ಡಾಕ್ಟರ್ ಆಗಬೇಕಿತ್ತು, ಒಳ್ಳೆ ಮಾರ್ಕ್ಸ್ ಬರದಿದ್ದಕ್ಕೆ ಇಂದು ನಾನು ಮುಖ್ಯಮಂತ್ರಿ ಆದೆ: ಸಿದ್ದರಾಮಯ್ಯ
ಮೈಸೂರು,ಡಿಸೆಂಬರ್ 22: ನಾನು ಡಾಕ್ಟರ್ ಆಗಬೇಕು ಆಸೆ ಇತ್ತು. ಅದರೆ ಮಾರ್ಕ್ಸ ಬರಲಿಲ್ಲ.ಆಗ ಮಾರ್ಕ್ಸ್ ಬಾರದೆ ಡಾಕ್ಟರ್ ಸೀಟ್ ಸಿಗದೆ ಇರೋದೆ ಒಳ್ಳೆಯಾದಯಿತು. ನಾನು ಡಾಕ್ಟರ್ ಆಗದೆ ಇರೋದೆ ಒಳ್ಳೆಯಾದಯಿತು, ಸಿಎಂ ಆದೆ ಈಗ ಅಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಕಿದ್ವಾಯಿ ಆಸ್ಪತ್ರೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಅವರು ಭಾಷಣ ಮಾಡಿದ ಅವರು, ತಮ್ಮ ಹಳೇ ದಿನಗಳನ್ನ ಮೆಲಕುಹಾಕಿದ್ರು. ನಾನು ಓದುತ್ತಿದ್ದ ಕಾಲೇಜಿನ ಬಳಿಯೆ ಮೈಸೂರು ಮೆಡಿಕಲ್ ಕಾಲೇಜ್ ಇತ್ತು. ಕಾಲೇಜ್ ಬಳಿ ಒಂದು ಕ್ಯಾಟೀನ್ ಇತ್ತು. ಅಲ್ಲಿ ದೋಸೆ ತಿನ್ನಲು ಹೋಗುತ್ತಿದ್ದೆ .ಆಗ 19 ಪೈಸೆ ಗೆ ಒಂದು ಮಸಾಲೆ ದೋಸೆ. ಸೆಟ್ ದೋಸೆ 12 ಪೈಸೆ. 12 ಪೈಸೆ ಗೆ 4 ನಾಲ್ಕು ದೋಸೆ. ನಾನು ಕಾಫಿ ಕುಡಿಯೋದು ಬಿಟ್ಟು ಎರಡು ಸೆಟ್ ದೋಸೆ ತಿನ್ನುತ್ತಿದ್ದೆ ಅಂತ ಹೇಳಿದರು.

ಕ್ಯಾನ್ಸರ್ ರೋಗಿಗಳಿಗೆ ಕಡಿಮೆ ದರದಲ್ಲಿ ಟ್ರೀಟ್ಮೆಂಟ್ ಸಿಗಬೇಕು. ಪ್ರತಿ ಜಿಲ್ಲೆಯಲ್ಲಿ ಉತ್ತಮ ಆಸ್ಪತ್ರೆ ನಿರ್ಮಾಣ ಆಗಬೇಕು. ಕೈಗೆಟುಕುವ ದರದಲ್ಲಿ ಕ್ಯಾನ್ಸರ್ ಚಿಕಿತ್ಸೆ ಸಿಗಬೇಕು ಅಂತ ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಬೆಂಗಳೂರಿನ ನಂತರ ವೇಗವಾಗಿ ಬೆಳೆಯುತ್ತಿರುವ ನಗರ ಮೈಸೂರು. ಹೀಗಾಗಿ ಅಗತ್ಯ ಎಲ್ಲಾ ರೀತಿಯ ವೈದ್ಯಕೀಯ ಸವಲತ್ತುಗಳನ್ನೂ ಮೈಸೂರಿಗೆ ಒದಗಿಸಬೇಕಾಗಿದ್ದು ಇದಕ್ಕೆ ನಾನು ಬದ್ದವಾಗಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು. ಬಡವರಿಗೆ, ದುಡಿಯುವ ವರ್ಗಗಳಿಗೆ ಚಿಕಿತ್ಸೆ ಭಾರ ಆಗಬಾರದು. ಉಚಿತ ಅಥವಾ ಕಡಿಮೆ ಖರ್ಚಿನಲ್ಲಿ ಇವರಿಗೆ ಆರೋಗ್ಯ, ಚಿಕಿತ್ಸೆ ಸಿಗಬೇಕು ಎನ್ನುವುದು ನಮ್ಮ ಸರ್ಕಾರದ ಕಾಳಜಿ. ನಮ್ಮ ಸರ್ಕಾರ ಇರುವಾಗ ಮೈಸೂರು ನಗರಕ್ಕೆ ಅಗತ್ಯ ಇರುವ ಎಲ್ಲಾ ನೆರವನ್ನೂ ಒದಗಿಸುತ್ತೇವೆ. ಪಾರಂಪರಿಕ ನಗರದ ಹೆಮ್ಮೆಯನ್ನು ನಾವು ಉಳಿಸುತ್ತೇವೆ. ಮೈಸೂರು ಜಿಲ್ಲೆಯ ಜನರ ಋಣ ತೀರಿಸಲು ನಾವು ಬದ್ಧರಾಗಿದ್ದೇವೆ ಎಂದರು.

ಜಯದೇವ ಆಸ್ಪತ್ರೆಯಲ್ಲಿ ಒಳ್ಳೆಯ ಚಿಕಿತ್ಸೆ ಸಿಗುತ್ತದೆ ಅಂತ ಕೇಳಿದ್ದೇನೆ. ನಾನು ಯಾವತ್ತೂ ಅಲ್ಲಿಗೆ ಹೋಗಿಲ್ಲ. ಜಯದೇವ ಆಸ್ಪತ್ರೆಯಲ್ಲಿ ಸಿಗುವ ಒಳ್ಳೆಯ ಚಿಕಿತ್ಸೆ ವ್ಯವಸ್ಥೆ ಬೇರೆ ಸರ್ಕಾರಿ ಆಸ್ಪತ್ರೆಯಲ್ಲಿ ಯಾಕೆ ಸಾಧ್ಯವಿಲ್ಲ ? ನಾನು ಸಿಎಂ ಆಗುವವರೆಗೂ ಮೈಸೂರಲ್ಲಿ ಒಂದು ಜಿಲ್ಲಾಸ್ಪತ್ರೆ ಇರಲಿಲ್ಲ. ಹಿಂದಿನ ಸರ್ಕಾರ ಕಿದ್ವಾಯಿ ಮಾಡಿರಬಹುದು. ಆದರೆ ದುಡ್ಡು ಕೊಡಲಿಲ್ಲ. ನಾನು ದುಡ್ಡು ಕೊಟ್ಟಿದ್ದೇನೆ ಎಂದರು.
ಮೈಸೂರಿನಲ್ಲಿ ಜಯದೇವ ಆಸ್ಪತ್ರೆ ಆರಂಭಿಸಿದ್ದು ನಾನು. ಹಾರ್ಟ್, ಲೀವರ್, ಕಿಡ್ನಿ ಎಲ್ಲವೂ ಟಾರ್ನ್ಸ್ಫರ್ ಮಾಡುತ್ತಾರೆ. ಉಳಿದಿರೋದು ಬ್ರೈನ್ ಮಾತ್ರ ಎಂದು ನಕ್ಕ ಸಿಎಂ ಸಿದ್ದರಾಮಯ್ಯ, ವೈದ್ಯರಿಗೆ ಮನುಷ್ಯತ್ವ ಇರಬೇಕು. ಮನುಷ್ಯತ್ವ ಇಟ್ಟು ಕೊಂಡು ಕೆಲಸ ಮಾಡಬೇಕು. ನಮ್ಮ ಸರ್ಕಾರ ಹೋದ ಮೇಲೆ ಮೈಸೂರು ನಗರಕ್ಕೆ ಒಂದೇ ಒಂದು ಕೆಲಸ ಆಗಲಿಲ್ಲ. ಈಗ ಮತ್ತೆ ನಮ್ಮ ಸರಕಾರ ಬಂದಿದೆ. ಮೈಸೂರಿಗೆ ಎಲ್ಲಾ ಅಭಿವೃದ್ಧಿ ಕೆಲಸ ಮಾಡುತ್ತೇವೆ. ಮೈಸೂರು ನಗರ ಇನ್ನೂ ಕೆಟ್ಟಿಲ್ಲ. ಇಲ್ಲಿ ನಿವೃತ್ತರು ಉಳಿದು ಕೊಳ್ಳಲು ಇಷ್ಟಪಡುತ್ತಾರೆ. ಈ ಊರಿನಲ್ಲಿ ಎಲ್ಲಾ ವ್ಯವಸ್ಥೆ ಮಾಡುವುದು ನಮ್ಮ ಕರ್ತವ್ಯ ಎಂದರು.
ಪತ್ರಕರ್ತರ ಭವನಕ್ಕೂ ಶಂಕುಸ್ಥಾಪನೆ
ಮೈಸೂರು ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಜಿಲ್ಲಾ ಪತ್ರಕರ್ತರ ನೂತನ ಭವನಕ್ಕೆ ಸಿಎಂ ಸಿದ್ದರಾಮಯ್ಯ ಗುದ್ದಲಿ ಪೂಜೆ ನೆರವೇರಿಸಿದ್ರು. ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಮಾತ್ನಾಡಿ ನಾನೇ ಪತ್ರಕರ್ತರ ಭವನಕ್ಕೆ ಭೂಮಿ ಪೂಜೆ ಮಾಡಿದ್ದೇನೆ. ನಾನೇ ಕಟ್ಟಡ ಉದ್ಘಾಟನೆ ಕೂಡ ಮಾಡಬೇಕೆಂದು ಹೇಳಿದ್ದೀರಾ.. ಆದಷ್ಟು ನೀವು ಎಷ್ಟು ಬೇಗ ಕಟ್ಟುತ್ತೀರಾ ಅಷ್ಟು ಒಳ್ಳೆಯದು. ನಾನು ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟುಕೊಂಡಿರುವವನು. ನಮ್ಮ ಪ್ರಜಾಪ್ರಭುತ್ವದಲ್ಲಿ ಪತ್ರಿಕಾ ರಂಗ ನಾಲ್ಕನೇ ರಂಗ. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಜೊತೆ ಪತ್ರಿಕಾರಂಗ ಇರಬೇಕು. ಜನ ಸಮಾನ್ಯರಿಗೆ ಪತ್ರಕರ್ತರು ಸತ್ಯವನ್ನ ತಿಳಿಸಬೇಕು. ಆಗ ಮಾತ್ರ ಸಮಾಜದಲ್ಲಿ ಬದಲಾವಣೆ ತರಲಿಕ್ಕೆ ಸಾಧ್ಯ.
ಸಮಾಜಕ್ಕೆ ತಪ್ಪು ಸಂದೇಶ ಹೋದರೆ ಯಾರಿಗೂ ಪ್ರಯೋಜನವಾಗಲ್ಲ. ವಸ್ತು ನಿಷ್ಠವಾದ ಸುದ್ದಿ, ವಿಚಾರ, ವಿಷಯ ಜನರಿಗೆ ತಿಳಿಬೇಕು. ಅನೇಕ ಜನರು ಸಂವಿಧಾನ ಹಾಗೂ ಅದರ ಆಶಯ ವಿರುದ್ಧ ಮಾತ್ನಾಡ್ತಾರೆ. ಇತ್ತೀಚಿನ ದಿನಗಳಲ್ಲಿ ವೃತ್ತಿಪರತೆ ಹೋಗಿ ವ್ಯಾಪಾರಿಕರಣ ಆಗುತ್ತಿದೆ. ಒಂದು ಕಾಲದಲ್ಲಿ ಪತ್ರಿಕೆಗಳನ್ನ ಓದಲು ಕಾಯುತ್ತ ಕುಳಿತಿರುತ್ತಿದ್ದೆವು. ಈಗ ಆ ಆಸಕ್ತಿಗಳು ಇಲ್ಲ, ಜನರಿಗೆ ಪತ್ರಿಕೆ ಓದುವ ಆಸಕ್ತಿ ಬರಬೇಕು. ಕೆಲ ಪತ್ರಿಕೆಗಳು ಅನಗತ್ಯ ವಿಚಾರಗಳನ್ನ ವೈಭವಗೊಳಿಸುತ್ತವೆ. ಪತ್ರಿಕೆಗಳು, ಮಾಧ್ಯಮಗಳು ತಮ್ಮ ಜವಾಬ್ದಾರಿ ತೋರಬೇಕು ಎಂದು ಸಿಎಂ ಸಿದ್ದರಾಮಯ್ಯ ಕಿವಿಮಾತು ಹೇಳಿದ್ರು.












Click it and Unblock the Notifications