ಕೇಂದ್ರ ಸೇವೆಗೆ ತೆರಳಿದ ಕರ್ನಾಟಕ ಕೇಡರ್‌ನ ಐಎಎಸ್ ದಂಪತಿಗಳು
ಬೆಂಗಳೂರು, ಫೆಬ್ರವರಿ 15: ಕರ್ನಾಟಕದಲ್ಲಿ ಕೆಲಸ ಮಾಡಿದ ಹಲವು ಐಎಎಸ್ ಅಧಿಕಾರಿಗಳು ಕೇಂದ್ರ ಸೇವೆಗೆ ತೆರಳಿದ್ದಾರೆ. ಈ ಸಾಲಿಗೆ ಈಗ ಹೊಸ ಸೇರ್ಪಡೆ 2004ನೇ ಬ್ಯಾಚ್‌ನ ಇಬ್ಬರು ಐಎಎಸ್ ಅಧಿಕಾರಿಗಳು. ಇವರಿಬ್ಬರು ದಂಪತಿಗಳು, ಹಿಂದೆ ಪತಿ ಮಂಡ್ಯದಲ್ಲಿ ಪತ್ನಿ ಮೈಸೂರಿನಲ್ಲಿ ಜಿಲ್ಲಾಧಿಕಾರಿಗಳಾಗಿ ಅಕ್ಕಪಕ್ಕದ ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಣೆ ಮಾಡಿದವರು.
ಕರ್ನಾಟಕದಲ್ಲಿ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಣೆ ಮಾಡಿದ್ದ ಸಿ. ಶಿಖಾ ಮತ್ತು ಡಾ. ಅಜಯ್ ನಾಗಭೂಷಣ್ ಕೇಂದ್ರ ಸೇವೆಗೆ ನಿಯೋಜನೆಗೊಂಡಿದ್ದಾರೆ. 2024ರಲ್ಲಿಯೇ ರಾಜ್ಯ ಸರ್ಕಾರ ಸಿ. ಶಿಖಾ ಅವರನ್ನು ರಾಜ್ಯ ಸೇವೆಯಿಂದ ಬಿಡುಗಡೆ ಮಾಡಿದೆ. ಕಳೆದ ವಾರ ಡಾ. ಅಜಯ್ ನಾಗಭೂಷಣ್ ಸಹ ರಾಜ್ಯ ಸೇವೆಯಿಂದ ಬಿಡುಗಡೆಗೊಂಡಿದ್ದಾರೆ.

ಸಿ. ಶಿಖಾ ಮತ್ತು ಡಾ. ಅಜಯ್ ನಾಗಭೂಷಣ್ ಇಬ್ಬರೂ ಸಹ 2004ನೇ ಬ್ಯಾಚ್‌ನ ಕರ್ನಾಟಕ ಕೇಡರ್‌ನ ಐಎಎಸ್ ಅಧಿಕಾರಿಗಳು. ಡಾ. ಅಜಯ್ ನಾಗಭೂಷಣ್ ಅವರು ಕೇಂದ್ರ ವಾರ್ತಾ ಮತ್ತು ಪ್ರಚಾರ ಇಲಾಖೆ ಜಂಟಿ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ.
ರಾಜ್ಯದಲ್ಲಿ ಅವರು ಸರ್ಕಾರದ ಪ್ರಧಾನ ಕಾರ್ಯದರ್ಶಿ ಸಹಕಾರ ಇಲಾಖೆ ಮತ್ತು ಪಶುಸಂಗೋಪನೆ, ಪಶು ವೈದ್ಯಕೀಯ ವಿಜ್ಞಾನ ಹಾಗೂ ಮೀನುಗಾರಿಕೆ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಹುದ್ದೆಯಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿದ್ದರು.
ಸಿ. ಶಿಖಾ ರಾಜ್ಯ ಸೇವೆಯಿಂದ ಬಿಡುಗಡೆ: ಡಾ. ಅಜಯ್ ನಾಗಭೂಷಣ್ ಪತ್ನಿ ಸಿ. ಶಿಖಾ ಅವರು ಸಹ ರಾಜ್ಯದ ಹಿರಿಯ ಐಎಎಸ್ ಅಧಿಕಾರಿ. ಮೈಸೂರು ಜಿಲ್ಲಾಧಿಕಾರಿ ಸೇರಿದಂತೆ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿ ಉತ್ತಮ ಹೆಸರುಗಳಿಸಿದ್ದರು. ಅವರು 2024ರಲ್ಲಿಯೇ ಕೇಂದ್ರ ಸೇವೆಗೆ ತೆರಳಿದ್ದಾರೆ.
2004ನೇ ಬ್ಯಾಚ್ ಕರ್ನಾಟಕ ಕೇಡರ್‌ನ ಐಎಎಸ್ ಅಧಿಕಾರಿ ಸಿ. ಶಿಖಾ ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತರಾಗಿ ರಾಜ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಅವರು 2024ರ ನವೆಂಬರ್‌ನಲ್ಲಿಯೇ ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವಾಲಯದ ಜಂಟಿ ಕಾರ್ಯದರ್ಶಿಯಾಗಿ ನಿಯೋಜನೆಗೊಂಡಿದ್ದು, ರಾಜ್ಯ ಸೇವೆಯಿಂದ ಬಿಡುಗಡೆ ಮಾಡಲಾಗಿದೆ.
ಆದ್ದರಿಂದ ಕರ್ನಾಟಕ ಕೇಡರ್‌ನ ದಂಪತಿಗಳಾದ ಸಿ. ಶಿಖಾ ಮತ್ತು ಡಾ. ಅಜಯ್ ನಾಗಭೂಷಣ್ ಇಬ್ಬರೂ ಕೇಂದ್ರ ಸೇವೆಗೆ ನಿಯೋಜನೆಗೊಂಡಂತಾಗಿದೆ. ಈ ಹಿಂದೆ ಹಿಂದೆ ಅಜಯ್ ನಾಗಭೂಷಣ್ ಮಂಡ್ಯ ಜಿಲ್ಲಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದರು. ಆಗ ಸಿ. ಶಿಖಾ ಮೈಸೂರು ಜಿಲ್ಲಾಧಿಕಾರಿಯಾಗಿದ್ದರು. ಪತಿ ಮತ್ತು ಪತ್ನಿ ಅಕ್ಕಪಕ್ಕದ ಜಿಲ್ಲೆಗಳ ಪ್ರಮುಖ ಹುದ್ದೆಯಲ್ಲಿದ್ದರು.
ಸಿ. ಶಿಖಾ ಅವರು 2023ರ ಕರ್ನಾಟಕ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಣೆ ಮಾಡಿ ರಾಷ್ಟ್ರ ಮಟ್ಟದ ಪ್ರಶಸ್ತಿಯನ್ನು ಪಡೆದಿದ್ದರು. ವಾಣಿಜ್ಯ ತೆರಿಗೆ ಆಯುಕ್ತರಾಗಿ ಇಲಾಖೆಯ ಮೂಲಕ ಮತದಾರರಲ್ಲಿ ಉಚಿತ ಉಡುಗೊರೆಗಳ ಕುರಿತು ಹಮ್ಮಿಕೊಂಡಿದ್ದ ಜನಜಾಗೃತಿ, ವಾಣಿಜ್ಯ ಕ್ಷೇತ್ರದಲ್ಲಿ ಚುನಾವಣಾ ನೀತಿ ಸಂಹಿತಿ ಪಾಲನೆ ಸೇರಿದಂತೆ ಕಟ್ಟುನಿಟ್ಟಿನ ಚುನಾವಣೆ ನಡೆಸಲು ಪ್ರಮುಖ ಪಾತ್ರವಹಿಸಿದ್ದಕ್ಕಾಗಿ ಆಯೋಗ ಅವರಿಗೆ ಪ್ರಶಸ್ತಿ ನೀಡಿತ್ತು.
ಅವರು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿಯಾಗಿ ಉತ್ತಮ ಕೆಲಸ ಮಾಡಿದ್ದರು. ಬೆಂಗಳೂರು ನಗರದ ಹೊರ ವರ್ತುಲ ರಸ್ತೆಯಲ್ಲಿ ಬಿಎಂಟಿಸಿ ಬಸ್‌ಗಳಿಗೆ ಪ್ರತ್ಯೇಕ ಪಥ ನಿರ್ಮಾಣ ಮಾಡುವ ಆಲೋಚನೆ ಸಿ. ಶಿಖಾ ಅವರದ್ದಾಗಿತ್ತು. ಅವರು ಸುಮಾರು ಮೂರುವರೆ ವರ್ಷಗಳ ಕಾಲ ಮೈಸೂರು ಜಿಲ್ಲಾಧಿಕಾರಿಯಾಗಿ ದಸರಾ ಸಂದರ್ಭದಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಣೆ ಮಾಡಿದ್ದರು.












Click it and Unblock the Notifications