ಸಿಡಿದೆದ್ದ ಸುಧಾಕರ್: ನನ್ನ ತಪ್ಪುಗಳನ್ನ ತಿದ್ದಿಕೊಳ್ಳುತ್ತೇನೆ ಎಂದ ಬಿ ವೈ ವಿಜಯೇಂದ್ರ
ಬೆಂಗಳೂರು, ಜನವರಿ 30: ಮಾಜಿ ಸಚಿವರಾ ಡಾ. ಕೆ ಸುಧಾಕರ್ ಅವರು ಈ ರೀತಿ ಹೇಳಿಕೆ ಕೊಡುವುದು ಪಕ್ಷಕ್ಕೂ ಗೌರವ ತರುವುದಿಲ್ಲ ಎಂಬುದನ್ನು ಅವರು ಅರ್ಥ ಮಾಡಿಕೊಳ್ಳಬೇಕು. ನನ್ನ ನಡವಳಿಕೆಗಳನ್ನು ತಿದ್ದಿಕೊಳ್ಳಬೇಕು ಎಂದು ಹೇಳಿದ್ದಾರೆ. ತಪ್ಪುಗಳಿದ್ದರೆ ತಿದ್ದಿಕೊಳ್ಳಲು ನಾನು ಸಿದ್ಧ. ಸುಧಾಕರ್ ಅವರನ್ನು ಭೇಟಿ ಮಾಡುತ್ತೇನೆ. ನಾನೂ ಸಹ ತಿದ್ದಿಕೊಳ್ಳುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ ವೈ ವಿಜಯೇಂದ್ರ ಅವರು ಹೇಳಿದರು.
ಈ ಕುರಿತು ಬೆಂಗಳೂರಿನಲ್ಲಿ ಗುರುವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ನಾನೊಬ್ಬ ರಾಜ್ಯದ ಅಧ್ಯಕ್ಷ. ಇದು ಮಂತ್ರಿಸ್ಥಾನ ಅಲ್ಲ. ಮನೆ ಮಠ ಬಿಟ್ಟು ಕೆಲಸ ಮಾಡುತ್ತಿದ್ದೇನೆ. ಪಕ್ಷ ಅವರ ಸ್ವತ್ತೂ ಅಲ್ಲ, ನನ್ನ ಸ್ವತ್ತೂ ಅಲ್ಲ. ಲಕ್ಷಾಂತರ ಕಾರ್ಯಕರ್ತರು ಪಕ್ಷಕ್ಕೋಸ್ಕರ ದುಡಿಯುತ್ತಿದ್ದಾರೆ. ಹಾಗಾಗಿ ಪಕ್ಷ ನನ್ನ ಸ್ವತ್ತು, ನಾನು ಮುಂದೆ ಮುಖ್ಯಮಂತ್ರಿ ಆಗಬೇಕು ಎನ್ನುವ ಯೋಚನೆ ತಲೆಯಲ್ಲಿಟ್ಟುಕೊಂಡು ನಾನು ಪಕ್ಷ ಸಂಘಟನೆ ಮಾಡುತ್ತಿಲ್ಲ. ಹಗುರವಾಗಿ ಮಾತನಾಡುವುದು ಅವರಿಗೆ ಶೋಭೆ ತರುವುದಿಲ್ಲ. ಖಂಡಿತ ಆ ರೀತಿ ಮಾತನಾಡಬಾರದು ಎಂದು ನಾನು ಮನವಿ ಮಾಡುತ್ತೇನೆ ಎಂದು ಬಿ ವೈ ವಿಜಯೇಂದ್ರ ತಿಳಿಸಿದರು.

ನನ್ನ ಮೇಲೆ ಆರೋಪ ಮಾಡುವುದು ಸರಿಯಲ್ಲ. ಚಿಕ್ಕಬಳ್ಳಾಪುರದಲ್ಲಿ ರಾಮಚಂದ್ರ ಅವರು ಸಹ ಅಪೇಕ್ಷಿತರಿದ್ದರು. ಆದರೆ ಚುನಾವಣೆ ಪ್ರಕ್ರಿಯೆಯನ್ನು ಅವರು ಗೌರವಿಸಿದ್ದಾರೆ. ಸುಧಾಕರ್ ಅವರು ತಪ್ಪು ತಿಳಿದುಕೊಳ್ಳಬಾರದು. ಒಬ್ಬ ಕಾರ್ಯಕರ್ತನಾಗಿ ಅವರಿಗೂ ಅಧಿಕಾರವಿದೆ. ಜಿಲ್ಲೆಯಲ್ಲಿ ಯಾರ್ಯಾರನ್ನು ಪದಾಧಿಕಾರಿಗಳನ್ನು ಮಾಡಬೇಕು ಎಂಬ ಬಗ್ಗೆ ಅವರು ಸಲಹೆ ಕೊಡಲಿ. ಸಚಿವರಾಗಿ ಅವರು ಪಕ್ಷ ಸಂಘಟನೆ ಮಾಡಿದ್ದಾರೆ. ನಾನು ಕೋರ್ ಕಮಿಟಿ ಸಭೆಯ ನಂತರ ಅವರ ಹತ್ತಿರ ಮಾತನಾಡಿದ್ದೇನೆ. ಮಾಧ್ಯಮಗಳಲ್ಲಿ ವರದಿ ಬಂದಾಗ ರಾಜ್ಯದ ಅಧ್ಯಕ್ಷನಾಗಿ ಅವರ ಜತೆಗೆ ಮಾತನಾಡುವುದು ನನ್ನ ಕರ್ತವ್ಯ. ಮಾಧ್ಯಮದ ಮುಂದೆ ಅವರು ಚರ್ಚೆ ಮಾಡಬಾರದಿತ್ತು. ಏನೇ ಭಿನ್ನಾಭಿಪ್ರಾಯ ಇದ್ದರೂ ಹಿರಿಯರ ಜತೆಗೆ ಕೂತು ಬಗೆಹರಿಸಿಕೊಳ್ಳೋಣ ಎಂದು ಅವರಿಗೆ ತಿಳಿಸಿದ್ದೇನೆ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸುತ್ತ ವಿಜಯೇಂದ್ರ ಮಾಹಿತಿ ನೀಡಿದರು.
ವಿಜಯೇಂದ್ರ ಅವರು ನಮ್ಮನ್ನು ಸಮಾಧಿ ಮಾಡಲು ಹೊರಟಿದ್ದಾರೆ ಅನ್ನುವ ಮಾತನ್ನು ಹೇಳಿದ್ದಾರೆ. ಈ ರೀತಿ ಹೇಳಿಕೆಗಳನ್ನು ದಯವಿಟ್ಟು ಕೊಡಬೇಡಿ. ಅದು ನಿಮಗೂ, ನನಗೂ ಗೌರವ ತರುವುದಿಲ್ಲ. ಅಲ್ಲಿ ಆಯ್ಕೆಯಾದವರು ಕೂಡ ಪಕ್ಷದ ಒಬ್ಬ ಕಾರ್ಯಕರ್ತ. ಮತ್ತೆ ಸುಧಾಕರ್ ಅವರ ಸಂಬಂಧಿ ಕೂಡ ಹೌದು. ಚುನಾವಣಾ ಪ್ರಕ್ರಿಯೆಯನ್ನು ಅವರು ಅರ್ಥ ಮಾಡಿಕೊಳ್ಳಲಿ. ಅವರು ಏನೇ ಟೀಕೆ ಮಾಡಿದರೂ ನಾನು ಟೀಕಿಸಲು ಹೋಗುವುದಿಲ್ಲ. ಮಾಜಿ ಸಚಿವರಾಗಿ ಅವರಿಗೂ ಸಹ ಜವಾಬ್ದಾರಿಗಳಿವೆ. ಪಕ್ಷ ಏನು ತೀರ್ಮಾನ ಮಾಡಿದೆಯೋ ಅದಕ್ಕೆ ಕೇಂದ್ರದ ಸಮ್ಮತಿ ಕೂಡ ಇದೆ. ಅದರಲ್ಲಿ ಯಾರೂ ಮೂಗು ತೂರಿಸುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ ವೈ ವಿಜಯೇಂದ್ರ ಸ್ಪಷ್ಟಪಡಿಸಿದರು.












Click it and Unblock the Notifications