ಚನ್ನಪಟ್ಟಣ: ಮಾತು ಕೊಟ್ಟ ವಿಜಯೇಂದ್ರ; ನಾನು ಚುನಾವಣೆ ಸ್ಪರ್ಧೆ ಮಾಡೇ ಮಾಡ್ತೀನಿ: ಸಿ ಪಿ ಯೋಗೇಶ್ವರ್
ರಾಮನಗರ, ಆಗಸ್ಟ್ 22: ರಾಜ್ಯ ರಾಜಕೀಯದಲ್ಲಿ ಲೋಕಸಭಾ ಚುನಾವಣೆಯ ಬಳಿಕ ಚನ್ನಪಟ್ಟಣ ಉಪಚುನಾವಣೆಯ ಕಾವು ರಂಗೇರಿದೆ. ಚನ್ನಪಟ್ಟಣ ಕ್ಷೇತ್ರದ ಟಿಕೆಟ್ ಗಾಗಿ ಮೈತ್ರಿ ನಾಯಕರಲಿಯೇ ಜಟಾಪಟಿ ಜೋರಾಗಿದೆ. ಚನ್ನಪಟ್ಟಣ ಟಿಕೆಟ್ ಕುರಿತು ಬಿಜೆಪಿ ಮುಖಂಡ ಸಿ ಪಿ ಯೋಗೇಶ್ವರ್ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನನಗೆ ಟಿಕೆಟ್ ಕೊಡುವ ಮಾತು ಕೊಟ್ಟಿದ್ದಾರೆ. ಆದರೆ, ಇದು ಕುಮಾರಸ್ವಾಮಿ ಅವರ ಕ್ಷೇತ್ರ. ಹಾಗಾಗಿ ವರಿಷ್ಠರ ಜೊತೆ ಮಾತನಾಡಿ ತೀರ್ಮಾನ ಮಾಡುತ್ತೇವೆ ಅಂದಿದ್ದಾರೆ. ಈ ವಿಚಾರದಲ್ಲಿ ರಾಜ್ಯ ಬಿಜೆಪಿ ನಾಯಕರು ನನ್ನ ಜೊತೆ ಇದ್ದಾರೆ. ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಗೆಲ್ಲುವ ಏಕೈಕ ಕ್ಷೇತ್ರ ಇದು. ಹಾಗಾಗಿ ಎರಡು ಪಕ್ಷದ ನಾಯಕರಿಗೆ ಟಿಕೆಟ್ ಕೊಡಿ ಅಂತ ಕೇಳಿದ್ದೇನೆ ಎಂದರು.

ಹೆಚ್ ಡಿ ಕುಮಾರಸ್ವಾಮಿ ಯನ್ನೂ ಎರಡು ಬಾರಿ ಭೇಟಿ ಮಾಡಿದ್ದೇನೆ. ಅವರು ಕೂಡಾ ಟಿಕೆಟ್ ಕೊಡಲು ಒಪ್ಪಿದ್ದಾರೆ. ನಾನು ಚುನಾವಣೆ ಸ್ಪರ್ಧೆ ಮಾಡೇ ಮಾಡುತ್ತೇನೆ. ನನ್ನ ಮೊದಲ ಆಧ್ಯತೆ ಮಾತೃಪಕ್ಷ ಬಿಜೆಪಿಗೆ, ಇಲ್ಲವಾದರೇ ಮುಂದಿನ ಯೋಚನೆ ಮಾಡುತ್ತೇನೆ ಎಂದು ಚನ್ನಪಟ್ಟಣದಲ್ಲಿ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಹೇಳಿದ್ದಾರೆ.
ಸಿದ್ದರಾಮಯ್ಯ ಹಾಗೂ ಹೆಚ್ ಡಿ ಕುಮಾರಸ್ವಾಮಿ ನಡುವೆ ಪ್ರಾಸಿಕ್ಯೂಷನ್ ಅನುಮತಿ ತಿಕ್ಕಾಟ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಮಾತನಾಡಿ, ಇದನ್ನ ನಾನು ಕೂಡಾ ಮಾಧ್ಯಮದಲ್ಲಿ ನೋಡ್ತಿದ್ದೇನೆ.
ಅದೇನಾಗುತ್ತೋ ನೋಡೊಣ. ನಂದೆ ನನಗೆ ದೊಡ್ಡ ಸಮಸ್ಯೆ ಆಗಿದೆ, ನಾನ್ಯಾಕೆ ಬೇರೆಯವರ ಬಗ್ಗೆ ಮಾತನಾಡಲಿ ಎಂದ ಸಿ ಪಿ ಯೋಗೇಶ್ವರ್ ಹೇಳಿದರು.
ರಾಜ್ಯ ಬಿಜೆಪಿ ನಾಯಕರು ಜವಾಬ್ದಾರಿ ತೆಗೆದುಕೊಂಡು ಈ ಚುನಾವಣೆ ನಡೆಸಬೇಕು. ಇದರಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಹೆಚ್ಡಿಕೆ ಹೊಣೆಗಾರಿಕೆ ಇದೆ. ಚನ್ನಪಟ್ಟಣ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಗೆಲ್ಲಬೇಕು, ಮುಂದಿನ ವಾರ ಎಲ್ಲಾ ಗೊಂದಲಕ್ಕೂ ತೆರೆ ಬೀಳಲಿದೆ. 100ಕ್ಕೆ 100ರಷ್ಟು ನನಗೆ ಟಿಕೆಟ್ ಸಿಗುವ ಭರವಸೆ ಇದೆ. ಮೊದಲು ಎರಡೂ ಪಕ್ಷದ ನಾಯಕರ ಸಮನ್ವಯ ಸಭೆ ಆಗಬೇಕು, ಇಂದು ದೆಹಲಿಗೆ ಹೋಗಬೇಕಿತ್ತು, ಆದರೆ ಕೆಲಸ ರಾಜಕೀಯ ವಿದ್ಯಾಮಾನಗಳಿಂದ ಪ್ರವಾಸ ಮುಂದೂಡಿದ್ದೇವೆ ಎಂದು ಚನ್ನಪಟ್ಟಣದಲ್ಲಿ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಹೇಳಿದರು.












Click it and Unblock the Notifications