Rain Alert: ರಾಜ್ಯದ ಈ ಜಿಲ್ಲೆಗಳಿಗೆ ಮಳೆ ಎಚ್ಚರಿಕೆ ಕೊಟ್ಟ ಹವಾಮಾನ ಇಲಾಖೆ
ರಾಜ್ಯದಲ್ಲಿ ಬೇಸಿಗೆಯಲ್ಲಿ ಹಲವು ಕಡೆಗಳಲ್ಲಿ ಮಳೆಯಾಗುತ್ತಿದ್ದು ಹೆಚ್ಚುತ್ತಿರುವ ಬಿಸಿಲಿನ ನಡುವೆ ತಂಪೆರೆಯುತ್ತಿದೆ. ಮೈಸೂರು, ಚಾಮರಾಜನಗರ, ಕೊಡಗು ಜಿಲ್ಲೆಯ ಹಲವು ಕಡೆಗಳಲ್ಲಿ ಕಳೆದ ಮೂರ್ನಾಲ್ಕು ದಿನಗಳಲ್ಲಿ ಉತ್ತಮ ಮಳೆಯಾಗಿದೆ. ಗುರುವಾರ ಕೂಡ ರಾಜ್ಯದ ಹಲವು ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸಹಿತ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ.
ಗುರುವಾರ ಸಂಜೆ ಅಥವಾ ರಾತ್ರಿ ವೇಳೆಗೆ ರಾಜ್ಯದ ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಯ ಹಲವು ಸ್ಥಳಗಳಲ್ಲಿ ಗುಡುಗು, ಮಿಂಚು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ಕೊಟ್ಟಿದೆ.

ಮಳೆಯಿಂದಾಗಿ ಈ ಭಾಗದ ಕೆಲವು ಪ್ರದೇಶಗಳಲ್ಲಿ ತಾತ್ಕಾಲಿಕವಾಗಿ ವಿದ್ಯುತ್ ವ್ಯತ್ಯಯ, ಸಣ್ಣ ಪ್ರಮಾಣದ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆ ಇದ್ದು, ಗಾಳಿಯಿಂದಾಗಿ ಕೊಂಬೆಗಳು ಮುರಿದು ಬೀಳಬಹುದು ಎಂದು ಹವಾಮಾನ ಇಲಾಖೆ ವರದಿಯಲ್ಲಿ ತಿಳಿಸಿದೆ.
ಮಾರ್ಚ್ ಕೊನೆಯ ವಾರದಿಂದ ಉತ್ತಮ ಮಳೆ
ರಾಜ್ಯದಲ್ಲಿ ಈ ಬಾರಿ ಪೂರ್ವ ಮುಂಗಾರು ಮಳೆ ಉತ್ತಮವಾಗಿ ಆಗಬಹುದು ಎಂದು ನಿರೀಕ್ಷೆ ಮಾಡಲಾಗಿದೆ. ಮಾರ್ಚ್ ಕೊನೆಯ ವಾರ ರಾಜ್ಯದಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ. ಈಗಾಗಲೇ ರಾಜ್ಯದ ಹಲವು ಜಿಲ್ಲೆಗಳು ವರ್ಷದ ಮೊದಲ ಮಳೆಯ ದರ್ಶನ ಪಡೆದಿವೆ. ಉಗಾದಿ ಹಬ್ಬದ ವೇಳೆಗೆ ಮತ್ತಷ್ಟು ಜಿಲ್ಲೆಗಳಿಗೆ ಮಳೆರಾಯನ ದರ್ಶನವಾಗುವ ಸಾಧ್ಯತೆ ಇದೆ.ಇನ್ನೂ ಹಲವು ಜಿಲ್ಲೆಗಳಿಗೆ ಮಳೆ ಎಚ್ಚರಿಕೆ
ಬೀದರ್, ಕಲಬುರಗಿ, ವಿಜಯಪುರ, ಕಲಬುರಗಿ, ಬೆಳಗಾವಿ, ಕೊಪ್ಪಳ, ಹಾವೇರಿ, ಬಾಗಲಕೋಟೆ, ಧಾರವಾಡ, ಗದಗ, ಬಳ್ಳಾರಿ, ವಿಜಯನಗರ, ದಾವಣಗೆರೆ ಜಿಲ್ಲೆಗಳಲ್ಲಿ ಕೂಡ ಚದುರಿದಂತೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ. ರಾಜ್ಯದ ಬಹುತೇಕ ಕಡೆಗಳಲ್ಲಿ ಈಗಾಗಲೇ ಮೊದಲ ಮಳೆ ದರ್ಶನ ನೀಡಿದಂತಾಗಿದೆ.
ಎಲ್ಲೆಲ್ಲಿ ಎಷ್ಟು ಮಳೆಯಾಗಿದೆ?
ಗುರುವಾರ ರಾತ್ರಿ 8 ಗಂಟೆಯ ವೇಳೆಗೆ ಶಿವಮೊಗ್ಗ ಜಿಲ್ಲೆಯ ಹಿರೇಬಿಳಗುಂಜಿಯಲ್ಲಿ 43.50 ಮಿ.ಮೀ ಮಳೆ ದಾಖಲಾಗಿದ್ದರೆ, ತ್ಯಾಗರ್ತಿಯಲ್ಲಿ 34.50 ಮಿಮೀ ಮಳೆ ದಾಖಲಾಗಿದೆ. ಹಾವೇರಿ ಜಿಲ್ಲೆಯ ಘಲಾಪುಜಿಯಲ್ಲಿ 43.50 ಮಿಮೀ ಮಳೆಯಾಗಿದ್ದು, ವಿಜಯಪುರ ಜಿಲ್ಲೆಯ ಮಡಿಕೇಶ್ವರದಲ್ಲಿ 30 ಮಿಮೀ ಮಳೆ ಆಗಿದೆ. ಉಡುಪಿ ಜಿಲ್ಲೆಯ ಮಾಳದಲ್ಲಿ 28.50 ಮಿಮೀ ಮಳೆಯಾಗಿದೆ ಎಂದು ಹವ್ಯಾಸ ಹವಾಮಾನ ವೀಕ್ಷಕ ರವಿಕೀರ್ತಿಗೌಡ ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಶುಕ್ರವಾರ ಕೂಡ ರಾಜ್ಯದಲ್ಲಿ ಮಳೆ ಮುಂದುವರೆಯುವ ಸಾಧ್ಯತೆ ಇದೆ.












Click it and Unblock the Notifications