ವಿದೇಶದೊಂದಿಗೆ ಅದಿರು ಅಕ್ರಮ ವಹಿವಾಟು; ಜನಾರ್ದನ ರೆಡ್ಡಿಗೆ ಸಂಕಷ್ಟ
ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳು ಇರುವಾಗ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಜನಾರ್ದನ ರೆಡ್ಡಿಗೆ ಸಂಕಷ್ಟ ಎದುರಾಗಿದೆ.
ಬೆಂಗಳೂರು, ಮಾರ್ಚ್ 09; ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ, ಮಾಜಿ ಸಚಿವ ಜನಾರ್ದನ ರೆಡ್ಡಿಗೆ ಮತ್ತೆ ಸಂಕಷ್ಟ ಎದುರಾಗಿದೆ. 7 ರಿಂದ 8 ಮಿಲಿಯನ್ ಮೆಟ್ರಿಕ್ ಟನ್ ಕಬ್ಬಿಣದ ಅದಿರನ್ನು ಅಕ್ರಮವಾಗಿ ವಿವಿಧ ದೇಶಗಳೊಂದಿಗೆ ವಹಿವಾಟು ನಡೆಸಿದ್ದಾರೆ ಎಂಬ ಆರೋಪದ ತನಿಖೆ ಈಗ ಚುರುಕುಗೊಂಡಿದೆ. ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಗಾಲಿ ಜನಾರ್ದನ ರೆಡ್ಡಿ ಜಾಮೀನಿನ ಮೇಲೆ ಜೈಲಿನಿಂದ ಹೊರಬಂದಿದ್ದಾರೆ.
ಜನಾರ್ದನ ರೆಡ್ಡಿ ವಿವಿಧ ದೇಶಗಳಲ್ಲಿ ಬಂಡವಾಳ ಹೂಡಿಕೆ ಮಾಡಿದ್ದಾರೆಂಬ ಆರೋಪ ಸಂಬಂಧದ ಬಂಡವಾಳ ಪತ್ತೆ ಹಚ್ಚಲು ತನಿಖಾ ಸಂಸ್ಥೆಗೆ ಸಹಾಯ ಮಾಡಲು ಸಿಬಿಐ ವಿಶೇಷ ನ್ಯಾಯಾಲಯ ನಾಲ್ಕು ದೇಶಗಳ ಸಕ್ಷಮ ಪ್ರಾಧಿಕಾರಗಳಿಗೆ ನೋಟಿಸ್ ಮೂಲಕ ಮನವಿ ಮಾಡಿದೆ. ಆ ದೇಶಗಳು ಕೋರ್ಟ್ ಮನವಿಗೆ ಒಪ್ಪಿ ಮಾಹಿತಿ ನೀಡಿದರೆ ರೆಡ್ಡಿಗೆ ತೊಂದರೆ ಆಗುವುದು ಖಚಿತ. ಸದ್ಯ ಆ ಕುರಿತ ಯಾವುದೇ ಮಾಹಿತಿ ಸಿಬಿಐಗೆ ಲಭ್ಯವಿಲ್ಲದ ಕಾರಣ ರೆಡ್ಡಿ ಕಾನೂನು ಸಂಕೋಲೆಗೆ ಸಿಕ್ಕಿಕೊಂಡಿಲ್ಲ. ದಾಖಲೆ ಸಿಕ್ಕರೆ ರೆಡ್ಡಿಗೆ ತೊಂದರೆ ಕಟ್ಟಿಟ್ಟ ಬುತ್ತಿ.

ವಿಶೇಷ ಕೋರ್ಟ್ ನ್ಯಾಯಾಧೀಶೆ ಇ. ಇಂದ್ರಕಲಾ, ಸ್ವಿಡ್ಜೆರ್‌ಲ್ಯಾಂಡ್, ಸಿಂಗಾಪುರ, ಯುಎಇ ಮತ್ತು ಐಲ್ ಆಫ್ ಮ್ಯಾನ್ ದೇಶಗಳ ನ್ಯಾಯಾಂಗ ಅಧಿಕಾರಿಗಳಿಗೆ ಪತ್ರದ ಮೂಲಕ ಮಾಹಿತಿ ಕೋರಿದ್ದಾರೆ. ಆರೋಪಿಗೆ ಸಂಬಂಧಿಸಿದಂತೆ ಸಿಬಿಐ ಸಲ್ಲಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಆರ್‌ಪಿಸಿ ಸೆಕ್ಷನ್ 166(ಎ) ಪ್ರಕಾರ ಮನವಿ ಮಾಡುತ್ತಿದ್ದು, ಈ ಪ್ರಕರಣದಲ್ಲಿ ತನಿಖೆಗೆ ಸಹಕಾರ ನೀಡುವಂತೆ ಕೋರುತ್ತಿರುವುದಾಗಿ ನ್ಯಾಯಾಧೀಶರು ಪತ್ರದಲ್ಲಿ ಮನವಿ ಮಾಡಿದ್ದಾರೆ.
ಗಾಲಿ ಜನಾರ್ದನ ರೆಡ್ಡಿಗೆ ಸೇರಿದ ಜಿಎಲ್‌ಎ ಕಂಪನಿಯ ಸ್ವರೂಪ, ಬ್ಯಾಂಕ್ ಖಾತೆಗೆ ಸಂಬಂಧಿಸಿದ ವಿವರ, ಮಾಲೀಕರು ಮತ್ತು ಅಧಿಕೃತವಾಗಿ ಸಹಿ ಹಾಕಿರುವ ವ್ಯಕ್ತಿಯ ವಿವರಗಳು, ಅದರ ಮುಂದಿನ ಫಲಾನುಭವಿಗಳು, ಕಂಪನಿಯ ಷೇರುಗಳ ವಿವರ, ಅದನ್ನು ಖರೀದಿ ಮಾಡಿರುವವರು ಮತ್ತು ಮಾರಾಟ ಮಾಡಿರುವವರು, ಕಂಪನಿಯ ನಿರ್ದೇಶಕರು ಮತ್ತು ಷೇರುದಾರರ ವಿವರ ಸೇರಿದಂತೆ ಲಭ್ಯವಿರುವ ಎಲ್ಲ ಮಾಹಿತಿ ಒದಗಿಸುವಂತೆ ನ್ಯಾಯಾಲಯ ಆ ದೇಶಗಳನ್ನು ಕೋರಿದೆ.
ನ್ಯಾಯಾಧೀಶರು ತಮ್ಮ ಆದೇಶದಲ್ಲಿ ಇದನ್ನು ದಾಖಲಿಸಿದ್ದು, ಸಿಬಿಐ ತನಿಖಾಧಿಕಾರಿಗಳು ಜಿಎಲ್‌ಎ (ಗಾಲಿ ಜನಾರ್ದನ ರೆಡ್ಡಿ) ಟ್ರೇಡಿಂಗ್ ಇಂಟರ್ ನ್ಯಾಶನಲ್ ಪ್ರೈವೇಟ್ ಲಿಮಿಟೆಡ್‌ನ ಸಂಯೋಜನೆಯ ವಿವರಗಳಂತಹ ಮಾಹಿತಿ ಸಂಗ್ರಹಿಸಲು ಕೋರ್ಟ್ ನೆರವನ್ನು ಕೋರಿದ್ದಾರೆ. ಆ ಹಿನ್ನೆಲೆಯಲ್ಲಿ ಈ ಮನವಿ ಮಾಡಲಾಗುತ್ತಿದೆ ಎಂದು ಆದೇಶದಲ್ಲಿ ತಿಳಿಸಿದೆ.

ಪ್ರಕರಣದ ವಿವರ: ಗಾಲಿ ಜನಾರ್ದನ ರೆಡ್ಡಿ 2009-10ರ ಅವಧಿಯಲ್ಲಿ ಸುಮಾರು 7 ರಿಂದ 8 ಮಿಲಿಯನ್ ಮೆಟ್ರಿಕ್ ಟನ್ ಕಬ್ಬಿಣದ ಅದಿರನ್ನು ಅಕ್ರಮವಾಗಿ ವಿವಿಧ ದೇಶಗಳೊಂದಿಗೆ ವಹಿವಾಟು ನಡೆಸಿದ್ದಾರೆ. ಇದರ ಮೊತ್ತವನ್ನು ಆಯಾ ದೇಶಗಳಲ್ಲಿಯೇ ಉಳಿಸಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ. ಅಲ್ಲದೆ, ಜಿಎಲ್‌ಎ ಟ್ರೇಡಿಂಗ್ ಇಂಟರ್ ನ್ಯಾಶನಲ್ ಪ್ರೈವೇಟ್ ಲಿಮಿಟೆಡ್ ಹೆಸರಿನಲ್ಲಿರುವ ಕಂಪನಿ ಮತ್ತು ಬ್ಯಾಂಕ್ ಖಾತೆ ಇದೆಯೇ ಎಂಬುದನ್ನು ಪತ್ತೆ ಹಚ್ಚಬೇಕು ಎಂದು ಸಿಬಿಐ ನ್ಯಾಯಾಲಯವನ್ನು ಕೋರಿತ್ತು.
ಸಿಬಿಐ ಅಧಿಕಾರಿಗಳು ಸಲ್ಲಿಸಿರುವ ಆರೋಪ ಪಟ್ಟಿಯ ಪ್ರಕಾರ ನ್ಯಾಯಾಲಯ ಸಂಜ್ಞೆಯನ್ನು ತೆಗೆದುಕೊಂಡಿದೆ. ಅಲ್ಲದೆ, ಆರೋಪಿಗೆ ಸಮನ್ಸ್‌ನ್ನು ಜಾರಿ ಮಾಡಿದೆ. ತನಿಖೆ ಮುಂದುವರೆಯುತ್ತಿರುವ ಬೆನ್ನಲ್ಲೇ ಸಿಬಿಐ ಈಗಾಗಲೇ ಮಧ್ಯಂತರ ಆರೋಪ ಪಟ್ಟಿಯನ್ನು 2013ರಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿದೆ. ಸುಪ್ರೀಂಕೋರ್ಟ್ ನಿರ್ದೇಶನದಂತೆ ಸಿಬಿಐ ಆಸೋಸಿಯೇಟೆಡ್ ಮೈನಿಂಗ್ ಕಂಪನಿಯ ಗಣಿಗಾರಿಕೆಗೆ ಸಂಬಂಧಿಸಿದಂತೆ ಗುತ್ತಿಗೆ ವಿಷಯದಲ್ಲಿ ವಿವಿಧ ವ್ಯಕ್ತಿಗಳು ನಡೆಸಿರುವ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಸಿಬಿಐ ತನಿಖೆ ನಡೆಸುತ್ತಿದೆ.












Click it and Unblock the Notifications