ನಾನು ಸಿಎಂ ಆದ ದಿನವೇ 20 ಸಾವಿರ ಬುಲ್ಡೋಜರ್ ಖರೀದಿಸುತ್ತೇನೆ ಎಂದ ಯತ್ನಾಳ್ : ಕಾರಣವೇನು ಗೊತ್ತಾ?
ಧಾರವಾಡ,ಏಪ್ರಿಲ್ 27: ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ ನೇತೃತ್ವದ ಸರಕಾರದಲ್ಲಿ ಹಿಂದೂಗಳಿಗೆ ರಕ್ಷಣೆ ಇಲ್ಲದಾಗಿದೆ. ನಾನು ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಮೊದಲ ದಿನವೇ ಭಯೋತ್ಪಾದಕರು ಹಾಗೂ ಮತಾಂಧ ಸಂಘಟನೆಯವರ ಮನೆಗಳನ್ನು ಕೆಡವಲು 20 ಸಾವಿರ ಬುಲ್ಡೋಜರ್ ಖರೀದಿ ಮಾಡುತ್ತೇನೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದಾರೆ.
ಈ ಕುರಿತು ಶುಕ್ರವಾರ ನಡೆದ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಜೋಶಿ ಪರ ಬೃಹತ್ ರೋಡ್ ಶೋ ನಂತರ ಬಹಿರಂಗ ಸಭೆಯಲ್ಲಿ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಹುಬ್ಬಳ್ಳಿ ನೇಹಾ ಹಿರೇಮಠ ಅವರ ಹತ್ಯೆಯನ್ನು ಗೃಹ ಸಚಿವರು, ಮುಖ್ಯಮಂತ್ರಿಗಳು ಅತ್ಯಂತ ಹಗುರವಾಗಿ ಕಂಡರು. ಕೇವಲ ಮುಸ್ಲಿಂ ತುಷ್ಠೀಕರಣ ರಾಜಕಾರಣ ಮಾಡುತ್ತಿರುವ ಕಾಂಗ್ರೆಸ್ ಭಾರತವನ್ನು ಪಾಕಿಸ್ತಾನ ಮಾಡಲು ಹೊರಟಿದೆ. ಅದೇ ಕಾರಣಕ್ಕೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಎಲ್ಲೆಡೆ ಪಾಕಿಸ್ತಾನ ಧ್ವಜಗಳು ಹಾರಾಡುತ್ತವೆ.

ಭಾರತವನ್ನು ಪಾಕಿಸ್ತಾನ ಮಾಡಲು ಹೊರಟಿರುವ ಕಾಂಗ್ರೆಸ್ ಪಕ್ಷದಿಂದ ಮುಂಬರುವ ದಿನಗಳು ದುಬಾರಿಯಾಗಲಿವೆ. ತಾವು ಹಾಕುವ ಒಂದು ಮತವೂ ಒಬ್ಬ ಭಯೋತ್ಪಾದಕನನ್ನು ಸಂಹಾರ ಮಾಡಲಿದೆ. ಕಾಂಗ್ರೆಸ್‌ನವರು ಎಲ್ಲಿ ಹೋದರೂ ಚೊಂಬು ಹಿಡಿದುಕೊಂಡು ಹೋಗುತ್ತಿದ್ದಾರೆ. ಯಾಕೆಂದರೆ, ಚುನಾವಣೆ ನಂತರ ಪ್ರಧಾನಿ ನರೇಂದ್ರ ಮೋದಿ ಮೂರನೇ ಭಾರಿ ಪ್ರಧಾನಿ ಆಗುವುದು ಎಷ್ಟು ಗ್ಯಾರಂಟಿಯೋ ಇವರು ಚೊಂಬು ಹಿಡಿದುಕೊಂಡು ಹೊರಗಡೆ ಹೋಗುವುದು ಅಷ್ಟೇ ಗ್ಯಾರಂಟಿ ಎಂದು ಕಾಂಗ್ರೆಸ್ ನಾಯಕ ಚೊಂಬು ಅಭಿಮಾನಕ್ಕೆ ತಿರುಗೇಟು ನೀಡಿದರು.
ಮೋದಿ ವಿರುದ್ಧ ಮಾತನಾಡಲು ಏನೂ ವಿಷಯವಿಲ್ಲ. ಅದಕ್ಕಾಗಿ ಈ ಚೊಂಬಿನ ನಾಟಕ ಆಡುತ್ತಿದ್ದಾರೆ. ಇದಕ್ಕೆ ಮತದಾರರು ಮಣೆ ಹಾಕದೇ ಬಿಜೆಪಿ ಅಭ್ಯರ್ಥಿ ಜೋಶಿ ಅವರನ್ನು ಬೆಂಬಲಿಸುವಂತೆ ಮನವಿ ಮಾಡಿದರು.
ಈ ಸರ್ಕಾರದಲ್ಲಿ ಹಿಂದೂಗಳಿಗೆ ರಕ್ಷಣೆ ಇಲ್ಲದಾಗಿದೆ. ಕ್ರೈಂಗಳು ಹಾಗೂ ಭಯೋತ್ಪಾದಕ ಚಟುವಟಿಕೆಗಳು ಹೆಚ್ಚಾಗುತ್ತವೆ. ಆದರೆ, ಪ್ರಧಾನಿ ಮೋದಿ 10 ವರ್ಷದ ಆಡಳಿತದಲ್ಲಿ ದೇಶದ ವರ್ಚಸ್ಸು ಹೆಚ್ಚಿಸುವುದರ ಜತೆಗೆ ಮುಂದುವರಿದ ರಾಷ್ಟ್ರಗಳು ಸಹ ಭಾರತದತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಆದರೆ, ರಾಜ್ಯದಲ್ಲಿ ಮಾತ್ರ ಹಿಂದುಗಳಿಗೆ ರಕ್ಷಣೆ ಇಲ್ಲ ಎಂದು ಯತ್ನಾಳ್ ವಾಗ್ದಾಳಿ ನಡೆಸಿದರು.
ಇನ್ನೂ ದೇಶದಲ್ಲಿ ಈ ಹಿಂದೆ ಕಾಂಗ್ರೆಸ್ ಸರಕಾರ ಇದ್ದಾಗ ಯಾವುದಾದರೂ ಸಾಂಕ್ರಾಮಿಕ ರೋಗಗಳು ಬಂದರೆ, ಜನರು ಸಾಲು ಸಾಲು ಗಟ್ಟಿ ಸಾಯುತ್ತಿದ್ದರು. ಸಾಮೂಹಿಕವಾಗಿ ಅಂತ್ಯಕ್ರಿಯೆ ಮಾಡಲಾಗುತ್ತಿತ್ತು. ಆದರೆ, ಕೊರೋನಾ ಬಂದ ಸಂದರ್ಭದಲ್ಲಿ ಪ್ರಧಾನಿ ಮೋದಿ ದಿಟ್ಟ ನಿರ್ಧಾರದಿಂದ ಸ್ವತಃ ನಾವೇ ವ್ಯಾಕ್ಸಿನ್ ತಯಾರಿಸಿದ್ದಲ್ಲದೇ, ದೇಶದಲ್ಲಿ 200 ಕೋಟಿ ವ್ಯಾಕ್ಸಿನ್ ಹಾಕಲಾಯಿತು ಎಂದು ಯತ್ನಾಳ್ ಹೇಳಿದರು.












Click it and Unblock the Notifications