ಡಿಕೆ ಶಿವಕುಮಾರ್‌ಗೆ ನಾನು ಸ್ವಾಗತ ಕೋರಲ್ಲ, ವೇದಿಕೆ ಮೇಲೆ ಸಿಟ್ಟಾದ ಸಿಎಂ ಸಿದ್ದರಾಮಯ್ಯ
ಮೈಸೂರು, ಜುಲೈ 20: ಮೈಸೂರಿನಲ್ಲಿ ನಡೆದ ಸರ್ಕಾರಿ ಸಾಧನಾ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಫುಲ್ ಗರಂ ಆಗಿದ್ದರು. ಸಾಧನಾ ಸಮಾವೇಶ ಕುರಿತು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಮಾತನಾಡಿ ತೆರಳಿದ್ದರು. ಕಾರ್ಯಕ್ರಮದಿಂದ ಅರ್ಧಕ್ಕೆ ಎದ್ದು ಹೋದ ಡಿಕೆ ಶಿವಕುಮಾರ್ ವಿರುದ್ಧ ಬಹಿರಂಗವಾಗಿ ಸಿಟ್ಟು ಹೊರಹಾಕಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ವೇದಿಕೆ ಮೇಲೆ ಮಾತಾಡುವಾಗ, ಅಲ್ಲಿದ್ದ ಲಾಯರ್ ಒಬ್ಬರು ಡಿಕೆ ಶಿವಕುಮಾರ್ ಅವರ ಹೆಸರು ಹೇಳಿ ಸ್ವಾಗತಿಸಿ ಎಂದು ಸೂಚಿಸುತ್ತಾರೆ. ಇದಕ್ಕೆ ಸಿಟ್ಟಾದ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಅವರು ವೇದಿಕೆ ಮೇಲೆ ಇಲ್ಲ, ಅವರು ಹೊರಟು ಹೋಗಿದ್ದಾರೆ. ಯಾವಾಗಲೂ ವೇದಿಕೆ ಮೇಲೆ ಇರುವ ಗಣ್ಯರ ಹೆಸರು ಹೇಳಬೇಕೋ ಹೊರತು, ಹೊರಟು ಹೋದವರ ಹೆಸರು ಹೇಳಲು ಆಗಲ್ಲ, ವೆಲ್ ಕಮ್ ಮಾಡೋದು ಇರುವವರಿಗೆ, ಮನೇಲಿ ಕುಳಿತಿರುವವರಿಗೆ ಸ್ವಾಗತ ಮಾಡಲು ಆಗಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಿಟ್ಟು ಹೊರಹಾಕಿದ್ದಾರೆ.

ಇನ್ನೂ ಕಾರ್ಯಕ್ರಮದಲ್ಲಿ ಮಾತು ಮುಂದುವರೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಪ್ರತಿಪಕ್ಷಗಳ ಸುಳ್ಳುಗಳಿಗೆ ನಮ್ಮ ಅಭಿವೃದ್ಧಿ ಕಾರ್ಯಗಳೇ ಉತ್ತರ. ರಾಜ್ಯದ ಜನರ ಮನೆ ಬಾಗಿಲಿಗೆ ಸರ್ಕಾರ ತಲುಪಿಸಿದ್ದೇವೆ. ಈ ಬಗ್ಗೆ ಬಹಿರಂಗ ಚರ್ಚೆಗೆ ಬನ್ನಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸವಾಲು ಹಾಕಿದರು. ರಾಜ್ಯದ ಜನರಿಗೆ ಸರಣಿ ಸುಳ್ಳುಗಳ ಮೂಲಕ ಹಾದಿ ತಪ್ಪಿಸುತ್ತಿರುವ ಪ್ರತಿಪಕ್ಷಗಳು ಒಂದೇ ವೇದಿಕೆಗೆ ಬರಲಿ. ನಮ್ಮ ಸರ್ಕಾರದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಬಹಿರಂಗ ಚರ್ಚೆ ನಡೆಸೋಣ. ನಾನೂ ಬರುತ್ತೇನೆ ಎಂದು ಸವಾಲು ಹಾಕಿದರು.
ಅಭಿವೃದ್ಧಿಗೆ ಸರ್ಕಾರದ ಬಳಿ ಹಣ ಇಲ್ಲ ಎಂದು ಅಪಪ್ರಚಾರ ಮಾಡುತ್ತಿರುವ ಪ್ರತಿಪಕ್ಷದವರಿಗೆ ಇವತ್ತಿನ ಅಭಿವೃದ್ಧಿ ಕಾರ್ಯಗಳೇ ಉತ್ತರ. ಅವರಿಗೆ ಈ ಮಟ್ಟಿನ ಮತ್ಸರ ಇರಬಾರದು. ನಮ್ಮ ಅಭಿವೃದ್ಧಿ ಕಾರ್ಯಗಳನ್ನು ಸಹಿಸದೆ ಅತೀ ಮತ್ಸರ ಪಡುತ್ತಿದ್ದಾರೆ ಎಂದು ಟೀಕಿಸಿದರು. ಪ್ರತಿಪಕ್ಷಗಳು ರಾಜ್ಯದ ಜನರ ಪರವಾಗಿ ಇಲ್ಲ. ಪ್ರತಿ ವರ್ಷ ನಾವು ರಾಜ್ಯದಿಂದ ಕೇಂದ್ರಕ್ಕೆ ಕೊಡುವ ತೆರಿಗೆಯಲ್ಲಿ ರಾಜ್ಯಕ್ಕೆ ಬರುತ್ತಿರುವುದು ಅತ್ಯಲ್ಪ. ರಾಜ್ಯಕ್ಕೆ ಆದ ಅನ್ಯಾಯವನ್ನು ಸರಿಪಡಿಸಿ ಎಂದು ಮೋದಿಯವರಿಗೆ ಕೇಳುವ ಧೈರ್ಯ ಕೇಂದ್ರ ಸಚಿವ ಕುಮಾರಸ್ವಾಮಿ, ಪ್ರಹ್ಲಾದ್ ಜೋಶಿ ಸೇರಿ ಸಂಸದರಾದ ಬೊಮ್ಮಾಯಿ ಸೇರಿ ಯಾರಿಗೂ ಇಲ್ಲ. ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಸೊಲ್ಲೆತ್ತದ ಪ್ರತಿಪಕ್ಷಗಳು ರಾಜ್ಯದ ಜನಕ್ಕೆ ದ್ರೋಹ ಎಸಗಿದ್ದಾರೆ ಎಂದರು.
ನಾವು ಐದು ಗ್ಯಾರಂಟಿಗಳಲ್ಲದೆ ಅಭಿವೃದ್ಧಿ ಕಾರ್ಯಗಳಿಗೆ ಲಕ್ಷ ಕೋಟಿಯಷ್ಟು ಹಣ ಕೊಟ್ಟಿದ್ದೇವೆ. ನಾವು ಜಾರಿ ಮಾಡಿರುವ ಅಭಿವೃದ್ಧಿ ಕಾರ್ಯಗಳು ಕೇವಲ ಕಾಂಗ್ರೆಸ್ ನವರಿಗೆ ಕೊಟ್ಟಿದ್ದಲ್ಲ. ಪ್ರತಿಪಕ್ಷಗಳ ಬೆಂಬಲಿಗರು, ಮತದಾರರಿಗೂ ಪ್ರತೀ ದಿನ, ಪ್ರತೀ ತಿಂಗಳೂ ಸರ್ಕಾರದ ನೆರವು ದೊರೆಯುತ್ತಿದೆ. ಮೊನ್ನೆಯಷ್ಟೆ ಶಕ್ತಿ ಯೋಜನೆಯಡಿಯಲ್ಲಿ ಪ್ರಯಾಣಿಸಿದ 500 ನೇ ಕೋಟಿಯ ಮಹಿಳೆಗೆ ನಾನೇ ಉಚಿತ ಟಿಕೆಟ್ ಕೊಟ್ಟಿದ್ದೇನೆ. ಇದು ನಮ್ಮ ಸರ್ಕಾರದ ಬದ್ಧತೆ ಎಂದರು.
ಜವಾಹರಲಾಲ್ ನೆಹರೂ ಅವಧಿಯಿಂದ ಇಂದಿರಾಗಾಂಧಿ, ರಾಜೀವ್ ಗಾಂಧಿ, ಮನಮೋಹನ್ ಸಿಂಗ್ ಅವಧಿಯವರೆಗೂ ಸಾಮಾಜಿಕ ನ್ಯಾಯದ ಕಾರ್ಯಕ್ರಮಗಳನ್ನು ರೂಪಿಸಿ ಜಾರಿ ಮಾಡುತ್ತಿರುವುದು ಕಾಂಗ್ರೆಸ್ ಸರ್ಕಾರ ಎನ್ನುವುದನ್ನು ಇಡೀ ದೇಶ ಮರೆಯಲು ಸಾಧ್ಯವಿಲ್ಲ ಎಂದರು. ಆಹಾರ ಭದ್ರತಾ ಕಾಯ್ದೆ, ಕಡ್ಡಾಯ ಶಿಕ್ಷಣ ಕಾಯ್ದೆ, ನರೇಗಾ ಎಲ್ಲವೂ ಆಗಿದ್ದು ಕಾಂಗ್ರೆಸ್ ಅವಧಿಯಲ್ಲಿ. ಬಿಜೆಪಿ ಅವಧಿಯಲ್ಲಿ ಇವರು ಏನು ಮಾಡಿದ್ದಾರೆ ತೋರಿಸಲಿ ಎಂದು ಸವಾಲು ಹಾಕಿದರು.
ಮನುವಾದಿಗಳು ಸಾಮಾಜಿಕ ನ್ಯಾಯ ಮತ್ತು ಹಿಂದುಳಿದ ಸಮುದಾಯಗಳ ಅಭಿವೃದ್ಧಿಯ ವಿರೋಧಿಗಳು, ಸಂವಿಧಾನದ ವಿರೋಧಿಗಳು. ಆದ್ದರಿಂದ ಸಾಮಾಜಿಕ ನ್ಯಾಯದ ಪರವಾಗಿರುವ ನಮ್ಮನ್ನು ಟೀಕಿಸುತ್ತಿದ್ದಾರೆ. ಸಂವಿಧಾನವನ್ನು ಬದಲಾಯಿಸಲು ಪ್ರತಿಪಕ್ಷ ಷಡ್ಯಂತ್ರ ನಡೆಸುತ್ತಿದೆ. ದೇಶದ ಜನ ಮತ್ತು ಕಾಂಗ್ರೆಸ್ ಪಕ್ಷ ಮನುವಾದಿಗಳ ಷಡ್ಯಂತ್ರವನ್ನು ಸೋಲಿಸುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.












Click it and Unblock the Notifications