ಹಿಂಗಾರು ಮಳೆ ಹಿನ್ನಡೆಯಿಂದ ಬಳಲಿದ್ದ ರೈತರಿಗೆ ಸಿಹಿಸುದ್ದಿ

ಬೆಂಗಳೂರು, ಡಿಸೆಂಬರ್ 3: ಹಿಂಗಾರು ಮಳೆಯ ಹಿನ್ನಡೆಯಿಂದಾಗಿ ಬಳಲಿದ್ದ ರೈತರಿಗೆ ಇದೀಗ ಸಿಹಿಸುದ್ದಿಯೊಂದು ಬಂದಿದೆ, ಡಿಸೆಂಬರ್ 4ರಿಂದ ಸುಮಾರು ನಾಲ್ಕು ದಿನಗಳ ಕಾಲ ಕರ್ನಾಟಕ ಸೇರಿ ದಕ್ಷಿಣ ಭಾರತದ ರಾಜ್ಯಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಹಿಂಗಾರು ಅವಧಿ ಆರಂಭವಾದ ಅ.1 ರಿಂದ ಡಿ.2ರವರೆಗೆ ವಾಡಿಕೆಯಂತೆ ಸರಾಸರಿ 179 ಮಿ.ಮೀ. ಮಳೆಯಾಗಬೇಕು. ಆದರೆ, 93.5 ಮಿ.ಮೀ. ಮಳೆಯಾಗಿದ್ದು, ಶೇ.48 ಮಳೆ ಕೊರತೆಯಾಗಿದೆ. ಬಂಗಾಳಕೊಲ್ಲಿಯಲ್ಲಿ ಹಿಂಗಾರು ಚುರುಕಾಗುವ ವಾತಾವರಣ ನಿರ್ಮಾಣವಾಗಿದ್ದು, ಮಂಗಳವಾರದಿಂದ ನಾಲ್ಕು ದಿನಗಳ ಕಾಲ ರಾಜ್ಯಾದ್ಯಂತ ಹಲವೆಡೆ ಮಳೆಯಾಗುವ ನಿರೀಕ್ಷೆ ಇದೆ.
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ: ರಾಜ್ಯದ ಹಲವೆಡೆ ಮಳೆ ಸಾಧ್ಯತೆ
ಕರಾವಳಿಯ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಒಳನಾಡಿನ ಬಳ್ಳಾರಿ, ಚಾಮರಾಜನಗರ, ಚಿಕ್ಕಬಳ್ಳಾಪುರ, ದಾವಣಗೆರೆ, ಹಾಸನ ಜಿಲ್ಲೆಗಳಲ್ಲಿ ತುಂತುರು ಅಥವಾ ಸಾಧಾರಣ ಮಳೆ, ಮಲೆನಾಡಿನ ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ವಾಯುಭಾರ ಕುಸಿತ: ಬೆಂಗಳೂರಲ್ಲಿ ನಾಳೆಯಿಂದ ಮೂರು ದಿನ 'ಗಜ'ಮಳೆ
ಬೆಂಗಳೂರು ನಗರದಲ್ಲಿ ಗರಿಷ್ಠ 28.8ಡಿಗ್ರಿ ಸೆಲ್ಸಿಯಸ್, ಕನಿಷ್ಠ 15.6 ಡಿಗ್ರಿ ಸೆಲ್ಸಿಯಸ್, ಕೆಐಎಎಲ್ ಗರಿಷ್ಠ 27.8ಡಿಗ್ರಿ ಸೆಲ್ಸಿಯಸ್, ಗರಿಷ್ಠ 15.2 ಡಿಗ್ರಿ ಸೆಲ್ಸಿಯಸ್, ಎಚ್‌ಎಎಲ್‌ನಲ್ಲಿ ಗರಿಷ್ಠ 27.4 ಡಿಗ್ರಿ ಸೆಲ್ಸಿಯಸ್, ಕನಿಷ್ಠ 15.0 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.