ಕಾವೇರಿಗಾಗಿ ಸೇತುವೆ, ಚಪ್ಪಲಿ, ಅಳಿಲು ಆಗುವುದಕ್ಕೂ ಸಿದ್ಧ: ಕಮಲ್‌ಹಾಸನ್
ಬೆಂಗಳೂರು, ಜೂನ್ 04: ಕಾವೇರಿ ಸಮಸ್ಯೆಯನ್ನು ಸೌಹಾರ್ದ ರೀತಿಯಲ್ಲಿ ಬಗೆಹರಿಸಲು ಎರಡು ರಾಜ್ಯಗಳ ನಡುವೆ ಸೇತುವೆ ಆಗಲು, ಅಳಿಲಾಗಲು ರೈತರ ಚಪ್ಪಲಿಯಾಗಲೂ ನಾನು ಸಿದ್ಧ ಎಂದು ನಟ ಕಮಲ್ ಹಾಸನ್ ಹೇಳಿದ್ದಾರೆ.
ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಭೇಟಿ ಆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಹುಟ್ಟುವ ಮೊದಲೇ ಕಾವೇರಿ ಇತ್ತು, ಆದರೆ ನಾವೀಗ ಕಾವೇರಿಗಾಗಿ ಬಡಿದಾಡಿಕೊಳ್ಳುತ್ತಿದ್ದೇವೆ ಎಂದು ಬೇಸರದಿಂದ ನುಡಿದರು.
ನಾನಿಲ್ಲಿಗೆ ರಾಜಕಾರಣಿಯಾಗಿ ಬಂದಿಲ್ಲ ಜನಗಳ ಪ್ರತಿನಿಧಿಯಾಗಿ ಬಂದಿದ್ದೇನೆ, ಎರಡೂ ರಾಜ್ಯಗಳ ನಡುವೆ ಸೋದರತ್ವದ ಸ್ಥಾಪನೆಗೆ ಎಲ್ಲರೂ ದುಡಿಯಬೇಕಿದೆ ಎಂದರು.

ವಿವಾದಕ್ಕೀಡಾಗಿರುವ ರಜನೀಕಾಂತ್ ಅಭಿನಯದ 'ಕಾಲಾ' ಚಿತ್ರದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, 'ನಾವು 'ಕಾಲಾ' ಚಿತ್ರದ ಬಗ್ಗೆ ಒಂದು ಮಾತು ಚರ್ಚೆ ಮಾಡಲಿಲ್ಲ, ಅದರ ಬಗ್ಗೆ ನಿರ್ಣಯ ತೆಗೆದುಕೊಳ್ಳಲು ಮಂಡಳಿಗಳಿವೆ ಅದೇ ನಿರ್ಣಯ ತೆಗೆದುಕೊಳ್ಳುತ್ತದೆ, ಸಿನಿಮಾಕ್ಕಿಂತಲೂ ಗಂಭೀರವಾದ ಹಲವು ವಿಚಾರಗಳನ್ನು ಚರ್ಚೆ ಮಾಡಿದೆವು' ಎಂದರು.

ತಮ್ಮ ಪಕ್ಷದ ಬಗ್ಗೆಯೂ ಮಾತನಾಡಿದ ಅವರು, ನಮ್ಮ ಪಕ್ಷ ಇನ್ನೂ ಹೊಸದು, ನಾನಿನ್ನೂ ರಾಜಕೀಯದ ಮಗು, ಆದರೆ ಜನೋದ್ಧಾರವಷ್ಟೆ ನಮ್ಮ ಗುರಿ' ಎಂದರು.












Click it and Unblock the Notifications