ಲೋಕಸಭಾ ಚುನಾವಣೆಯಲ್ಲಿ ನಾನು ಸ್ಫರ್ಧಿಸಲ್ಲ: ಹೆಚ್.ಡಿ ದೇವೇಗೌಡ ಸ್ಪಷ್ಟನೆ
ಬೆಂಗಳೂರು, ಜನವರಿ 13: ನಾನು ಸ್ಪರ್ಧೆ ಮಾಡಲ್ಲ. ನಮಗೆ ಎಷ್ಟು ಸೀಟು ಕೊಡುತ್ತಾರೋ ಗೆಲ್ಲಿಸುತ್ತೆವೆ. ಹಾಗೇ ಬಿಜೆಪಿ ಗೆಲ್ಲಿಸಲು ಹೋರಾಡುತ್ತೇವೆ ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಲೋಕಸಭಾ ಚುನಾವಣೆಯ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಈ ಸಲ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ. ಇನ್ನೂ ಎರಡು ವರ್ಷಗಳ ಕಾಲ ರಾಜ್ಯಸಭಾ ಸದಸ್ಯ ಅವಧಿ ಇದೆ. ನನಗೆ 91 ವರ್ಷ ವಯಸ್ಸಾಗಿದೆ. ಜ್ಞಾಪಕ ಶಕ್ತಿ ಇದೆ, ಓಡಾಡಲು ಕಷ್ಟವಾಗುತ್ತದೆ. ಆದರೂ ಜೆಡಿಎಸ್, ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಮಾಡುತ್ತೇನೆ ಎಂದರು.

ಲೋಕಸಭಾ ಚುನಾವಣೆಯಲ್ಲಿ ಹೆಚ್ಡಿ ಕುಮಾರಸ್ವಾಮಿ ಸ್ಪರ್ಧೆ ಮಾಡುವ ಬಗ್ಗೆ ನಿರ್ಧಾರ ಮಾಡಿಲ್ಲ. ಗಾಳಿ ಸುದ್ದಿಗಳ ಬಗ್ಗೆ ನಾನು ಮಾತನಾಡಲ್ಲ. ಮೋದಿ ಅವರು ಏನಾದರೂ ಹೇಳಿದರೇ, ಅಗ ನಾವೆಲ್ಲಾ ಕುಳಿತು ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ. ಇನ್ನು ಹೆಚ್ಡಿ ಕುಮಾರಸ್ವಾಮಿ ಕೇಂದ್ರ ಸಚಿವರಾಗುವ ವಿಚಾರ ನನ್ನ ಮುಂದೆ ಚರ್ಚೆಯಾಗಿಲ್ಲ. ಪ್ರಧಾನಿ ನರೇಂದ್ರ ಮೋದಿಯವರ ಮನಸ್ಸಿನಲ್ಲಿ ಏನಿದೆಯೋ ಗೊತ್ತಿಲ್ಲ. ಅವರು ಯಾವುದನ್ನೂ ಬಿಟ್ಟುಕೊಡುವುದಿಲ್ಲ. ಅವರ ಜೊತೆಗಿರುವ ಪೊಲೀಸರಿಗೂ ಗೊತ್ತಾಗಲ್ಲ ಎಂದು ಹೇಳಿದರು.
ರಾಮಮಂದಿರ ಉದ್ಘಾಟನೆಯ ಬಗ್ಗೆ ಮಾತನಾಡಿದ ಅವರು, ಸಿದ್ದರಾಮಯ್ಯ ರಾಮಮಂದಿರ ಹೋಗುತ್ತೇನೆ ಅಂದಿದ್ದಾರೆ. ಉದ್ಘಾಟನೆಯ ದಿನ ಹೋಗಲ್ಲ ಅಂದಿದ್ದಾರೆ. ಆದರೆ ಮತ್ತೆ ಹೋಗುತ್ತೇನೆ ಎಂದಿದ್ದಾರೆ. ನಾನು ಅವರನ್ನು ಅಭಿನಂಧಿಸುತ್ತೇನೆ. ಎಲ್ಲಾ ಮುಜುರಾಯಿ ದೇವಸ್ಥಾನದಲ್ಲಿ ಪೂಜೆಗೆ ಹೇಳಿದ್ದಾರೆ. ನಾನು ಕೂಡ 99% ರಾಮಮಂದಿರಕ್ಕೆ ಹೋಗುತ್ತೇನೆ. ಹೆಂಡತಿಯನ್ನು ಸಹ ಕರೆದುಕೊಂಡು ಹೋಗುತ್ತೇನೆ ಎಂದಿದ್ದಾರೆ.
ಹಾಸನ ಲೋಕಸಭಾ ಕ್ಷೇತ್ರದಿಂದ ಪ್ರಜ್ವಲ್ ರೇವಣ್ಣ ಸ್ಪರ್ಧೆ ವಿಚಾರವಾಗಿ ಮಾತನಾಡಿದ ಅವರು, ಪ್ರಜ್ವಲ್ಗೆ ಪ್ರಧಾನಿ ಮೋದಿ ಅವರು ಆಶೀರ್ವಾದ ಮಾಡಿದ್ದಾರೆ. ಹೆಚ್ಡಿ ಕುಮಾರಸ್ವಾಮಿ ಅವರು ಕೂಡಾ ಆಶೀರ್ವಾದ ಮಾಡುತ್ತಾರೆ. ನಾನೂ ಆಶೀರ್ವಾದ ಮಾಡುತ್ತೇನೆ, ಜನರು ಆಶೀರ್ವಾದ ಮಾಡುತ್ತಾರೆ ಎಂದು ಹೇಳುವ ಮೂಲಕ ಹಾಸನದಿಂದ ಮತ್ತೆ ಪ್ರಜ್ವಲ್ ರೇವಣ್ಣ ಸ್ಪರ್ಧೆ ಮಾಡುತ್ತಾರೆ ಎನ್ನುವುದನ್ನು ಪರೋಕ್ಷವಾಗಿ ತಿಳಿಸಿದರು.












Click it and Unblock the Notifications