'ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಇವರೇ ಪ್ರಧಾನಿ'
ಕಲಬುರಗಿ, ಮೇ 01: ದೇಶಾದ್ಯಂತ 2024 ರ ಲೋಕಸಭಾ ಚುನಾವಣೆಯ ಕಾವು ಜೋರಾಗಿದೆ. ಈ ಬಾರಿಯೂ ಮತ್ತೆ ಅಧಿಕಾರಕ್ಕೆ ಬರುವ ನಿಟ್ಟಿನಲ್ಲಿ ಬಿಜೆಪಿ ಅಬ್ಬರದ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದು, ಇತ್ತ ಬಿಜೆಪಿಯನ್ನ ಅಧಿಕಾರದಿಂದ ದೂರ ಇಡಲು ಕಾಂಗ್ರೆಸ್ ಇಂಡಿಯಾ ಮೈತ್ರಿಕೂಟವನ್ನ ರಚಿಸಿಕೊಂಡಿದೆ.
ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬಂದರೇ ನರೇಂದ್ರ ಮೋದಿ ಅವರೇ ಪ್ರಧಾನ ಮಂತ್ರಿ ಅಭ್ಯರ್ಥಿ. ಆದರೆ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೇ ಪ್ರಧಾನ ಮಂತ್ರಿ ಅಭ್ಯರ್ಥಿ ಯಾರು ಎನ್ನುವ ಪ್ರಶ್ನೆ ಹೆಚ್ಚು ಚರ್ಚೆಯಲ್ಲಿತ್ತು. ಈ ಚರ್ಚೆ ನಡುವೆ ಈ ಸಲ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿಯಾಗಲಿದ್ದಾರೆ. ಹಾಗಾಗಿ ನೀವೆಲ್ಲ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಎಂದು ವಿಧಾನ ಪರಿಷತ್ ಸದಸ್ಯರಾದ ತಿಪ್ಪಣ್ಣಪ್ಪ ಕಮಕನೂರು ಹೇಳಿದ್ದಾರೆ.

ಇನ್ನೂ ಈ ವೇಳೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಮಾತನಾಡಿ, ನಮ್ಮ ಸರ್ಕಾರ ಕೇಂದ್ರದಲ್ಲಿ ಬಂದರೆ ಆಶಾ ಅಂಗನವಾಡಿ ಕಾರ್ಯಕರ್ತರ ಸಂಬಳ ದ್ವಿಗುಣ ಗೊಳಿಸುತ್ತೇವೆ. ಗೃಹಲಕ್ಷ್ಮೀ ಯೋಜನೆಯಂತೆ ಮಹಾಲಕ್ಷ್ಮಿ ಯೋಜನೆಯಡಿಯಲ್ಲಿ ಪ್ರತಿ ಮಹಿಳೆಗೆ ವಾರ್ಷಿಕ ಒಂದು ಲಕ್ಷ ಕೊಡುತ್ತೇವೆ. ಗೃಹಜ್ಯೋತಿ ಯೋಜನೆಯಡಿಯಲ್ಲಿ 200 ಯೂನಿಟ್ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಅನ್ನ ಭಾಗ್ಯ ಯೋಜನೆಯಡಿಯಲ್ಲಿ 10 ಕೆಜಿ ಅಕ್ಕಿ ನೀಡಲಾಗುತ್ತಿದೆ. ಶಕ್ತಿ ಯೋಜನೆಯಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಅವಕಾಶ ನೀಡಲಾಗಿದೆ.
ಯುವನಿಧಿಯಲ್ಲಿ ಪದವಿ ಹಾಗೂ ಡಿಪ್ಲೋಮಾ ಆದವರಿಗೆ ರೂ 1500 ಹಾಗೂ ರೂ 3000 ನೀಡುತ್ತಿದ್ದೇವೆ ಇದು ನಮ್ಮ ಸರ್ಕಾರದ ಬದ್ದತೆ. ನಾವು ಬಸವಣ್ಣನವರ ಆಶಯದಂತೆ ನುಡಿದಂತೆ ನಡೆದಿದ್ದೇವೆ. ಆದರೆ, ಮೋದಿ ನಮ್ಮ ಗ್ಯಾರಂಟಿಗಳನ್ನು ಟೀಕಿಸುತ್ತಾರೆ. ಮೋದಿ ಅವರೇ ಸುಳ್ಳು ಹೇಳುವುದೇ ನಿಮ್ಮ ಗ್ಯಾರಂಟಿಯಾಗಿದೆ ಎಂದು ಹರಿಹಾಯ್ದರು.
ನಾರಿ ನ್ಯಾಯ್ , ಯುವ ನ್ಯಾಯ್ , ಶ್ರಮಿಕ್ ನ್ಯಾಯ, ಭಾಗಿದಾರಿ ನ್ಯಾಯ್ ಹಾಗೂ ಕಿಸಾನ್ ನ್ಯಾಯ್ ಯೋಜನೆಗಳ ಅಡಿಯಲ್ಲಿ ಎಲ್ಲ ವರ್ಗದವರಿಗೆ ಅನುಕೂಲ ಮಾಡಿಕೊಡಲಿದ್ದೇವೆ. ಇದು ನಮ್ಮ ಸರ್ಕಾರದ ಗ್ಯಾರಂಟಿಗಳಾಗಿವೆ. ಆದರೆ, ಮೋದಿ ಕಾಂಗ್ರೆಸ್ ನವರು ನಿಮ್ಮ ಸಂಪತ್ತನ್ನು ಹೆಚ್ಚು ಮಕ್ಕಳು ಇರುವವರಿಗೆ ಹಂಚುತ್ತಾರೆ ಎನ್ನುತ್ತಾರೆ. ಬಡವರಿಗೆ ಹೆಚ್ಚು ಮಕ್ಕಳು ಇರುತ್ತಾರೆ. ನಿಮಗೆ ಮಕ್ಕಳು ಇಲ್ಲ ಎಂದರೆ ನಾವು ಜವಾಬ್ದಾರರಾ? ತಾಳಿಯನ್ನು ಕಿತ್ತು ಕೊಳ್ಳುತ್ತಾರೆ ಎಂದು ಹೇಳುತ್ತಾರೆ. ಈ ದೇಶದಲ್ಲಿ ತಾಳಿ ಕಿತ್ತುಕೊಂಡವನು ಉಳಿಯುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಹಾಗೂ ಮಿತ್ರ ಪಕ್ಷಗಳು ಇದೂವರೆಗೆ ನಡೆದ ಚುನಾವಣೆಯಲ್ಲಿ ಮುಂದೆ ಇದ್ದೇವೆ. ಇನ್ನೂ ಐದು ಹಂತದ ಚುನಾವಣೆಗಳು ಬಾಕಿ ಇವೆ. ನಿಶ್ಷಿತವಾಗಿ ನಾವು ಗೆಲ್ಲುತ್ತೇವೆ ಎಂದು ಖರ್ಗೆ ಆತ್ಮ ವಿಶ್ವಾಸ ವ್ಯಕ್ತಪಡಿಸಿದರು. ಮೋದಿ ದೇಶದ ಆಸ್ತಿಗಳನ್ನು ಮಾರುತ್ತಿದ್ದಾರೆ. ಅವರು ಮಾರುವ ಆಸ್ತಿಗಳನ್ನು ಅಂಬಾನಿ ಹಾಗೂ ಅದಾನಿ ಕೊಂಡುಕೊಳ್ಳುತ್ತಿದ್ದಾರೆ. ದೇಶವನ್ನು ಮಾರುವ ಮೋದಿಯನ್ನು ನೀವು ಸೋಲಿಸಿ ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡಿ ಎಂದು ಮನವಿ ಮಾಡಿ, ಸಭಿಕರೊಂದಿಗೆ ಮೋದಿ ಹಠಾವ್ ದೇಶ್ ಬಜಾವ್ ಎಂದು ಘೋಷಣೆ ಕೂಗಿದರು.












Click it and Unblock the Notifications