ಡಿ.ಕೆ.ರವಿ ನಿಗೂಢ ಸಾವು : ಯಾರು, ಏನು ಹೇಳಿದರು?
ಬೆಂಗಳೂರು, ಮಾ. 17 : 2009ರ ಬ್ಯಾಚ್‌ನ ಐಎಎಸ್ ಅಧಿಕಾರಿ ಮತ್ತು ವಾಣಿಜ್ಯ ತೆರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತ ಡಿ.ಕೆ.ರವಿ ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ್ದಾರೆ. ರಿಯಲ್ ಎಸ್ಟೇಟ್ ಮಾಫಿಯಾ ಹಾಗೂ ಅಕ್ರಮ ಮರಳು ದಂಧೆಕೋರರ ಪಾಲಿಗೆ ಸಿಂಹಸ್ವಪ್ನವಾಗಿದ್ದ ರವಿ ಅವರ ಸಾವು ಹಲವಾರು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. [ಈ ಸಾವು ನ್ಯಾಯವೇ ಮತಹಾಕಿ]
ಸೋಮವಾರ ಸಂಜೆ ಕೋರಮಂಗಲ ಬಳಿಯ ತಾವರೆಕೆರೆ ರಸ್ತೆಯಲ್ಲಿರುವ ಪ್ರೆಸ್ಟೀಜ್ ಗ್ರೂಪ್‌ಗೆ ಸೇರಿದ 'ಸೇಂಟ್ ಜಾನ್ಸ್‌ವುಡ್ ಅಪಾರ್ಟ್‌ಮೆಂಟ್'ನಲ್ಲಿ ಡಿ.ಕೆ.ರವಿ ಅವರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪ್ರಾಥಮಿಕ ತನಿಖೆಯಿಂದ ಇದು ಆತ್ಮಹತ್ಯೆ ಇರಬಹುದು ಎಂದು ಪೊಲೀಸರು ಹೇಳಿದ್ದಾರೆ.[ಡಿಕೆ ರವಿ ಸಾವು, ಪ್ರಮುಖ ಘಟನೆಗಳು ಇಲ್ಲಿವೆ]
ಡಿ.ಕೆ.ರವಿ ಅವರ ನಿವಾಸಕ್ಕೆ ಗೃಹ ಸಚಿವ ಕೆಜೆ ಜಾರ್ಜ್, ನಗರ ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ, ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್, ಇಂಧನ ಸಚಿವ ಡಿ.ಕೆ.ಶಿವಕುಮಾರ್ ಮುಂತಾದವರು ಭೇಟಿ ನೀಡಿದ್ದರು. ರವಿ ಅವರ ಸಾವಿನ ಬಗ್ಗೆ ಯಾರು ಏನು ಹೇಳಿದರು ನೋಡೋಣ ಬನ್ನಿ [ಡಿಕೆ ರವಿ ನಿಗೂಢ ಸಾವು]

ತನಿಖೆ ಮಾಡಿಸಿ ನ್ಯಾಯ ಒದಗಿಸುತ್ತೇವೆ
ಪ್ರಾಮಾಣಿಕ ಅಧಿಕಾರಿ ಡಿಕೆ ರವಿ ಅವರ ಸಾವಿನಿಂದ ನೋವಾಗಿದೆ. ಈ ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಿ ಅವರ ಕುಟುಂಬಕ್ಕೆ ನ್ಯಾಯಒದಗಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಜನರು ಶಾಂತಿ ಕಾಪಾಡಬೇಕು ಎಂದು ಮನವಿ ಮಾಡಿದ್ದಾರೆ.

ಇದು ಆತ್ಮಹತ್ಯೆಯಂತೆ ಕಾಣುತ್ತಿದೆ
ಸ್ಥಳ ಪರಿಶೀಲನೆ ಬಳಿಕ ಐಎಎಸ್ ಅಧಿಕಾರಿ ಡಿ.ಕೆ.ರವಿ ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ತಿಳಿದುಬಂದಿದೆ. ಫ್ಯಾನ್‌ಗೆ ನೇಣು ಹಾಕಿಕೊಂಡಿದ್ದ ಸ್ಥಿತಿಯಲ್ಲಿ ರವಿ ಅವರ ಮೃತದೇಹ ಪತ್ತೆಯಾಗಿದೆ. ಡಿಸಿಪಿ ರೋಹಿಣಿ ಕಟೋಚ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ಪ್ರಕರಣದ ತನಿಖೆಗೆ ರಚಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ ಹೇಳಿದ್ದಾರೆ.

ಸರ್ಕಾರದ ಆದಾಯ ಹೆಚ್ಚಿಸುವಲ್ಲಿ ಶ್ರಮಿಸಿದ್ದರು
ಐಎಎಸ್ ಅಧಿಕಾರಿ ಡಿಕೆ ರವಿ ಅವರು ಸರ್ಕಾರದ ಆದಾಯ ಹೆಚ್ಚಿಸುವಲ್ಲಿ ಶ್ರಮಿಸಿದ್ದರು. ಅವರ ಸಾವಿನ ಬಗ್ಗೆ ಸಂಪೂರ್ಣ ಮಾಹಿತಿ ಸಂಗ್ರಹಿಸಿದ ಬಳಿಕ ಪ್ರತಿಕ್ರಿಯೆ ನೀಡುತ್ತೇನೆ ಎಂದು ರವಿ ಅವರ ನಿವಾಸಕ್ಕೆ ಭೇಟಿ ನೀಡಿದ್ದ ಗೃಹ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.

ಅತ್ಯಂತ ವಿಷಾದಕರ ಘಟನೆ
ಡಿಕೆ ರವಿ ಅವರ ಸಾವು ಅತ್ಯಂತ ವಿಷಾದಕರ ಘಟನೆ. ಪ್ರಕರಣದ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ದಕ್ಷ ಅಧಿಕಾರಿಗಳನ್ನು ತನಿಖೆಗೆ ನೇಮಕ ಮಾಡುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಸರ್ಕಾರದ ಮುಖ್ಯಕಾರ್ಯದರ್ಶಿ ಕೌಶಿಕ್ ಮುಖರ್ಜಿ ಹೇಳಿದ್ದಾರೆ.

ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ನಂಬಲಾಗುತ್ತಿಲ್ಲ
ಅತ್ಯಂತ ದಕ್ಷ, ಧೈರ್ಯಶಾಲಿಯಾಗಿದ್ದ ಅಧಿಕಾರಿ ಡಿಕೆ ರವಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ನಂಬಲಾಗುತ್ತಿಲ್ಲ. ಈ ಸಾವಿನ ಹಿಂದೆ ಏನೋ ಸಂಚಿದೆ ಎಂಬ ಅನುಮಾನವಿದೆ. ಸರ್ಕಾರ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಉನ್ನತ ಮಟ್ಟದ ತನಿಖೆ ನಡೆಸಿ, ಸತ್ಯಾಂಶ ಬಹಿರಂಗಪಡಿಸಬೇಕು ಎಂದು ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಒತ್ತಾಯಿಸಿದ್ದಾರೆ.

ಸಾಮಾಜಿಕ ಬದಲಾವಣೆ ಬಯಸಿದ್ದ ಅಧಿಕಾರಿ
ಡಿಕೆ ರವಿ ಅವರು ಗ್ರಾಮ ವಾಸ್ತವ್ಯ, ದಲಿತರ ಮನೆಯಲ್ಲಿ ಊಟ ಮುಂತಾದವುಗಳ ಮೂಲಕ ಸಾಮಾಜಿಕ ಬದಲಾವಣೆಯನ್ನು ಬಯಸಿದ್ದರು. ರಾಜ್ಯ ತೆರಿಗೆ ಸಂಗ್ರಹದಲ್ಲಿ ಹಿಂದೆ ಬಿದ್ದ ಸಂದರ್ಭದಲ್ಲಿ ದೊಡ್ಡ ಬಿಲ್ಡ್‌ರ್‌ಗಳ ಕಚೇರಿ ಮೇಲೆ ದಾಳಿ ಮಾಡಿ ತೆರಿಗೆ ಸಂಗ್ರಹಿಸುತ್ತಿದ್ದರು. ಇಂಥ ಪ್ರಾಮಾಣಿಕ ಅಧಿಕಾರಿಗೆ ಇಂಥ ಸ್ಥಿತಿ ಬರಬಾರದಿತ್ತು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.

ಸಾವಿನ ಬಗ್ಗೆ ಸಮಗ್ರ ತನಿಖೆಯಾಗಬೇಕು
ಐಎಎಸ್ ಅಧಿಕಾರಿ ಡಿಕೆ ರವಿ ಅವರ ಸಾವು ನಿಗೂಢವಾಗಿದೆ. ಆದ್ದರಿಂದ ಈ ಕುರಿತು ಸಮಗ್ರ ತನಿಖೆಯಾಗಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು : ಜೋಶಿ
ದಕ್ಷ ಐಎಎಸ್ ಅಧಿಕಾರಿ ಡಿಕೆ ರವಿ ಅವರ ಸಾವಿನ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. ಆಯಿಲ್ ದಂಧೆಯಿಂದ ಮಂಜುನಾಥ್ ಹತ್ಯೆಯಾದ ಮಾದರಿಯಲ್ಲಿ ಕೃತ್ಯ ನಡೆದಿರುವ ಸಾಧ್ಯತೆಗಳೂ ಇವೆ. ಸಾವು ನಿಗೂಢವಾಗಿರುವುದರಿಂದ ಸೂಕ್ತ ತನಿಖೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.

ಡಿಕೆ ರವಿ ರಾಜ್ಯದ ದೊಡ್ಡ ಆಸ್ತಿ
ಐಎಎಸ್ ಅಧಿಕಾರಿ ಡಿಕೆ ರವಿ ಈ ರಾಜ್ಯದ ದೊಡ್ಡ ಆಸ್ತಿಯಾಗಿದ್ದರು. ಅವರ ಈ ರೀತಿಯ ಸಾವು ನಂಬಲು ಕಷ್ಟವಾಗುತ್ತಿದೆ. ಘಟನೆಗೆ ನಿಜವಾದ ಕಾರಣ ಏನು? ಅವರಿಗೆ ಅನುಚಿತ ಕರೆಗಳು ಬಂದಿದ್ದವೇ ಎನ್ನುವ ಬಗ್ಗೆ ತನಿಖೆ ನಡೆಸಲು ಸೂಚಿಸುತ್ತೇನೆ ಎಂದು ಇಂಧನ ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ.

ಈ ಸಾವು ಅತ್ಯಂತ ನೋವು ತಂದಿದೆ
ಡಿಕೆ ರವಿ ಅವರ ಸಾವು ಅತ್ಯಂತ ನೋವು ತಂದಿದೆ ಎಂದು ಮಾಜಿ ಗೃಹ ಸಚಿವ ಆರ್.ಅಶೋಕ್ ಹೇಳಿದ್ದಾರೆ. ರವಿ ಅವರ ಸಾವು ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಅವರಿಗೆ ಬೆದರಿಕೆ ಕರೆಗಳು ಬರುತ್ತಿದ್ದೇವೆ? ಎಂಬ ಬಗ್ಗೆ ತನಿಖೆಯಾಗಬೇಕು ಎಂದು ಅಶೋಕ್ ಒತ್ತಾಯಿಸಿದ್ದಾರೆ.

ಸಮಗರ ತನಿಖೆ ನಡೆಸಲಾಗುತ್ತದೆ
ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಡಿ.ಕೆ.ರವಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವುದು ದೃಢಪಟ್ಟಿದೆ. ಅಪಾರ್ಟ್‌ಮೆಂಟ್ ಮತ್ತು ಸುತ್ತಲ ಪ್ರದೇಶದಲ್ಲಿರುವ ಸಿಸಿಟಿವಿ ದೃಶ್ಯಗಳನ್ನು ವಶಕ್ಕೆ ಪಡೆಯಲಾಗಿದೆ. ಮೊಬೈಲ್ ಕರೆ ವಿವರಗಳನ್ನೆಲ್ಲಾ ಸಂಗ್ರಹಿಸಿ ಸಮಗ್ರ ತನಿಖೆ ನಡೆಸಲಾಗುವುದು ಎಂದು ನಗರ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಹೇಳಿದ್ದಾರೆ.












Click it and Unblock the Notifications