕರ್ನಾಟಕದ ಒಳನಾಡು ಜಿಲ್ಲೆಗಳಲ್ಲಿ ಸುರಿಯುತ್ತಿರುವ ಮುಂಗಾರು ಮಳೆಯು ಇನ್ನೂ ಕೆಲವು ದಿನ ಇದೇ ಭಾಗದ ಜಿಲ್ಲೆಗಳನ್ನು ಆವರಿಸಲಿದೆ. ಈ ಪೈಕಿ ನಾಳೆ ಸೋಮವಾರ ಸೆಪ್ಟಂಬರ್ 25ರಿಂದ ಐದು ದಿನ ಭಾರೀ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕರ್ನಾಟಕ ಉತ್ತರ ಒಳನಾಡು ಭಾಗದಲ್ಲಿ ಮುಂಗಾರು ಸಕ್ರಿಯಗೊಂಡಿದೆ. ಮುಂದಿನ ಐದು ದಿನಗಳಲ್ಲಿ ವಿವಿಧೆಡೆ ಸಾಧಾರಣದಿಂದ ಭಾರೀ ಮಳೆ ಸಂಭವವಿದೆ. ಒಂದೆರಡು ಜಿಲ್ಲೆಗಳಲ್ಲಿ ಗುಡುಗು ಮಿಂಚು ಸಹಿತ ಅತ್ಯಧಿಕ ಮಳೆ ಆಗಲಿದೆ.

ಮುಂದಿನ ಐದು ದಿನಗಳ ಪೈಕಿ ಬೀದರ್, ಕಲಬುರಗಿ ಜಿಲ್ಲೆಗಳಲ್ಲಿ ಸೋಮವಾರ, ವಿಜಯಪುರ ಜಿಲ್ಲೆಯಲ್ಲಿ ಸೆಪ್ಟಂಬರ್ 26ಕ್ಕೆ, ಸೆಪ್ಟಂಬರ್ 28ರಂದು ಕೊಪ್ಪಳ್ಳ, ವಿಜಯಪುರ ಮತ್ತು ರಾಯಚೂರು ಹಾಗೂ ಸೆಪ್ಟಂಬರ್ 29ರಂದು ಬೆಳಗಾವಿ, ಧಾರವಾಡ, ಕಲಬುರಗಿ, ರಾಯಚೂರು ಜಿಲ್ಲೆಗಳ ವಿವಿಧೆ ವರುಣಾರ್ಭಟ ಕಂಡು ಬರಲಿದ್ದು, ಆಯಾ ದಿನಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಉಳಿದ ದಿನಗಳಲ್ಲಿ ಗದಗ, ಹಾವೇರಿ, ಬಾಗಲಕೋಟೆ ಸೇರಿದಂತೆ ಅನೇಕ ಕಡೆಗಳಲ್ಲಿ ಹಗುರದಿಂದ ಸಾಧಾರಣವಾಗಿ ಆಗಾಗ ಮಳೆ ಬರಲಿದೆ. ಇನ್ನೂ ದಕ್ಷಿಣ ಒಳನಾಡಿನಲ್ಲಿ ಅಷ್ಟಾಗಿ ಮಳೆ ಬರುವ ಮುನ್ಸೂಚನೆ ಲಭ್ಯವಾಗಿಲ್ಲ. ರಾಮನಗರದಲ್ಲಿ ಸೋಮವಾರ ಒಂದು ದಿನ ಯೆಲ್ಲೋ ಅಲರ್ಟ್ ನೀಡಲಾಗಿದೆ.
ದಕ್ಷಿಣ ಒಳನಾಡು-ಕರಾವಳಿ ಮುನ್ಸೂಚನೆ ಮಾಹಿತಿ
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ಹಾಸನ, ಮಂಡ್ಯ, ಮೈಸೂರು, ತುಮಕೂರು, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ ಸೇರಿದಂತೆ ಒಳನಾಡು ಜಿಲ್ಲೆಗಳಲ್ಲಿ ಅಲ್ಲಲ್ಲಿ ಮಳೆ ಬರಲಿದೆ.

ಕರಾವಳಿ ಭಾಗದ ಜಿಲ್ಲೆಗಳಲ್ಲಿ ಮುಂದಿನ ಐದು (ಸೆ.29ತನಕ) ದಿನವೂ ಮಳೆ ತುಸು ಬಿರುಸಾಗಿರಲಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಸಾಧಾರಣವಾಗಿ ಗುಡುಗು ಸಹಿತ ಮಳೆ ಆಗಲಿದೆ. ಈ ಪೈಕಿ ದಕ್ಷಿಣ ಕನ್ನಡದಲ್ಲಿ ಮಾತ್ರ ಸೆಪ್ಟಂಬರ್ 25 ಮತ್ತು 29ರಂದು ಅಧಿಕ ಮಳೆ ಆಗುವ ಸಂಬಂಧ ಯೆಲ್ಲೋ ಅಲರ್ಟ್ ನೀಡಲಾಗಿದೆ.
ಕಳೆದ 24 ಗಂಟೆಗಳಲ್ಲಿ ಕಲ್ಯಾಣ ಕರ್ನಾಟಕ ಮತ್ತು ಕರಾವಳಿ ಭಾಗದ ಅಲ್ಲಲ್ಲಿ ಮಳೆ ಬಿರುಸಾಗಿತ್ತು. ರಾಯಚೂರು, ತುಮಕೂರು, ಮಂಗಳೂರು, ದಕ್ಷಿಣ ಕನ್ನಡ, ಯಾದಗಿರಿ ಜಿಲ್ಲೆಗಳಲ್ಲಿ 9-7 ಸೆಂಟಿ ಮೀಟರ್ ಮಳೆ ಬಿದ್ದಿದೆ. ರಾಜ್ಯದ ವಿವಿಧೆಡೆ ತಾಪಮಾನವು ಸಹ ಏರಿಕೆ ಗಿದೆ. ಕೆಲವೆಡೆ ಮಳೆಗಾಲ ಕೆಲವೆಡೆ ಬಿರು ಬೇಸಿಗೆಯ ವಾತಾವರಣ ಕಂಡು ಬಂದಿದೆ.












Click it and Unblock the Notifications