ಜೈಲು ವಾಸದ ಬಗ್ಗೆ ದೀರ್ಘ ಇತಿಹಾಸವಿದೆ, ಸೂಕ್ತ ಸಮಯದಲ್ಲಿ ಹೇಳ್ತೀನಿ: ಡಿಕೆಶಿ
ನವದೆಹಲಿ, ಅಕ್ಟೋಬರ್ 25: 'ಜೈಲು ವಾಸದ ಬಗ್ಗೆ ಹೇಳುವುದಕ್ಕೆ ಸಾಕಷ್ಟಿದೆ ಎಂದಿರುವ ಡಿ.ಕೆ.ಶಿವಕುಮಾರ್, ಆ ಬಗ್ಗೆ ಸೂಕ್ತ ಸಮಯದಲ್ಲಿ ಮಾತನಾಡುವುದಾಗಿ ಹೇಳಿದ್ದಾರೆ.
ಇಂದು ಬೆಳಿಗ್ಗೆ ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ, ಡಿ.ಕೆ.ಶಿವಕುಮಾರ್, 'ಜೈಲು ವಾಸದ್ದು ಸುದೀರ್ಘ ಇತಿಹಾಸವೇ ಇದೆ, ಅದರ ಬಗ್ಗೆ ಸೂಕ್ತ ಸಮಯದಲ್ಲಿ ಮಾತನಾಡುತ್ತೇನೆ' ಎಂದಿದ್ದಾರೆ.
ರಾಜಕಾರಣದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ ಡಿ.ಕೆ.ಶಿವಕುಮಾರ್, 'ಸದ್ಯಕ್ಕೆ ರಾಜಕಾರಣದ ಬಗ್ಗೆ ಏನೂ ಮಾತನಾಡುವುದಿಲ್ಲ, ಅದಕ್ಕೂ ಸೂಕ್ತ ಸಮಯ ಬರಲಿ' ಎಂದಷ್ಟೆ ಹೇಳಿದರು.

'ನಾನು ಹಲವು ನಾಯಕರಿಗೆ ಸಹಾಯ ಮಾಡಿದ್ದೇನೆ, ಅವರು ಉಪಕಾರ ಸ್ಮರಣೆ ಮಾಡುವುದು ಸಾಮಾನ್ಯ, ಆದರೆ ನನ್ನಿಂದ ನೇರವಾಗಿ ಏನೂ ಪಡೆಯದ ಲಕ್ಷಾಂತರ ಜನ ನನಗಾಗಿ ಪ್ರಾರ್ಥನೆ ಮಾಡಿದ್ದಾರೆ, ಅವರ ಋಣ ನನ್ನ ಮೇಲಿದೆ' ಎಂದು ಭಾವನಾತ್ಮಕವಾಗಿ ಡಿ.ಕೆ.ಶಿವಕುಮಾರ್ ಹೇಳಿದರು.
'ನನ್ನನ್ನು ಲೂಟಿಕೋರ ಎಂದು ಬಿಂಬಿಸುವ ಪ್ರಯತ್ನ ಮಾಡಲಾಯಿತು, ಆದರೆ ಜನ ಇದಾವುದನ್ನೂ ಲೆಕ್ಕಿಸದೆ, ನನಗೋಸ್ಕರ ಬಂದು ಪ್ರತಿಭಟನೆ ಮಾಡಿದರು. ಆ ಜನರ ಪ್ರೀತಿಗೆ ನಾನು ಆಭಾರಿಯಾಗಿದ್ದೇನೆ' ಎಂದು ಹೇಳಿದರು.
ಕೆಲವು ಆರೋಗ್ಯ ಸಮಸ್ಯೆ ಇವೆ ಅದಕ್ಕೆ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕಾಗಿದೆ ಎಂದ ಡಿ.ಕೆ.ಶಿವಕುಮಾರ್, 'ನನಗೆ ಬೆನ್ನು ನೋವು ಕಾಡುತ್ತಿದೆ, ಈಗ ಆಸ್ಪತ್ರೆಗೆ ಹೋಗುತ್ತಿದ್ದೇನೆ' ಎಂದು ಹೇಳಿ ಹೊರಟರು. ಇಂದು ಡಿ.ಕೆ.ಶಿವಕುಮಾರ್ ಅವರು ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದರು.
ಅಕ್ರಮ ಹಣ ಪತ್ತೆ ಪ್ರಕರಣದಲ್ಲಿ ಸೆಪ್ಟೆಂಬರ್ 3 ರಂದು ಇಡಿ ಅಧಿಕಾರಿಗಳಿಂದ ಬಂಧನಕ್ಕೆ ಒಳಗಾಗಿದ್ದ ಡಿ.ಕೆ.ಶಿವಕುಮಾರ್ ಅವರಿಗೆ ಅಕ್ಟೋಬರ್ 23 ರ ಬುಧವಾರದಂದು ದೆಹಲಿ ಹೈಕೋರ್ಟ್ ಜಾಮೀನು ನೀಡಿತು.
ದೆಹಲಿಯಲ್ಲಿರುವ ಡಿ.ಕೆ.ಶಿವಕುಮಾರ್, ನಾಳೆ (ಅಕ್ಟೋಬರ್ 26) ರಾಜ್ಯಕ್ಕೆ ವಾಪಸ್ಸಾಗಲಿದ್ದು, ಭಾರಿ ಸಂಖ್ಯೆಯ ಅಭಿಮಾನಿಗಳು ಡಿ.ಕೆ.ಶಿವಕುಮಾರ್ ಅವರನ್ನು ಸ್ವಾಗತಿಸಲಿದ್ದಾರೆ.












Click it and Unblock the Notifications