ಅನುದಾನದ ವಿಚಾರ ಪರಮೇಶ್ವರ್ ಗೆ ಸಿದ್ದು ತಿರುಗೇಟು!
ಬೆಂಗಳೂರು, ಮಾ.4 : ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ನಡುವಿನ ಆರೋಪ ಪ್ರತ್ಯಾರೋಪಗಳು ಮುಂದುವರೆದಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಭಿವೃದ್ಧಿಗೆ ಅನುದಾನ ಹಂಚಿಕೆ ಮಾಡುವಲ್ಲಿ ಯಾವುದೇ ತಾರತಮ್ಯ ಮಾಡಿಲ್ಲ ಎಂದು ಸಿದ್ದರಾಮಯ್ಯ ಪರಮೇಶ್ವರ್ ಅವರಿಗೆ ತಿರುಗೇಟು ನೀಡಿದ್ದಾರೆ.
ಮಂಗಳವಾರ ಬೆಂಗಳೂರಿನ ಗೃಹ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ ಸಿಎಂ ಸಿದ್ದರಾಮಯ್ಯ, ಅನುದಾನ ಬಿಡುಗಡೆ ವಿಚಾರದಲ್ಲಿ ಯಾವ ವರ್ಗಕ್ಕೂ ನಾನು ಅನ್ಯಾಯ ಮಾಡಿಲ್ಲ ಎಂದರು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಜನಸಂಖ್ಯೆಗೆ ಅನುಗುಣವಾಗಿ ಅನುದಾನ ಮೀಸಲಿಡಬೇಕು ಎಂಬ ಕಾನೂನನ್ನು ಈ ವರ್ಷ ರಚಿಸಲಾಗಿದೆ ಎಂದು ತಿಳಿಸಿದರು. [ಸಿದ್ದರಾಮಯ್ಯ ಬಜೆಟ್ ಮುಖ್ಯಾಂಶಗಳು]

2013-14ರಲ್ಲಿ 8,600 ಕೋಟಿ ಅನುದಾನ ಲಭ್ಯವಿತ್ತು. ಹೊಸ ಕಾನೂನಿನ ಅನ್ವಯ ಕಳೆದ ವರ್ಷಕ್ಕಿಂತ ಶೇ.80ರಷ್ಟು ಅನುದಾನ ಎರಡು ಪಂಗಡಗಳಿಗೆ ಲಭ್ಯವಾಗುತ್ತದೆ. ಪರಿಶಿಷ್ಟ ಜಾತಿಗೆ 17.95 ರಷ್ಟು ಹಾಗೂ ಪರಿಶಿಷ್ಟ ಪಂಗಡಕ್ಕೆ 7.5ರಷ್ಟು ಅನುದಾನ ಮೀಸಲಿಡಲಾಗಿದ್ದು, ಒಟ್ಟು ಬಜೆಟ್ ನ ಶೇ.24ರಷ್ಟು ಹಣವನ್ನು ಈ ಸಮುದಾಯಗಳ ಅಭಿವೃದ್ಧಿಗೆ ಒದಗಿಸಲಾಗುವುದು ಎಂದರು. [ಅಹಿಂದ ವರ್ಗದವರನ್ನು ಮರೆಯದ ಸಿದ್ದು]
ಅನುದಾನ ಹಂಚಿಕೆ ವೇಳೆ ತಾವು ಯಾವುದೇ ವರ್ಗಕ್ಕೂ ಅನ್ಯಾಯ ಮಾಡಿಲ್ಲ ಎಂದು ಹೇಳುವ ಮೂಲಕ ಸಿಎಂ, ಪರಿಶಿಷ್ಟ ಜಾತಿ, ಪಂಗಡಗಳ ಅಭಿವೃದ್ಧಿಗೆ ಅಗತ್ಯ ನೆರವು ನೀಡಿಲ್ಲ ಎಂಬ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಆರೋಪಕ್ಕೆ ಸಿದ್ದರಾಮಯ್ಯ ತಿರುಗೇಟು ನೀಡಿದರು. ಛಲವಾದಿ ಸಮಾವೇಶದಲ್ಲಿ ಪರಮೇಶ್ವರ್ ಸಿದ್ದರಾಮಯ್ಯ ವಿರುದ್ಧ ಆರೋಪ ಮಾಡಿದ್ದರು.
ಪರಮೇಶ್ವರ್ ಹೇಳಿದ್ದೇನು : ಛಲವಾದಿ ಸಮಾವೇಶದಲ್ಲಿ ಮಾತನಾಡಿದ್ದ ಡಾ.ಜಿ.ಪರಮೇಶ್ವರ್ ಹಿಂದುಳಿದ ಸಮುದಾಯಗಳು ಒಗ್ಗೂಡಬೇಕಾಗಿದ್ದು, ಇಲ್ಲಿ ಅಧಿಕಾರಕ್ಕಾಗಿ ಹೋರಾಟ ಮಾಡಬೇಕಿದೆ. ದಲಿತರು ಉಪ ಮುಖ್ಯಮಂತ್ರಿಯಾಗಲು ಬಿಡುತ್ತಿಲ್ಲ. ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಭಿವೃದ್ಧಿಗೆ ಸರಿಯಾದ ಅನುದಾನ ನೀಡುತ್ತಿಲ್ಲ ಎಂದು ತಮ್ಮದೇ ಪಕ್ಷದ ಮುಖ್ಯಮಂತ್ರಿ ವಿರುದ್ಧ ಪರಮೇಶ್ವರ್ ವಾಗ್ದಾಳಿ ನಡೆಸಿದ್ದರು.












Click it and Unblock the Notifications