ಸಂಡೂರಿನಲ್ಲಿ ಅನ್ನಪೂರ್ಣಮ್ಮ ಗೆದ್ದರೆ ನಾನೇ ಗೆದ್ದ ಹಾಗೆ-ಮುಖ್ಯಮಂತ್ರಿ ಸಿದ್ದರಾಮಯ್ಯ
ಬಳ್ಳಾರಿ, ನವೆಂಬರ್ 07: ಸಂಡೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ರಾಷ್ಟೀಯ ಪಕ್ಷಗಳ ಅಭ್ಯರ್ಥಿಗಳು ಕಣದಲ್ಲಿದ್ದು, ಚುನಾವಣೆಗೆ ಕಣ ರಂಗುಪಡೆದಿದೆ. ಕಾಂಗ್ರೆಸ್ ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸರು ಪ್ರಯತ್ನಿಸುತ್ತಿದ್ದು, ಇಂದು ಸಂಡೂರು ವಿಧಾನಸಭಾ ಕ್ಷೇತ್ರದ ಯಶವಂತಪುರ ಗ್ರಾಮದಲ್ಲಿ ನಡೆದ ಬೃಹತ್ ಜನ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗಿಯಾಗಿದ್ದಾರೆ. ಈ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವಂತೆ ಮತದಾರರಲ್ಲಿ ಮನವಿ ಮಾಡಿದ್ದಾರೆ.
ಮತದಾರರನ್ನುದ್ದೇಶಿಸಿ ಮಾತನಾಡಿದ ಮಾತನಾಡಿದ ಸಿದ್ದರಾಮಯ್ಯ, ಈಗ ನಡೆಯುತ್ತಿರುವ ಮೂರೂ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲೂ ನಾವು ಗೆದ್ದೇ ಗೆಲ್ಲುತ್ತೇವೆ. ಯಶವಂತಪುರದ ಪುತ್ರ ಈ.ತುಕಾರಾಮ್ ಲೋಕಸಭಾ ಸದಸ್ಯರಾಗಿದ್ದಾರೆ. ಈಗ ಈ ಊರಿನ ಸೊಸೆ ಅನ್ನಪೂರ್ಣಮ್ಮ ಅವರನ್ನೂ ಗೆಲ್ಲಿಸಿ ಎಂದು ಮನವಿ ಮಾಡಿಕೊಂಡರು.

ಈ ತುಕಾರಾಮ್ ಅಭಿವೃದ್ಧಿಯಲ್ಲಿ ನಿಸ್ಸೀಮ. ನನ್ನಿಂದ, ಎಲ್ಲಾ ಮಂತ್ರಿಗಳಿಂದ ಸಜ್ಜನಿಕೆಯಿಂದಲೇ ಕೆಲಸ ಮಾಡಿಸಿಕೊಳ್ಳುವ ಕಲೆ, ಕಾಳಜಿ ಈ.ತುಕಾರಾಮ್ ಅವರಿಗೆ ಇದೆ. ಈಗ ಅನ್ನಪೂರ್ಣಮ್ಮ ಅವರನ್ನೂ ಸೇರಿಸಿಕೊಂಡು ಅಭಿವೃದ್ಧಿ ಹೆಚ್ಚಾಗಿ ಆಗುತ್ತದೆ. ನಮ್ಮ ಸರ್ಕಾರ ಎಲ್ಲಾ ಜಾತಿ, ಎಲ್ಲಾ ಧರ್ಮದ ಮಹಿಳೆಯರಿಗೂ ಉಚಿತವಾದ ಶಕ್ತಿ, ಗೃಹಲಕ್ಷ್ಮಿ ಯೋಜನೆ ಜಾರಿ ಮಾಡಿದ್ದೇವೆ. ಯಶಸ್ವಿಯಾಗಿ ನಮ್ಮ ಗ್ಯಾರಂಟಿಗಳು ನಡೆಯುತ್ತಿವೆ ಎಂದರು.
ನಾವು ನಾಲ್ಕೂವರೆ ಲಕ್ಷ ಕೋಟಿ ತೆರಿಗೆ ಕಟ್ಟುತ್ತೇವೆ. ನಮಗೆ ವಾಪಾಸ್ ಬರೋದು ಒಂದು ರೂಪಾಯಿಗೆ 15 ಪೈಸೆ ಮಾತ್ರ. ಐದನೇ ವೇತನ ಆಯೋಗ, ತುಂಗಾ ಮೇಲ್ದಂಡೆ, ಬರ ಪರಿಹಾರದಲ್ಲೂ ರಾಜ್ಯಕ್ಕೆ ಅನ್ಯಾಯ ಮಾಡಿದರು. ನಾವು ಸುಪ್ರೀಂಕೋರ್ಟ್‌ಗೆ ಹೋಗಿ ಬರ ಪರಿಹಾರ ತಂದೆವು.
ನಮ್ಮ ಪಾಲಿನ ತೆರಿಗೆ ಹಣ ಕೊಡುವುದನ್ನು ನಿಲ್ಲಿಸಿದರೆ ಗ್ಯಾರಂಟಿಗಳನ್ನು ನಿಲ್ಲಿಸಿ ಬಿಡುತ್ತಾರೆ ಅಂತ ಕೇಂದ್ರ ತೊಂದರೆ ಕೊಡುತ್ತಿದೆ. ಆದರೆ ನಾವು 56 ಸಾವಿರ ಕೋಟಿ ಹಣವನ್ನು ಗ್ಯಾರಂಟಿಗಳಿಗೆ ಖರ್ಚು ಮಾಡುತ್ತಲೇ ಒಂದು ಲಕ್ಷ ಇಪ್ಪತ್ತು ಸಾವಿರ ಕೋಟಿ ಹಣವನ್ನು ಅಭಿವೃದ್ಧಿ ಕೆಲಸಗಳಿಗೆ ಕೊಡುತ್ತಿದ್ದೇವೆ. ಆದ್ದರಿಂದ ಬಿಜೆಪಿಯವರ ಹಸಿ ಹಸಿ ಸುಳ್ಳುಗಳಿಗೆ ಮರುಳಾಗಬೇಡಿ ಎಂದರು.

ಈ ಉಪ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಮತ ನೀಡಿ. ನನ್ನ ಚಿಗರಿ ದೋಸ್ತ್‌ನ ಮಗಳು ಅನ್ನಪೂರ್ಣಮ್ಮ ಅವರನ್ನು ನೀವು ಗೆಲ್ಲಿಸಲೇಬೇಕು. ಈ.ತುಕಾರಾಮ್ ಅವರ ಖಾಲಿ ಜಾಗವನ್ನು ಅನ್ನಪೂರ್ಣಮ್ಮ ಭರ್ತಿ ಮಾಡಬೇಕು. ಅನ್ನಪೂರ್ಣಮ್ಮ ಅವರು ಗೆದ್ದರೆ ನಾನೇ ಗೆದ್ದ ಹಾಗೆ. ಈ ಗೆಲುವಿನಿಂದ ನನಗೆ ಶಕ್ತಿ ಬರುತ್ತದೆ. ನಾನೇನು ತಪ್ಪು ಮಾಡದೆ ನನ್ನ ಮೇಲೆ ಸುಳ್ಳು ಕೇಸು ಹಾಕಿದ್ದಾರೆ. ನಾನು ಮಂತ್ರಿಯಾಗಿ 40 ವರ್ಷ ಆಯ್ತು. ಸಣ್ಣ ಕಳಂಕವೂ ನನ್ನ ಮೇಲಿಲ್ಲ. ಆದರೆ ಸುಳ್ಳು ಕೇಸು ಹಾಕಿಸಿದ್ದಾರೆ. ಈ ಬಿಜೆಪಿಗೆ ಸರಿಯಾದ ಪಾಠ ಕಲಿಸಬೇಕು ಅಂದರೆ ಇಲ್ಲಿ ಅನ್ನಪೂರ್ಣಮ್ಮ ಅವರನ್ನು ಗೆಲ್ಲಿಸ ಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.












Click it and Unblock the Notifications