ಆನಂದ್ ಸಿಂಗ್ ಲೂಟಿ ಮಾಡಿದ್ದರೆ ಪ್ಯಾಕಿಂಗ್ ಮಾಡಿ ಪರಮಾತ್ಮ ನನ್ನನ್ನು ಕಳಿಸಿ ಬಿಡುತ್ತಿದ್ದ: ಆನಂದ್ ಸಿಂಗ್ ಹೇಳಿದ್ದೇನು.?
ನನ್ನಿಂದ ಒಳ್ಳೆದಾಗಿದ್ದರೆ ಆಶೀರ್ವಾದ ಮಾಡಿ. ಇಲ್ಲದಿದ್ದರೆ ದ್ವೇಷ ಮಾಡಿ. ನನ್ನ ಯೋಗ್ಯತೆಗೆ ತಕ್ಕಂತೆ ನಾನು ಕೆಲಸ ಮಾಡಿದ್ದೇನೆ ಎಂದು ಆನಂದ್ ಸಿಂಗ್ ಹೇಳಿದ್ದಾರೆ.
ವಿಜಯನಗರ,ಫೆಬ್ರವರಿ11: ಆನಂದ್ ಸಿಂಗ್ ಲೂಟಿ ಮಾಡಿದ್ದರೆ ಪ್ಯಾಕಿಂಗ್ ಮಾಡಿ ಪರಮಾತ್ಮ ನನ್ನನ್ನು ಕಳಿಸಿಬಿಡುತ್ತಿದ್ದ ಎಂದು ಸಚಿವ ಆನಂದ್ ಸಿಂಗ್ ಹೇಳಿದ್ದಾರೆ.
ಈ ಕುರಿತು ಶನಿವಾರ ವಿಜಯನಗರದಲ್ಲಿ ಮಾತನಾಡಿದ ಅವರು, ಟೀಕೆಗಳಿಗೆ ನಾನು ಉತ್ತರಿಸಲ್ಲ. ನನ್ನ ಕೆಲಸಗಳೇ ಉತ್ತರ. ಆನಂದ್ ಸಿಂಗ್ ಬಿಜೆಪಿ ಅನ್ನಬೇಡಿ ವಿಜಯನಗರ ಕ್ಷೇತ್ರದ ರಕ್ಷಕನಾಗಿ ಇರುತ್ತೇನೆ. ಅಧಿಕಾರದ ಶಕ್ತಿ ಕೊಡುವದು ನಿಮ್ಮ ಕೈಲಿದೆ. ಬಡವರ ಹೊಟ್ಟೆ ಮೇಲೆ ಹೊಡೆಯುವ ಕೆಲಸ ನಾನು ಮಾಡಲ್ಲ ಎಂದು ಹೇಳಿದರು.
ಚುನಾವಣೆಯಲ್ಲಿ ಬಹಳಷ್ಟು ಅಭ್ಯರ್ಥಿಗಳಿರುತ್ತಾರೆ. ನಾನು ಯಾರ ಬಗ್ಗೆಯೂ ಟೀಕೆ ಮಾಡಲ್ಲ. ಆನಂದ್ ಸಿಂಗ್ ಶಾಸಕನಾದ ನಂತರ ಅಭಿವೃದ್ಧಿ ಆಗಿದೆಯೋ ಇಲ್ಲವೋ ನೀವೆ ಆಲೋಚಿಸಿ. ಒಳ್ಳೆದಾಗಿದ್ದರೆ ಆಶೀರ್ವಾದ ಮಾಡಿ. ಇಲ್ಲದಿದ್ದರೆ ದ್ವೇಷ ಮಾಡಿ. ನನ್ನ ಯೋಗ್ಯತೆಗೆ ತಕ್ಕಂತೆ ನಾನು ಕೆಲಸ ಮಾಡಿದ್ದೇನೆ. ಸಾರ್ವಜನಿಕ ಜೀವನದಲ್ಲಿ ನೋವು ಪಟ್ಟಿದ್ದೇನೆ. ಈ ಹಾದಿ ಸುಗಮವಾಗಿಲ್ಲ. ಇದರಲ್ಲಿ ನನ್ನ ಖಾಸಗಿ ಜೀವನ ಕಳೆದುಕೊಂಡಿದ್ದೇನೆ. ನನ್ನ ಮನೆ ಕಾರ್ಯಕ್ರಮಗಳನ್ನು ತಪ್ಪಿಸಿಕೊಂಡಿದ್ದೇನೆ ಎಂದರು.

ಮುಂದಿನ ಚುನಾವಣೆಯಲ್ಲಿ ಅವಕಾಶ ಕೊಟ್ಟರೆ ವಿಜಯನಗರ ಕ್ಷೇತ್ರಕ್ಕೆ ಒಳ್ಳೆಯ ಭವಿಷ್ಯವಿದೆ. ಈ ಕೂಸನ್ನು ಬೆಳೆಸಬೇಕು. ಮಲತಾಯಿಗೆ ಕೊಟ್ಟರೆ ಹೇಗೆ. ಹಾಗಾಗಿ ಇನ್ನೂ ಕೆಲ ದಿನ ಆಡಳಿತ ಮಾಡುವ ಅವಶ್ಯಕತೆ ಇದೆ. ಯಾರೋ ಬಂದು ಬಿಟ್ಟರೆ ನಷ್ಟ ಅನುಭವಿಸುವವರು ನಾವೆಲ್ಲರು. ನನಗೆ ಅಧಿಕಾರದ ಆಸೆ ಇಲ್ಲ. ಎಲ್ಲವೂ ಮುಗಿದಿದೆ. ನನಗೆ ಅಧಿಕಾರದಲ್ಲಿ ಮೆರಿಬೇಕು ಅಂತಿಲ್ಲ. ಎಲ್ಲ ಬೆಳ್ಳಗಾಗಿದೆ. ಬಣ್ಣ ಹಚ್ಚು ಅಂತಾರೆ. ಅದು ರಿಯಾಕ್ಷನ್ ಆಗುತ್ತೆಂತ ಹಚ್ಚಿಲ್ಲ ಎಂದು ಹೇಳಿದರು.
ಯಾರದೋ ಕಾಲು ಸರಿ ಇದ್ದಂಗಿಲ್ಲ. ಯಾರದೋ ಗೊತ್ತಿಲ್ಲ. ನಾನಂತೂ ಮೊನ್ನೆನೇ ತಾಯತ್ ಕಟ್ಟಿಸಿಕೊಂಡಿರುವೆ. ಯಾಕಂದ್ರೆ ಬಹಳಷ್ಟು ಜನ ಮಾಟ ಮಾಡಿಸುತ್ತಿದ್ದಾರೆ ಅಂತ ಹೇಳುತ್ತಿದ್ದಾರೆ. ದೇವರು ಇದ್ದಾನೆಂದರೆ, ದೆವ್ವನೂ ಇರುತ್ತೆ. ಅದಕ್ಕೆ ನಮ್ಮ ತಾಯಿಗೆ ಚುನಾವಣೆ ಹತ್ತಿರ ಬರುತ್ತಿರುವುದರಿಂದ ಯರ‍್ಯಾರೋ, ಏನೇನೋ ಮಾಟ ಮಾಡಿಸುತ್ತಾರಂತೆ ಅಂತ ಹೇಳಿದೆ. ಅದಕ್ಕೆ ಮಸೀದಿ, ದರ್ಗಾ, ಗುಡಿಗೆ ಹೋಗಿ ತಾಯತ್ ಕಟ್ಟಿಸಿಕೊಂಡು ಬನ್ನಿ ಅಂದಿದ್ದಾರೆ. ಹಾಗಾಗಿ ನೀವೂ ಎಲ್ಲರೂ ತಾಯತ್ ಕಟ್ಟಿಸ್ಕೊಂಡು ಬನ್ನಿ ಎಂದು ಮೌಢ್ಯತೆ ಬಗ್ಗೆ ಪಾಠ ಮಾಡಿದರು.












Click it and Unblock the Notifications