ಸಿ.ಟಿ. ರವಿ ಬಿಜೆಪಿ ರಾಜ್ಯಾಧ್ಯಕ್ಷರಾದರೆ ಸಂತೋಷದಿಂದ ಸ್ವಾಗತಿಸುತ್ತೇವೆ ಎಂದ ಕಾಂಗ್ರೆಸ್
ಬಿಜೆಪಿ ಹಿರಿಯ ಮುಖಂಡ ಸಿ.ಟಿ. ರವಿ ಕರ್ನಾಟಕ ರಾಜ್ಯ ಬಿಜೆಪಿ ಅಧ್ಯಕ್ಷರಾದರೆ ಕಾಂಗ್ರೆಸ್ ಪಕ್ಷ ಸಂತೋಷದಿಂದ ಸ್ವಾಗತಿಸುತ್ತದೆ ಎಂದು ಕರ್ನಾಟಕ ಕಾಂಗ್ರೆಸ್ ಟ್ವೀಟ್ ಮಾಡಿದೆ. ನಾಳೆ ದೆಹಲಿಯಲ್ಲಿ ಬಿಜೆಪಿ ಸಭೆ ನಡೆಯಲಿದ್ದು, ಸಿ.ಟಿ ರವಿ ಅವರನ್ನು ದೆಹಲಿಗೆ ಕರೆಸಿಕೊಂಡ ಬೆನ್ನಲ್ಲೇ ಕಾಂಗ್ರೆಸ್ ಈ ಟ್ವೀಟ್ ಮಾಡಿದೆ.
ಸಿ.ಟಿ ರವಿ ಏನಾದರೂ ಬಿಜೆಪಿ ರಾಜ್ಯಾಧ್ಯಕ್ಷರಾದರೆ ಕಾಂಗ್ರೆಸ್‌ಗೆ ಭಾರಿ ಲಾಭವಾಗಲಿದೆ ಎಂದು ಕಾಂಗ್ರೆಸ್ ವಿಶ್ವಾಸ ವ್ಯಕ್ತಪಡಿಸಿದೆ. ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್ ಸಿ.ಟಿ. ರವಿ ಅವರ ಕಾಲೆಳೆದಿದೆ.

"ತವರು ಜಿಲ್ಲೆಯಾದ ಚಿಕ್ಕಮಗಳೂರಿನಲ್ಲಿ ಒಂದೇ ಒಂದು ಕ್ಷೇತ್ರವನ್ನು ಗೆಲ್ಲಿಸಿಕೊಳ್ಳಲಾಗಲಿಲ್ಲ, ಬೇರೆ ಕ್ಷೇತ್ರವನ್ನು ಗೆಲ್ಲಿಸುವುದಿರಲಿ, ಸ್ವತಃ ತಾವೇ ಹಿನಾಯವಾಗಿ ಸೋತಿದ್ದಾರೆ, ತಮಿಳುನಾಡಿನ ಉಸ್ತುವಾರಿಯಾಗಿ ಮಾಡಿದ ಸಾಧನೆ ಶೂನ್ಯ, ಇಂತಹ ಹಲವು ವೈಫಲ್ಯಗಳ ಸರದಾರ ಸಿಟಿ ರವಿಯನ್ನು ಬಿಜೆಪಿಯ ರಾಜ್ಯಾಧ್ಯಕ್ಷನನ್ನಾಗಿ ಮಾಡುವ ತೀರ್ಮಾನದಿಂದ ಕಾಂಗ್ರೆಸ್ ಪಕ್ಷಕ್ಕೆ ಭಾರಿ ಲಾಭವಾಗಲಿದೆ! ಅಕಸ್ಮಾತ್ ಬಿಜೆಪಿ ಅವರಿಗೆ ರಾಜ್ಯಾಧ್ಯಕ್ಷ ಮಾಡುವ ನಿರ್ಧಾರ ಕೈಗೊಂಡರೆ ಕಾಂಗ್ರೆಸ್ ಪಕ್ಷ ಸಂತೋಷದಿಂದ ಸ್ವಾಗತಸುತ್ತದೆ!" ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
ತವರು ಜಿಲ್ಲೆಯಾದ ಚಿಕ್ಕಮಗಳೂರಿನಲ್ಲಿ ಒಂದೇ ಒಂದು ಕ್ಷೇತ್ರವನ್ನು ಗೆಲ್ಲಿಸಿಕೊಳ್ಳಲಾಗಲಿಲ್ಲ,
— Karnataka Congress (@INCKarnataka) August 1, 2023
ಬೇರೆ ಕ್ಷೇತ್ರವನ್ನು ಗೆಲ್ಲಿಸುವುದಿರಲಿ, ಸ್ವತಃ ತಾವೇ ಹಿನಾಯವಾಗಿ ಸೋತಿದ್ದಾರೆ,
ತಮಿಳುನಾಡಿನ ಉಸ್ತುವಾರಿಯಾಗಿ ಮಾಡಿದ ಸಾಧನೆ ಶೂನ್ಯ,
ಇಂತಹ ಹಲವು ವೈಫಲ್ಯಗಳ ಸರದಾರ ಸಿಟಿ ರವಿಯನ್ನು ಬಿಜೆಪಿಯ ರಾಜ್ಯಾಧ್ಯಕ್ಷನನ್ನಾಗಿ ಮಾಡಿದರೆ ಕಾಂಗ್ರೆಸ್…
ನಾಳೆ ದೆಹಲಿಯಲ್ಲಿ ಬಿಜೆಪಿ ಸಭೆ
ಕಾಂಗ್ರೆಸ್ ಸರ್ಕಾರಕ್ಕೆ ಅಧಿಕಾರಕ್ಕೆ ಬಂದು ಎರಡು ತಿಂಗಳು ಕಳೆದರೂ ಇನ್ನೂ ವಿಪಕ್ಷ ನಾಯಕ ಯಾರು ಎಂದು ತೀರ್ಮಾನವಾಗಿಲ್ಲ. ಇದು ರಾಜ್ಯ ಬಿಜೆಪಿಗೆ ತೀವ್ರ ಮುಖಭಂಗ ಉಂಟುಮಾಡಿದೆ. ವಿಪಕ್ಷ ನಾಯಕನೇ ಇಲ್ಲದೇ ವಿಧಾನಸಭೆ ಅಧಿವೇಶನ ಕೂಡ ನಡೆದಿದೆ.
ವಿಧಾನಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋತ ಬಳಿಕ ಮೇಜರ್ ಸರ್ಜರಿಗೆ ಬಿಜೆಪಿ ಹೈಕಮಾಂಡ್ ಮುಂದಾಗಿದ್ದು, ರಾಜ್ಯಾಧ್ಯಕ್ಷರು ಕೂಡ ಬದಲಾವಣೆಯಾಗುವ ಸಾಧ್ಯತೆ ಇದೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ಸಿ.ಟಿ. ರವಿ ಅವರನ್ನು ಕೆಳಗಿಳಿಸಿದ್ದು, ರಾಜ್ಯಾಧ್ಯಕ್ಷ ಜವಾಬ್ದಾರಿ ಕೊಡುತ್ತಾರಾ ಎನ್ನುವುದು ಸದ್ಯದ ಕುತೂಹಲವಾಗಿದೆ.
ಲಿಂಗಾಯತ ನಾಯಕನಿಗೆ ವಿಪಕ್ಷ ನಾಯಕನ ಜವಾಬ್ದಾರಿ ನೀಡಿ, ರಾಜ್ಯಾಧ್ಯಕ್ಷರ ಹುದ್ದೆಗೆ ಒಕ್ಕಲಿಗ ನಾಯಕರ ಆಯ್ಕೆಯನ್ನು ಪರಿಗಣಿಸುವ ಸಾಧ್ಯತೆ ಇದೆ. ಸಿ.ಟಿ. ರವಿ ಅವರಿಗೆ ಮಹತ್ವದ ಜವಾಬ್ದಾರಿ ನೀಡುವ ಸಾಧ್ಯತೆ ತಳ್ಳಿಹಾಕುವಂತಿಲ್ಲ.
ಆದರೆ, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿ.ಟಿ. ರವಿ ತಾನು ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ ತಾನು ರೇಸ್‌ನಲ್ಲಿ ಇಲ್ಲ ಎಂದು ಹೇಳಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ಒಂದು ದೊಡ್ಡ ಜವಾಬ್ದಾರಿ, ಅದು ಕೇಳಿ ಪಡೆಯುವ ವಿಚಾರವಲ್ಲ, ಯಾರಿಗೆ ಯಾವಾಗ ಕೊಡಬೇಕು ಎನ್ನುವುದನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ತೀರ್ಮಾನ ಮಾಡುತ್ತಾರೆ ಎಂದು ಹೇಳಿದ್ದಾರೆ.












Click it and Unblock the Notifications