ಡಿಸಿಎಂ ಹುದ್ದೆಗಾಗಿ ಹೈಕಮಾಂಡ್ ಬಳಿ ಹೋಗಿಲ್ಲ
ಬೆಂಗಳೂರು. ಸೆ. 6: ನಾನು ಹೈಕಮಾಂಡ್ ಬಳಿ ತೆರಳಿ ಯಾವುದೆ ಹುದ್ದಗೆ ಬೇಡಿಕೆ ಇಟ್ಟಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಾ. ಜಿ.ಪರಮೇಶ್ವರ ಸ್ಪಷ್ಟಪಡಿಸಿದ್ದಾರೆ.
ಡಿಸಿಎಂ ಹುದ್ದೆ ಸೃಷ್ಟಿ ಮಾಡಿ ಎಂದು ನಾನು ಯಾರ ದುಂಬಾಲು ಬಿದ್ದಿಲ್ಲ. ಸಚಿವ ಸಂಪುಟ ವಿಸ್ತರಣೆ ಮತ್ತು ಪುನಾರಚನೆ ಮಾಡಲು ಮುಖ್ಯಮಂತ್ರಿಗೆ ಪರಮಾಧಿಕಾರವಿದೆ. ಅದನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ ಎಂದು ಹೇಳಿದರು.

ಸುದ್ದಿಗಾರೊಂದಿಗೆ ಮಾತನಾಡಿದ ಅವರು, ನಾನು ಯಾವುದೆ ಸ್ಥಾನ ಮಾಣ ನೀಡಲು ಬೇಡಿಕೆಯಿಟ್ಟಿಲ್ಲ. ಹೈಕಮಾಂಡ್ ಹೇಳಿದ ಆದೇಶದಂತೆ ನಡೆದುಕೊಳ್ಳುತ್ತಿದ್ದೇನೆ. ರಾಷ್ಟ್ರೀಯ ನಾಯಕರು ಯಾವ ಹುದ್ದೆ ನಿರ್ವಹಿಸಿ ಎಂದು ಹೇಳುತ್ತಾರೋ ಅದನ್ನೆ ನಿರ್ವಹಿಸುತ್ತೇನೆ. ಇದರಲ್ಲಿ ಯಾವ ಒತ್ತಡ ತಂತ್ರ ಅಡಗಿಲ್ಲ ಎಂದು ತಿಳಿಸಿದ್ದಾರೆ.(ಹುಟ್ಟುಹಬ್ಬದಂದು ಮನಬಿಚ್ಚಿ ಮಾತನಾಡಿದ ಪರಮೇಶ್ವರ್)
ಎಲ್ಲ ಗೊಂದಲಗಳಿಗೆ ಪರಿಸ್ಥಿತಿ ಬಂದಾಗ ಉತ್ತರ ಹೇಳುತ್ತೇನೆ. ಸೆಪ್ಟಂಬರ್ 30ರೊಳಗೆ ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕ ಮಾಡುವ ಕುರಿತು ಚಿಂತಿಸಲಾಗುತ್ತಿದೆ ಎಂದು ತಿಳಿಸಿದರು.
ಮಂತ್ರಿ ಮಂಡಳ ಪುನಾರಚನೆ ಮತ್ತು ವಿಸ್ತರಣೆ ಕುರಿತಂತೆ ರಾಜ್ಯದಲ್ಲಿ ಅನೇಕ ಉಹಾಪೋಹಗಳು ಎದುರಾಗಿದ್ದವು. ಸಚಿವ ಸ್ಥಾನ ಆಕಾಂಕ್ಷಿಗಳು ದೆಹಲಿ ಪ್ರವಾಸವನ್ನು ಮಾಡಿದ್ದರು. ಹೈ ಕಮಾಂಡ್ ಮೇಲೆ ಒತ್ತಡ ತರುವ ಪ್ರಯತ್ನವೂ ನಡೆದಿತ್ತು.
ಆದರೆ ಸ್ವತಃ ಕೆಪಿಸಿಸಿ ಅಧ್ಯಕ್ಷರೇ ಸದ್ಯಕ್ಕೆ ಮಂತ್ರಿ ಮಂಡಳ ಪುನಾರಚನೆ ಇಲ್ಲ ಎಂಬ ಸಂದೇಶವನ್ನು ನೀಡಿದ್ದಾರೆ. ಉಪಚುನಾವಣೆ ಮುಗಿದ ನಂತರ ಸಂಪುಟಕ್ಕೆ ಹೊಸಬರ ಸೇರ್ಪಡೆಯಾಗುತ್ತದೆ ಎಂಬ ಸುದ್ದಿ ಸುಳ್ಳಾಗಿದೆ.












Click it and Unblock the Notifications