ಯಾರಾದರೂ ನನ್ನನ್ನು ವಿರೋಧಿಸಿದರೆ ಅವರು ಮೋದಿಯನ್ನು ವಿರೋಧಿಸುತ್ತಾರೆ: ಬಿವೈ ವಿಜಯೇಂದ್ರ
ಬೆಂಗಳೂರು ನವೆಂಬರ್ 17: 2024ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕರ್ನಾಟಕವನ್ನು ಗೆಲ್ಲಿಸಿಕೊಡುವುದು ನನ್ನ ಆದ್ಯತೆ ಎಂದು ನೂತನವಾಗಿ ನೇಮಕಗೊಂಡ ರಾಜ್ಯ ಬಿಜೆಪಿ ಮುಖ್ಯಸ್ಥ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನೊಂದಿಗೆ ಮಾತನಾಡಿದ ವಿಜಯೇಂದ್ರ ಅವರು, 'ಬಿಜೆಪಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿಎಲ್ ಸಂತೋಷ್, ಪ್ರಹ್ಲಾದ್ ಜೋಶಿ, ಬಸನಗೌಡ ಪಾಟೀಲ್ ಯತ್ನಾಳ್, ಮತ್ತು ವಿ ಸೋಮಣ್ಣ ಸೇರಿದಂತೆ ಬಿಜೆಪಿಯ ಹಿರಿಯ ನಾಯಕರು ಬುಧವಾರ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಕಾರ್ಯಕ್ರಮಕ್ಕೆ ಗೈರುಹಾಜರಾಗಿದ್ದಾರೆ. ನನಗೆ ಮೊದಲ ಶುಭಾಶಯ ಕೋರಿದ ವ್ಯಕ್ತಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ. ಬಿಎಲ್ ಸಂತೋಷ್ ಜಿ ಅವರು ಪಕ್ಷದ ಅತ್ಯಂತ ಉನ್ನತ ನಾಯಕರಲ್ಲಿ ಒಬ್ಬರು. ನಾಯಕರಾದ ವಿ ಸೋಮಣ್ಣ ಮತ್ತು ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಭೇಟಿ ಮಾಡಿ ಮಾತನಾಡುತ್ತೇನೆ' ಎಂದು ವಿಜಯೇಂದ್ರ ತಿಳಿಸಿದ್ದಾರೆ.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಪುತ್ರ, ಶಿಕಾರಿಪುರ ಶಾಸಕ ಬಿವೈ ವಿಜಯೇಂದ್ರ ನೇಮಕಗೊಂಡಿದ್ದಾರೆ. ಇದೇ ಬುಧವಾರ ಪಕ್ಷದ ಕೇಂದ್ರ ಕಚೇರಿಯಲ್ಲಿ ಪದಗ್ರಹಣ ಕಾರ್ಯಕ್ರಮ ನಡೆಸಲಾಯಿತು. ಈ ಕಾರ್ಯಮಕ್ಕೆ ಬಿಜೆಪಿ ಹಲವು ಹಿರಿಯ ನಾಯಕರು ಮತ್ತು ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಬಣದ ಹಲವು ನಾಯಕರು ಗೈರಾಗಿದ್ದರು. ಬಿ.ವೈ.ವಿಜಯೇಂದ್ರ ಅವರು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿರುವುದು ಪಕ್ಷದಲ್ಲಿ ಕೆಲವರಿಗೆ ಅಸಮಾಧಾನ ತಂದಿದೆ.
ಈ ಬಗ್ಗೆ ಮಾತನಾಡಿದ ವಿಜಯೇಂದ್ರ ಅವರು, "ಯಾರಾದರೂ ನನ್ನನ್ನು ವಿರೋಧಿಸಿದರೆ, ಅವರು ಮೋದಿಯನ್ನು ವಿರೋಧಿಸುತ್ತಾರೆ" ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಬಿಜೆಪಿ ನಾಯಕ ಅರವಿಂದ್ ಬೆಲ್ಲದ್ ಅವರು ಕಾರ್ಯಕ್ರಮಕ್ಕೆ ಗೈರಾದಾಗ "ನಾನು ಅವರೊಂದಿಗೆ ಮಾತನಾಡಿದ್ದೇನೆ ಮತ್ತು ಅವರು ನನಗೆ ಎಲ್ಲಾ ಯಶಸ್ಸನ್ನು ಬಯಸಿದ್ದಾರೆ. ಹಲವು ನಾಯಕರನ್ನು ಭೇಟಿ ಮಾಡಿದ್ದೇನೆ. ಬಸವರಾಜ ಬೊಮ್ಮಾಯಿ ಅವರ ನಿವಾಸಕ್ಕೆ ಭೇಟಿ ನೀಡಿದ್ದೆ. ಇತ್ತೀಚೆಗಷ್ಟೇ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರೂ ಪಕ್ಷದ ಕಚೇರಿಗೆ ಬಂದು ಆಶೀರ್ವಾದ ಮಾಡಿದರು. ನನ್ನನ್ನು ಆಶೀರ್ವದಿಸುವುದು ಅವರ ಕರ್ತವ್ಯ'' ಎಂದು ವಿಜಯೇಂದ್ರ ಅವರು ಹೇಳಿದರು.
ಲೋಕಸಭಾ ಚುನಾವಣೆಗೂ ಮುನ್ನ ಅವರ ರಾಜಕೀಯ ಜೀವನಕ್ಕೆ ಹಾನಿ ಮಾಡಲು ಕಾಣದ ಕೈಗಳು ಕೆಲಸ ಮಾಡಲು ಪ್ರಯತ್ನಿಸುತ್ತವೆ ಎಂದು ವಿಜಯೇಂದ್ರ ಹೇಳಿದ್ದಾರೆ. "ನನ್ನನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡಿದವರು ಯಾರು? ಯಡಿಯೂರಪ್ಪನಾ? ಅದು ಪ್ರಧಾನಿ ಮೋದಿ ಜಿ, ಗೃಹ ಸಚಿವ ಅಮಿತ್ ಶಾಜಿ ಮತ್ತು ಪಕ್ಷದ ಅಧ್ಯಕ್ಷ ಜೆಪಿ ನಡ್ಡಾಜಿ ಅವರು. ಅವರು ನನಗೆ ಅಧಿಕಾರ ವಹಿಸಿದ್ದಾರೆ. ಸದ್ಯ ಕರ್ನಾಟಕದ ಎಲ್ಲಾ 28 ಸೀಟುಗಳನ್ನು ಮೋದಿಜಿಗೆ ತಲುಪಿಸುವುದು ನನ್ನ ಕೆಲಸ. ಯಾರಾದರೂ ನನ್ನನ್ನು ವಿರೋಧಿಸಿದರೆ ಅವರು ಮೋದಿಜಿಯನ್ನು ವಿರೋಧಿಸುತ್ತಾರೆ. ಸೋಮಣ್ಣ, ಯತ್ನಾಳ್ ಸೇರಿದಂತೆ ಎಲ್ಲರೂ ಒಗ್ಗಟ್ಟಾಗಿ ಪಕ್ಷಕ್ಕಾಗಿ ದುಡಿಯುತ್ತಾರೆ ಎಂಬ ವಿಶ್ವಾಸ ನನಗಿದೆ. ನಾನು ಯತ್ನಾಳ್ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದೆ. ಪಕ್ಷದ ವರಿಷ್ಠರು ಮತ್ತು ಇತರ ನಾಯಕರು ಅವರೊಂದಿಗೆ ಮಾತನಾಡುತ್ತಾರೆ ಎಂಬ ವಿಶ್ವಾಸವಿದೆ. ನಾನೇ ಖುದ್ದಾಗಿ ಹೋಗಿ ಅವರೊಂದಿಗೆ ಮಾತನಾಡುತ್ತೇನೆ. ಇವೆಲ್ಲಾ ಇತ್ಯರ್ಥವಾಗುತ್ತವೆ'' ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ತಿಂಗಳ 23, 24, 25 ರಂದು ನವದೆಹಲಿಗೆ ಭೇಟಿ ನೀಡಿ ಮೋದಿ, ಶಾ ಮತ್ತು ನಡ್ಡಾ ಅವರನ್ನು ಭೇಟಿ ಮಾಡುವುದಾಗಿ ವಿಜಯೇಂದ್ರ ಹೇಳಿದರು. ನವೆಂಬರ್ 25 ರಂದು ಬೆಂಗಳೂರಿನಲ್ಲಿ ತಮ್ಮ ಬೆಂಬಲಿಗರಿಗಾಗಿ ಔಪಚಾರಿಕ ಸಂಭ್ರಮಾಚರಣೆ ಸಭೆ ನಡೆಸಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದ್ದರೂ, ಇನ್ನೂ ಯಾವುದನ್ನೂ ನಿರ್ಧರಿಸಲಾಗಿಲ್ಲ ಎಂದು ಹೇಳಿದರು. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸವನ್ನೂ ವ್ಯಕ್ತಪಡಿಸಿದರು.
"ಮೋದಿಜಿ ಪರವಾಗಿ ಅಧಿಕಾರದ ಪರ ಅಲೆ ಇದೆ. ಕೆಲವು ಅರೆಬೆಂದ ಗ್ಯಾರಂಟಿಗಳನ್ನು ಹೊರತುಪಡಿಸಿದರೆ ಕಾಂಗ್ರೆಸ್ ಸರ್ಕಾರ ಏನು ನೀಡುತ್ತಿದೆ? ಕಾಂಗ್ರೆಸ್ ನಿಂದ ಜನರು ನಿರಾಸೆಗೊಂಡಿದ್ದಾರೆ. ಕೇಂದ್ರವನ್ನು ದೂಷಿಸುವುದನ್ನು ಬಿಟ್ಟು ರಾಜ್ಯ ಸರ್ಕಾರ ಯಾವ ಹೊಸ ಕಾರ್ಯಕ್ರಮವನ್ನು ರಾಜ್ಯಕ್ಕೆ ನೀಡಿದೆ?'' ಎಂದು ವಿಜಯೇಂದ್ರ ಪ್ರಶ್ನೆ ಮಾಡಿದರು.
ಇನ್ನೂ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ ಎಷ್ಟು ಸ್ಥಾನಗಳನ್ನು ಗೆಲ್ಲುತ್ತದೆ ಎಂಬ ಪ್ರಶ್ನೆಗೆ, "ಕಾದು ನೋಡಿ" ಎಂದು ವಿಜಯೇಂದ್ರ ವಿಶ್ವಾಸದಿಂದ ಹೇಳಿದರು.
ವಿಜಯೇಂದ್ರ ಅವರ ಪ್ರತಿಷ್ಠಾಪನಾ ಸಮಾರಂಭವನ್ನು ಹಿರಿಯ ನಾಯಕರು ಬಿಟ್ಟುಕೊಟ್ಟಿರುವುದು ಅಸಮಾಧಾನದ ಸಂಕೇತವಾಗಿದೆ ಎಂದು ಆರೋಪಿಸಿ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳ ಕುರಿತು ಕೇಳಿದಾಗ, ''ನಾವೆಲ್ಲರೂ ಒಟ್ಟಾಗಿ ಬರುತ್ತೇವೆ. ನನಗೆ ವಿಶ್ವಾಸವಿದೆ.'' ಎಂದು ಅವರು ಹೇಳಿದರು.
ಈ ಎಲ್ಲಾ ಬೆಳವಣಿಗೆಗಳನ್ನು ನೋಡಿದರೆ ಎಲ್ಲರನ್ನೂ ಜೊತೆಗೆ ಕರೆದುಕೊಂಡು ಹೋಗಿ ಪಕ್ಷದ ರಾಜ್ಯ ಘಟಕದಲ್ಲಿನ ಭಿನ್ನಾಭಿಪ್ರಾಯ ಶಮನಗೊಳಿಸುವುದು ವಿಜಯೇಂದ್ರ ಅವರ ಮೊದಲ ದೊಡ್ಡ ಸವಾಲು ಎಂಬುದು ಸ್ಪಷ್ಟವಾಗಿದೆ. ದೆಹಲಿಯಿಂದ ವಾಪಸಾದ ನಂತರ ಕರ್ನಾಟಕ ಪ್ರವಾಸ ಮಾಡುವುದಾಗಿ ತಿಳಿಸಿದ ಅವರು ಮುಂಬರುವ ಚುನಾವಣೆಯಲ್ಲಿ ಪಕ್ಷದ ಎಲ್ಲಾ ಅಸಮಧಾನರನ್ನು ಸಮಮಾಧಾನ ಪಡಿಸುತ್ತಾರಾ ಎಂದು ಕಾದು ನೋಡಬೇಕಿದೆ.












Click it and Unblock the Notifications