ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಸಿದ್ಧ: ಮಾಜಿ ಸಚಿವ
ಹಾವೇರಿ, ಜನವರಿ 31: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋಲು ಕಂಡ ಮಾಜಿ ಸಚಿವರು ಇದೀಗ ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಫುಲ್ ಅಲರ್ಟ್ ಆಗಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಸೋತಿರುವ ಬಿ ಸಿ ಪಾಟೀಲ್ ಹಾವೇರಿಯಿಂದ ಸ್ಪರ್ಧಿಸಲು ತೆರಮರೆಯಲ್ಲಿ ಕಸರತ್ತನ್ನ ಶುರು ಮಾಡಿದ್ದಾರೆ.ಆದರೆ, ಹಾವೇರಿ ಕ್ಷೇತ್ರದಿಂದ ಪುತ್ರನನ್ನ ಕಣಕ್ಕಿಳಿಸುವ ಕುರಿತು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಹಾವೇರಿಯಲ್ಲಿ ಸಂಚಾರ ಶುರು ಮಾಡಿದ್ದಾರೆ.
ಹಾವೇರಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ನಡೆಸಲು ಹಲವು ನಾಯಕರು ಟಿಕೆಟ್ ಗಾಗಿ ಲಾಬಿ ಶುರು ಮಾಡಿದ್ದು, ಇದೀಗ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಮಾಜಿ ಸಚಿವ ಬಿ ಸಿ ಪಾಟೀಲ್ ಒಲವು ತೋರಿದ್ದಾರೆ. ಲೋಕಸಭೆ ಅಭ್ಯರ್ಥಿ ಯಾರಾಗಬೇಕು ಎನ್ನುವು ದನ್ನು ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಪಕ್ಷ ಏನಾದರು ನೀವು ಸ್ಪರ್ಧಿಸಿ ಎಂದು ಹೇಳಿದರೆ ನಾನು ಸ್ಪರ್ಧೆ ಮಾಡಲು ಸಿದ್ಧ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ ಹೇಳಿದ್ದಾರೆ.

ಈಗಾಗಲೇ ಬಿಜೆಪಿ ಪಾಳಯದಲ್ಲಿ ಟಿಕೆಟ್ ಗಾಗಿ ಹಲವು ಕ್ಷೇತ್ರದಲ್ಲಿ ಬಾರೀ ಲಾಬಿ ಶುರುವಾಗಿದ್ದು, ಈ ಬಗ್ಗೆಯೂ ಬಿ ಸಿ ಪಾಟೀಲ್ ಅವರು ಮಾತನಾಡಿದ್ದಾರೆ. ಲೋಕಸಭೆ ಅಭ್ಯರ್ಥಿ ಕುರಿತ ಎಲ್ಲಾ ಊಹಾಪೋಹ ಗಳಿಗೆ ತೆರೆ ಎಳೆದು ಹೈಕಮಾಂಡ್ ಸೂಕ್ತ ಅಭ್ಯರ್ಥಿ ಯಾರು ಎನ್ನುವುದನ್ನು ತೀರ್ಮಾನ ಮಾಡುತ್ತದೆ. ಅವರು ತೀರ್ಮಾನಿಸಿದ ವ್ಯಕ್ತಿಯ ಪರವಾಗಿ ನಾವು ಕೆಲಸ ಮಾಡುತ್ತೇವೆ. ಒಗ್ಗಟ್ಟಾಗಿ ಹಾವೇರಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುತ್ತೇವೆ. ಈಗಾಗಲೇ ಹೈಕಮಾಂಡ್ ಸರ್ವೇ ರಿಪೋರ್ಟ್ ನೋಡಿ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ರಾಜ್ಯಾಧ್ಯಕ್ಷರಾದ ಬಿ ವೈ ವಿಜಯೇಂದ್ರ ಅವರು ಸಹ ಹೇಳಿದ್ದಾರೆ ಎಂದರು.

ಇನ್ನೂ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಬಿಜೆಪಿಗೆ ಮರಳಿ ಸೇರ್ಪಡೆ ವಿಚಾರಕ್ಕೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಸಿದ ಬಿ ಸಿ ಪಾಟೀಲ್, ಜಗದೀಶ್ ಶೆಟ್ಟರ್ ಮರಳಿ ಮನೆಗೆ ಬಂದಿದ್ದಾರೆ. ರಾಹುಕಾಲ, ಗುಳಿಗಕಾಲ ಎಂದಿರುತ್ತದಲ್ಲ, ಹಾಗೆ ಕಾಲ ಕೆಟ್ಟಿದ್ದರಿಂದ ಅದೇನೋ ಆಯ್ತು. ಅವರಿಗೂ ಕೂಡಾ ಅನ್ಯಾಯ ವಾಗಿತ್ತು. ಇವತ್ತು ಆ ಅನ್ಯಾಯವನ್ನು ಸರಿ ಮಾಡುತ್ತೇವೆ. ಜಗದೀಶ್ ಶೆಟ್ಟರ್ ಅವರು ಹಿರಿಯರು ಮರಳಿ ನಮ್ಮ ಪಕ್ಷಕ್ಕೆ ಬಂದಿದ್ದು ಒಂದು ದೊಡ್ಡ ಶಕ್ತಿ ಬಂದಂತಾಗಿದೆ ಎಂದು ಹೇಳಿದರು.












Click it and Unblock the Notifications