ಶಿವಮೊಗ್ಗ ಲೋಕಸಭೆ ಟಿಕೆಟ್‌ಗೆ ಬೇಳೂರು ಗೋಪಾಲಕೃಷ್ಣ ಡಿಮ್ಯಾಂಡ್!
ಬೆಂಗಳೂರು,ಅಕ್ಟೋಬರ್ 28: 2024 ರ ಲೋಕಸಭೆ ಚುನಾವಣೆಯಲ್ಲಿ ಶಿವಮೊಗ್ಗದಿಂದ ನಾನೇ ಪ್ರಬಲ ಅಭ್ಯರ್ಥಿಯಾಗಬಲ್ಲೆ ಎಂದು ಕಾಂಗ್ರೆಸ್ ಶಾಸಕ ಬೇಳೂರು ಗೋಪಾಲಕೃಷ್ಣ ಡಿಮ್ಯಾಂಡ್ ಇಟ್ಟಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಶಿವಮೊಗ್ಗ ಲೋಕಸಭೆ ಕ್ಷೇತ್ರಕ್ಕೆ ನಾನು ಅಭ್ಯರ್ಥಿ ಆಗಲು ನಿರ್ಧರಿಸಿದ್ದೇನೆ. ಶಿವಮೊಗ್ಗ ಕ್ಷೇತ್ರಕ್ಕೆ ನಾನು ಕಾಂಗ್ರೆಸ್ ನಿಂದ ಪ್ರಬಲ ಅಭ್ಯರ್ಥಿ ಆಗಬಲ್ಲೆ. ನನಗೆ ಟಿಕೆಟ್ ಕೊಟ್ಟರೆ ನಾನೇ ಗೆಲ್ಲುತ್ತೇನೆ. ಇದರ ಬಗ್ಗೆ ನಮ್ಮ ನಾಯಕರ ಜತೆ ಇನ್ನಷ್ಟೇ ಚರ್ಚಿಸಬೇಕಿದೆ ಎಂದು ಹೇಳಿದರು.

ಬಿಜೆಪಿಯವರ ದುರಾಡಳಿತ ಕೊನೆ ಮಾಡಲು ನಾನೇ ಸಮರ್ಥ ಅಭ್ಯರ್ಥಿ. ಕುಮಾರ್ ಬಂಗಾರಪ್ಪ ಅವರನ್ನು ಕರೆತಂದು ಟಿಕೆಟ್ ಕೊಡುವ ಚರ್ಚೆ ಪಕ್ಷದಲ್ಲಿ ನಡೆದಿಲ್ಲ. ಬೇರೆ ಯಾರಿಗೆ ಟಿಕೆಟ್ ಕೊಟ್ಟರೆ ಸಮಸ್ಯೆ ಇಲ್ಲ, ಆದರೆ, ನಾನು ಪ್ರಬಲ, ಸಮರ್ಥ ಅಭ್ಯರ್ಥಿ ಆಗಬಲ್ಲೆ ಎಂದು ಹೇಳಿದರು.
ಗೃಹ ಸಚಿವ ಡಾ. ಜಿ ಪರಮೇಶ್ವರ್ ನಿವಾಸದಲ್ಲಿ ಡಿನ್ನರ್ ಮೀಟಿಂಗ್ ವಿಚಾರವಾಗಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಊಟಕ್ಕೆ ಕರೆದರೆ ಅದು ಬಣ ರಾಜಕಾರಣ ಆಗಲ್ಲ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಇಬ್ಬರು ನಾಯಕತ್ವದಲ್ಲಿ ಸರ್ಕಾರ ನಡೀತಿದೆ.
ಬಣ ರಾಜಕಾರಣ ಇಲ್ಲ, ಈ ಕುಮಾರಸ್ವಾಮಿ ಮಧ್ಯದಲ್ಲಿ ಸ್ವಲ್ಪ ಕೈ ಆಡಿಸ್ತಿದ್ದಾರೆ ಕುಮಾರಸ್ವಾಮಿ ಈಗ ಸ್ವಲ್ಪ ಚಿಗುರಿಕೊಂಡಿದ್ದಾರೆ, ಮೋದಿಯವರನ್ನು ಭೇಟಿ ಮಾಡಿ ಬಂದ ನಂತರ ಕುಮಾರಸ್ವಾಮಿ ಚಿಗುರಿಕೊಂಡಿದ್ದಾರೆ ಎಂದು ತಿಳಿಸಿದರು.
ಕುಮಾರಸ್ವಾಮಿ ಅವರನ್ನು ಸಿಎಂ ಮಾಡಿದ್ದು ಕಾಂಗ್ರೆಸ್. ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರಿಂದ ಕುಮಾರಸ್ವಾಮಿ ಮುಖ್ಯಮಂತ್ರಿ ಆದ್ರು. ಡಿ ಕೆ ಶಿವಕುಮಾರ್ ಏನು ಅನ್ಯಾಯ ಮಾಡಿದ್ದಾರೆ ಅವರಿಗೆ? ಎಂದು ಪ್ರಶ್ನಿಸಿದ ಅವರು, ಅವರ ತಾಲ್ಲೂಕನ್ನ ಬೆಂಗಳೂರಿಗೆ ಸೇರಿಸಿದರೆ ಹೆಚ್ಡಿಕೆಗೆ ಏನು ಸಮಸ್ಯೆ? ಅವರ ತಾಲ್ಲೂಕನ್ನ ಡಿ ಕೆ ಶಿವಕುಮಾರ್ ಅವರು ಅಭಿವೃದ್ಧಿ ಮಾಡ್ತಿದ್ದಾರೆ. ಕನಕಪುರ ಜಿಲ್ಲೆ ಮಾಡಲಿ ಬಿಡಿ, ಯಾಕೆ ಹೆಚ್ ಡಿ ಕುಮಾರಸ್ವಾಮಿ ರಾಮನಗರದ ಮೇಲೆ ಆಸಕ್ತಿ ಇಲ್ವಾ ಎಂದು ಪ್ರಶ್ನಿಸಿದ್ದಾರೆ.
ಶಿವಮೊಗ್ಗದಲ್ಲಿ ಯಡಿಯೂರಪ್ಪ ಯಾಕೆ ಏರ್‌ಪೋರ್ಟ್ ಮಾಡಿದ್ರು? ಶಿವಮೊಗ್ಗದಲ್ಲಿ ಯಡಿಯೂರಪ್ಪ ಜಮೀನು ಇದೆ ಅದಕ್ಕಾಗಿ ಏರ್‌ಪೋರ್ಟ್ ಮಾಡಿದರು, ಕನಕಪುರದಲ್ಲೂ ಡಿ ಕೆ ಶಿವಕುಮಾರ್ ಸೇರಿ ಹಲವರ ಜಮೀನು ಇದೆ, ಜನರ ಜಮೀನೂ ಇದೆ. ಕನಕಪುರ ಅಭಿವೃದ್ಧಿ ಮಾಡಿದರೆ ಇವರಿಗೇನು ಸಮಸ್ಯೆ? ಎಂದು ಕಾಂಗ್ರೆಸ್ ಶಾಸಕ ಬೇಳೂರು ಗೋಪಾಲಕೃಷ್ಣ ಪ್ರಶ್ನಿಸಿದರು.












Click it and Unblock the Notifications