ಯಾರ ಮಕ್ಕಳನ್ನೂ ನೇಣಿಗೆ ಹಾಕಬೇಡಿ: ಸಿಎಂಗೆ ಈಶ್ವರಪ್ಪ ಮನವಿ
ಬೆಂಗಳೂರು, ಸೆ 16: ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ನಡುವಿನ ವಾಗ್ದಾಳಿ, ಅದಕ್ಕೆ ತಿರುಗೇಟು ರಾಜ್ಯ ರಾಜಕಾರಣದಲ್ಲಿ ಯಥಾವತ್ತಾಗಿ ಮುಂದುವರಿದಿದೆ.
ನನ್ನ ಮಕ್ಕಳು ಮರಳು ಗಣಿಗಾರಿಕೆಯಲ್ಲಿ ತೊಡಗಿದ್ದು ಸಾಬೀತಾದಾರೆ, ಅವರನ್ನು ನೇಣಿಗೆ ಹಾಕುತ್ತೇನೆ ಎನ್ನುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಗೆ ವಿಧಾನಪರಿಷತ್ ಪ್ರತಿಪಕ್ಷದ ನಾಯಕ ಈಶ್ವರಪ್ಪ ವ್ಯಂಗ್ಯವಾಗಿ ತಿರುಗೇಟು ನೀಡಿದ್ದಾರೆ.
ಮುಖ್ಯಮಂತ್ರಿಗಳೇ, ಯಾರ ಮಕ್ಕಳನ್ನು ನೇಣಿಗೆ ಹಾಕುವುದು ಬೇಡ. ನನಗೂ ಮಕ್ಕಳಿದ್ದಾರೆ ಸ್ವಾಮಿ ಎಂದು ಈಶ್ವರಪ್ಪ ತನ್ನ ಎಂದಿನ ಶೈಲಿಯಲ್ಲಿ ಮುಖ್ಯಮಂತ್ರಿಗಳ ವಿರುದ್ದ ಕಿಡಿಕಾರಿದ್ದಾರೆ. (ಸಿದ್ದುಗೆ ಲಕ್ವ ಹೊಡೀಲಿ)
ಪಕ್ಷ ಸಂಘಟನೆ ಸಂಬಂಧ RSS ಮುಖಂಡರ ಸಮನ್ವಯ ಬೈಠಕ್‌ನಲ್ಲಿ ಮಾರ್ಗದರ್ಶನ ಪಡೆದ ಒಂದು ದಿನದ ನಂತರ, ನಗರದ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪದ ರಿಸಾರ್ಟಿನಲ್ಲಿ ಮಂಗಳವಾರ (ಸೆ 15) ಮಾತಾನಾಡುತ್ತಿದ್ದ ಈಶ್ವರಪ್ಪ, ಯಾರ ಮಕ್ಕಳೂ ನೇಣಿಗೆ ಶರಣಾಗುವುದು ಬೇಡ ಎಂದು ಹೇಳಿದ್ದಾರೆ.
ಈಶ್ವರಪ್ಪ ಅವರು ನನ್ನ ಮಕ್ಕಳು ಅಕ್ರಮ ಮರಳು ದಂಧೆಯಲ್ಲಿ ಶಾಮೀಲಾಗಿದ್ದಾರೆಂದು ಆರೋಪಿಸಿದ್ದಾರೆ. ನನ್ನ ಮಕ್ಕಳು ಅಕ್ರಮ ಮರಳು ದಂಧೆಯಲ್ಲಿ ಭಾಗಿಯಾಗಿದ್ದರೆ ಅವರನ್ನು ನೇತು ಹಾಕುವೆ ಎಂದು ಸಿಎಂ ಸಿದ್ದರಾಮಯ್ಯ ಮೈಸೂರಿನಲ್ಲಿ ಗುಡುಗಿದ್ದರು. (ನನ್ನ ಮಕ್ಕಳನ್ನು ನೇತು ಹಾಕುವೆ ಅಂದ್ರು ಸಿಎಂ)

ಬಿಜೆಪಿ ತಿರುಮಂತ್ರ
ರಾಜ್ಯದಲ್ಲಿ ಅಹಿಂದ ಹೆಸರು ಹೇಳಿ ಅಧಿಕಾರಕ್ಕೆ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅಹಿಂದ ವರ್ಗದ ಕಲ್ಯಾಣಕ್ಕೆ ಏನೂ ಕೆಲಸ ಮಾಡಿಲ್ಲ ಎನ್ನುವುದನ್ನು ಅಂಕಿಅಂಶ ಸಮೇತ ಜನತೆಯ ಮುಂದೆ ಇಡಲು ಬಿಜೆಪಿ ನಿರ್ಧರಿಸಿದೆ.

ಸಿಐಡಿ ತನಿಖೆ ನಡೆಸಿ
ಎಂದಿನಂತೆ ಸಿದ್ದು ವಿರುದ್ದ ವಾಗ್ದಾಳಿ ನಡೆಸಿದ ಈಶ್ವರಪ್ಪ, ನನ್ನ ಹೇಳಿಕೆಯಿಂದ ಮುಖ್ಯಮಂತ್ರಿಗಳಿಗೆ ನೋವಾಗಿದ್ದರೆ ಅದಕ್ಕೆ ವಿಷಾದಿಸುತ್ತೇನೆ. ಯಾರ ಮಕ್ಕಳೂ ನೇಣಿಗೆ ಶರಣಾಗುವುದು ಬೇಡ. ಅಕ್ರಮ ಮರುಳುಗಾರಿಕೆಯ ಬಗ್ಗೆ ಸಿಐಡಿ ತನಿಖೆ ನಡೆಸಲಿ ಎಂದು ಈಶ್ವರಪ್ಪ ಆಗ್ರಹಿಸಿದ್ದಾರೆ.

ಬಿಬಿಎಂಪಿ ಚರ್ಚೆ
ಬಾಯಿಗೆ ಬಂದ ತುತ್ತು ಕೈಪಾಲಾದ ಬಿಬಿಎಂಪಿ ಮೇಯರ್ ಚುನಾವಣೆಯಲ್ಲಿ ತನ್ನ ವೈಫಲ್ಯದ ಬಗ್ಗೆ ಬಿಜೆಪಿ ನಾಯಕರು ಗಂಭೀರ ಚರ್ಚೆ ನಡೆಸಿದ್ದಾರೆ. ಇಂತಹ ವೈಫಲ್ಯ ಮುಂದಿನ ದಿನಗಳಲ್ಲಿ ನಡೆಯದಂತೆ ಎಚ್ಚರಿಕೆ ವಹಿಸಲು ನಿರ್ಧರಿಸಲಾಗಿದೆ ಎನ್ನಲಾಗುತ್ತಿದೆ. ಆದರೆ ಬಿಬಿಎಂಪಿ ಬಗ್ಗೆ ಸಭೆಯಲ್ಲಿ ಯಾವುದೇ ಚರ್ಚೆ ನಡೆದಿಲ್ಲ ಎಂದು ಆರ್ ಅಶೋಕ್ ಹೇಳಿದ್ದಾರೆ.

ಕಾಂಗ್ರೆಸ್ ವಿರುದ್ದ ಹೋರಾಟ ತೀವ್ರ
ಸಿದ್ದರಾಮಯ್ಯ ಸರಕಾರದ ವಿರುದ್ದ ಹೋರಾಟ ತೀವ್ರಗೊಳಿಸಲು ಮಂಗಳವಾರ ನಡೆದ ಬಿಜೆಪಿ ಸಭೆಯಲ್ಲಿ ನಿರ್ಧರಿಸಲಾಗಿದೆ. ಇದೇ ತಿಂಗಳ 25ರಂದು ಬಿಜೆಪಿಯ ಮುಖಂಡರು, ಹಾಲಿ ಸಂಸದರು, ಶಾಸಕರ ಸಭೆಯನ್ನು ಕರೆಯಲು ನಿರ್ಧರಿಸಲಾಗಿದ್ದು, ಸಭೆಯಲ್ಲಿ ಹೋರಾಟದ ರೂಪುರೇಷೆ ಅಂತಿಮಗೊಳ್ಳಲಿದೆ.

ಸಭೆಯಲ್ಲಿ ಯಾರು ಯಾರು ಇದ್ದರು?
ಮಂಗಳವಾರ ವಿಮಾನ ನಿಲ್ದಾಣ್ದ ಬಳಿಯ ರಿಸಾರ್ಟಿನಲ್ಲಿ ನಡೆದ ಸಭೆಯಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಮತ್ತು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮುರಳೀಧರ್ ರಾವ್, ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಈಶ್ವರಪ್ಪ, ಪ್ರಲ್ಹಾದ್ ಜೋಶಿ, ಆರ್. ಅಶೋಕ್, ಶೋಭಾ ಕರಂದ್ಲಾಜೆ, ಸಿ.ಟಿ. ರವಿ, RSS ಮುಖಂಡ ಸಂತೋಷ್ ಮುಂತಾದವರು ಪಾಲ್ಗೊಂಡಿದ್ದರು.












Click it and Unblock the Notifications