ಕೇಂದ್ರಕ್ಕೆ 1 ರೂ ತೆರಿಗೆ ಕಟ್ಟಿದರೆ ನಮಗೆ ವಾಪಸ್‌ ಕೊಡೊದೇ 15 ಪೈಸೆ: ಸಿದ್ದರಾಮಯ್ಯ

ಬೆಂಗಳೂರು, ಡಿಸೆಂಬರ್‌ 25: ನಮ್ಮ ಸರ್ಕಾರ ಕನ್ನಡಿಗರ ತಲೆ ಮೇಲೆ ಕಲ್ಲು ಹಾಕುತ್ತಿದೆ ಎಂದು ವಿರೋಧಪಕ್ಷದ ನಾಯಕರಾದ ಆರ್‌ ಅಶೋಕ್‌ ಅವರ ಹೇಳಿಕೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಯಾರೋ ಬಿಜೆಪಿ ವಿರೋಧಿಗಳು ಈ ರೀತಿಯ ಹೇಳಿಕೆಯನ್ನು ಅವರ ಬಾಯಿಯಿಂದ ಹೇಳಿಸಿದಂತೆ ಕಾಣುತ್ತಿದೆ ಎಂದು ಹೇಳಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಸರಣಿ ಪೋಸ್ಟ್‌ ಮಾಡಿರುವ ಅವರು, ಅಶೋಕ್ ಅವರೇ, ಯಾಕೆ ನಮ್ಮ ಕೈಗೆ ಬಡಿಗೆ ಕೊಟ್ಟು ಬಡಿಸಿಕೊಳ್ತೀರಿ? ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರದ ಕಳೆದ ಒಂಬತ್ತು ವರ್ಷಗಳ ಆಡಳಿತದ ಜಾತಕ ಬಿಡಿಸಿಟ್ಟರೆ ಯಾರು ಕನ್ನಡಿಗರ ತಲೆ ಮೇಲೆ ಕಲ್ಲು ಹಾಕುತ್ತಿದ್ದಾರೆ ಎಂದು ನಿಮಗೂ ಅರಿವಾಗಬಹುದು ಎಂದು ಹೇಳಿದ್ದಾರೆ.

If we pay Rs 1 tax to the Centre, we will get back 15 paise: Siddaramaiah

ನಾಡಿಗೆ ಬರಗಾಲ ಬಿದ್ದು ಆರು ತಿಂಗಳುಗಳಾಗಿವೆ. ಬರಪರಿಹಾರದ ಕೆಲಸಗಳಿಗಾಗಿ 18,177 ಕೋಟಿ ರೂಪಾಯಿ ನೀಡಲು ಮೂರು ತಿಂಗಳುಗಳಿಂದ ಒತ್ತಾಯಿಸುತ್ತಾ ಬಂದಿದ್ದೇವೆ. ಪತ್ರ ಬರೆದಿದ್ದೇವೆ, ನಾನೇ ಖುದ್ದಾಗಿ ಹೋಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಗೃಹಸಚಿವ ಅಮಿತ್‌ ಶಾ ಅವರನ್ನು ಭೇಟಿಯಾಗಿ ನಮ್ಮ ರೈತರ ಕಷ್ಟಗಳನ್ನು ವಿವರಿಸಿದ್ದೇನೆ. ನಮ್ಮ ಕಂದಾಯ ಮತ್ತು ಕೃಷಿ ಸಚಿವರು ಹಣಕಾಸು ಸಚಿವರನ್ನು ಭೇಟಿ ಮಾಡಿ ಬಂದಿದ್ದಾರೆ. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಅವರು ಗೃಹ ಸಚಿವರನ್ನು ಭೇಟಿಯಾಗಿ ಮನವಿ ಮಾಡಿದ್ದಾರೆ. ಇಲ್ಲಿಯವರೆಗೆ ಒಂದು ಪೈಸೆ ಪರಿಹಾರ ಬಿಡುಗಡೆ ಮಾಡಿಲ್ಲ. ನಮಗೆ ಅನ್ನ ನೀಡುವ ರೈತರು ಕನ್ನಡಿಗರಲ್ಲವೇ? ಅವರ ತಲೆ ಮೇಲೆ ಕಲ್ಲು ಹಾಕುತ್ತಿರುವವರು ಯಾರು ಅಶೋಕ್‌ ಎಂದು ಪ್ರಶ್ನಿಸಿದ್ದಾರೆ.

ತೆರಿಗೆ ಪಾವತಿಯಲ್ಲಿ ಕನ್ನಡಿಗರು ದೇಶದಲ್ಲಿಯೇ ಎರಡನೇ ಸ್ಥಾನದಲ್ಲಿದ್ದಾರೆ. ಆದರೆ ಕೇಂದ್ರದ ಬಿಜೆಪಿ ಸರ್ಕಾರ ಕರ್ನಾಟಕದ ನ್ಯಾಯಯುತ ಪಾಲನ್ನೂ ಕೊಡದೆ ವಂಚಿಸುತ್ತಿದೆ. ಕೇಂದ್ರ ಸರ್ಕಾರದ ಸಹಭಾಗಿತ್ವದ ಯೋಜನೆಗಳಿಗೆ ನೀಡುತ್ತಿರುವ ಅನುದಾನ ವರ್ಷದಿಂದ ವರ್ಷಕ್ಕೆ ಇಳಿಕೆಯ ಹಾದಿಯಲ್ಲಿದೆ. 2021-22ರ ಅವಧಿಯಲ್ಲಿ 20 ಸಾವಿರ ಕೋಟಿ ರೂಪಾಯಿ ಇದ್ದ ಅನುದಾನ, 2022-23ರಲ್ಲಿ 13 ಸಾವಿರ ಕೋಟಿ ರೂಪಾಯಿಗೆ ಇಳಿಕೆಯಾಗಿದೆ. ಕನ್ನಡಿಗರ ತಲೆ ಕಲ್ಲು ಹಾಕುತ್ತಿರುವವರು ಯಾರು ಅಶೋಕ್‌ ಅವರೇ ಎಂದು ಕೇಳಿದ್ದಾರೆ.

ಯುಪಿಎ ಸರ್ಕಾರದ 14ನೇ ಹಣಕಾಸು ಆಯೋಗವು ಕರ್ನಾಟಕಕ್ಕೆ ನಿಗದಿಪಡಿಸಿದ್ದ ಶೇ.4.72 ತೆರಿಗೆ ಪಾಲನ್ನು ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಾರಿಗೆ ಬಂದ 15ನೇ ಹಣಕಾಸು ಆಯೋಗವು ಶೇ.3.64 ಕ್ಕೆ ಇಳಿಕೆ ಮಾಡಿ ಕನ್ನಡಿಗರನ್ನು ವಂಚಿಸಿದೆ. ಇದರಿಂದ ಕನ್ನಡಿಗರು ಕಳೆದ 4 ವರ್ಷಗಳಲ್ಲಿ ಸುಮಾರು 45,000 ಕೋಟಿ ರೂಪಾಯಿ ನಷ್ಟ ಅನುಭವಿಸಿದ್ದಾರೆ. ಈಗ ಹೇಳಿ ಅಶೋಕ್‌ ಅವರೇ, ಕನ್ನಡಿಗರ ತಲೆ ಮೇಲೆ ಕಲ್ಲು ಹಾಕುತ್ತಿರುವವರು ಯಾರು? ಎಂದು ಹೇಳಿದ್ದಾರೆ.

ಕರ್ನಾಟಕಕ್ಕೆ 5,495 ಕೋಟಿ ರೂಪಾಯಿ ವಿಶೇಷ ಅನುದಾನ ನೀಡುವಂತೆ 15ನೇ ಹಣಕಾಸು ಆಯೋಗವು ಶಿಫಾರಸು ಮಾಡಿತ್ತು. ಆದರೆ ನಮ್ಮ ರಾಜ್ಯದಿಂದಲೇ ರಾಜ್ಯಸಭೆಗೆ ಆಯ್ಕೆಯಾಗಿ ವಿತ್ತ ಸಚಿವರಾಗಿರುವ ನಿರ್ಮಲ ಸೀತಾರಾಮನ್‌ ಅವರು ಈ ಶಿಫಾರಸ್ಸನ್ನು ತಿರಸ್ಕರಿಸಿ ಕನ್ನಡಿಗರಿಗೆ ದ್ರೋಹ ಎಸಗಿದರು. ಕನ್ನಡಿಗರ ತಲೆ ಮೇಲೆ ಕಲ್ಲು ಹಾಕಿದವರು ನಿಮ್ಮದೇ ಪಕ್ಷಕ್ಕೆ ಸೇರಿರುವ ನಿರ್ಮಲಾ ಸೀತಾರಾಮನ್ ಅವರಾ? ನಾವಾ ಅಶೋಕ್ ಎಂದು ಪ್ರಶ್ನಿಸಿದ್ದಾರೆ.

ಕನ್ನಡಿಗರು ಕೇಂದ್ರ ಬಿಜೆಪಿ ಸರ್ಕಾರಕ್ಕೆ 1 ರೂಪಾಯಿ ತೆರಿಗೆ ಪಾವತಿಸಿದರೆ ಕರ್ನಾಟಕದ ಅಭಿವೃದ್ಧಿಗಾಗಿ ವಾಪಾಸ್‌ ಸಿಗುತ್ತಿರುವುದು ಕೇವಲ 15 ಪೈಸೆ. ಕನ್ನಡಿಗರು ಬೆವರು ಸುರಿಸಿ ದುಡಿದ ದುಡ್ಡನ್ನು ಉತ್ತರದ ರಾಜ್ಯಗಳಿಗೆ ಹಂಚಿಕೆ ಮಾಡಲಾಗುತ್ತಿದೆ. ಆರ್ಥಿಕ ವರ್ಷ ಆರಂಭವಾಗಿ 6 ತಿಂಗಳು ಕಳೆದರೂ ಕೇಂದ್ರ ಸರ್ಕಾರದ ಸಹಯೋಗದ 61 ಯೋಜನೆಗಳಿಗೆ ಸಂಬಂಧಿಸಿದಂತೆ 23 ಇಲಾಖೆಗಳಿಗೆ ನಯಾಪೈಸೆ ಅನುದಾನ ಬಿಡುಗಡೆಯಾಗಿಲ್ಲ. ಕನ್ನಡಿಗರ ತಲೆ ಮೇಲೆ ಕಲ್ಲು ಹಾಕುತ್ತಲೇ ಇರುವವರು ಯಾರು ಅಶೋಕ್‌ ಅವರೇ? ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಏಮ್ಸ್ ಸಂಸ್ಥೆ ಬೇಕೆಂಬ ಕನ್ನಡಿಗರ ಕನಸು ಇನ್ನೂ ಕನಸಾಗಿಯೇ ಉಳಿದಿದೆ. ಕನ್ನಡಿಗರು ಶ್ರಮದಿಂದ ಕಟ್ಟಿದ ಬ್ಯಾಂಕುಗಳು ವಿಲೀನದ ಹೆಸರಲ್ಲಿ ಯಾರದೋ ಪಾಲಾದವು. 18 ಸಾವಿರ ಕೋಟಿ ರೂಪಾಯಿ ಬೆಂಗಳೂರು ಸಬ್‌ ಅರ್ಬನ್‌ ರೈಲು ಯೋಜನೆಗೆ ಅನುದಾನ ಇಲ್ಲದೆ ಸೊರಗಿ ಹೋಗಿದೆ. ಇನ್ನು ರಾಜ್ಯದ ಇತರೆ ರೈಲ್ವೇ ಯೋಜನೆಗಳ ಅಭಿವೃದ್ಧಿಗೆ ಸಿಕ್ಕಿದ್ದು ಬಿಡಿಗಾಸು ಹಣ. ಇದೇನು ಪ್ರಧಾನಿ ಮೋದಿ ಅವರು ಕನ್ನಡಿಗರ ತಲೆಮೇಲೆ ಸುರಿಯತ್ತಿರುವ ಹೂಮಳೆಯೇ? ಇಲ್ಲವೇ ಕಲ್ಲುಗಳ ರಾಶಿಯೇ ಅಶೋಕ್‌?

ಕರ್ನಾಟಕದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪರ ಮತ ಹಾಕದಿದ್ದರೆ ಪ್ರಧಾನಿ ನರೇಂದ್ರ ಮೋದಿ ಅವರ ಆಶೀರ್ವಾದ ಕರ್ನಾಟಕದ ಜನರಿಗೆ ಸಿಗುವುದಿಲ್ಲ, ಕರ್ನಾಟಕದ ಅಭಿವೃದ್ಧಿ ಯೋಜನೆಗಳಿಗೆ ಕೇಂದ್ರದಿಂದ ಹಣ ಬರುವುದಿಲ್ಲ, ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಗಲಭೆಗಳಾಗುತ್ತವೆ ಎಂದೆಲ್ಲ ಅಮಿತ್‌ ಶಾ, ಜೆಪಿ ನಡ್ಡಾ ಅವರಂತಹ ರಾಷ್ಟ್ರ ನಾಯಕರೇ ಕನ್ನಡಿಗರಿಗೆ ಬೆದರಿಕೆ ಹಾಕಿದ್ದರು. ಸ್ವಾಭಿಮಾನಿ ಕನ್ನಡಿಗರು ಈ ಬೆದರಿಕೆಗೆ ಬಗ್ಗದೆ, ಜಗ್ಗದೆ ಬಿಜೆಪಿಯನ್ನು ಧೂಳೀಪಟ ಮಾಡಿದರು. ನಿಮ್ಮ ಪಕ್ಷಕ್ಕೆ ಕನ್ನಡಿಗರು ನೀಡಿದ ಈ ಶಿಕ್ಷೆಗಾಗಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಕನ್ನಡಿಗರ ತಲೆಮೇಲೆ ಕಲ್ಲು ಹಾಕುತ್ತಿದೆಯೇ ಅಶೋಕ್ ಎಂದು ಸಿದ್ದರಾಮಯ್ಯ ಸರಣಿ ಪ್ರಶ್ನೆಗಳನ್ನು ಎತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+