ಸ್ವಾಮೀಜಿಗಳಿಗೆ ಅವಮಾನ ಮಾಡಿಲ್ಲ, ನನ್ನ ಹೇಳಿಕೆ ತಿರುಚಲಾಗಿದೆ: ಸಿದ್ದರಾಮಯ್ಯ
ಬೆಂಗಳೂರು, ಮಾ.25: ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಹಿಜಾಬ್ ಸಮರ್ಥಿಸುವ ಭರದಲ್ಲಿ ಸ್ವಾಮೀಜಿಗಳ ಕುರಿತು ನೀಡಿದ್ದ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಂತೆ ಸ್ಪಷ್ಟೀಕರಣ ನೀಡಿದ್ದಾರೆ.
Recommended Video
'ನಮ್ಮ ತಾಯಂದಿರು ಸೇರಿದಂತೆ ಸಾಮಾನ್ಯವಾಗಿ ಎಲ್ಲರೂ ತಲೆಯ ಮೇಲೆ ಬಟ್ಟೆ ಹಾಕಿಕೊಳ್ಳುತ್ತಾರೆ ಎಂದು ಹೇಳಿದ್ದೇನೆಯೇ ಹೊರತು ಸ್ವಾಮೀಜಿಗಳಿಗೆ ಅವಮಾನ ಮಾಡಿಲ್ಲ, ಅಗೌರವ ತೋರಿಲ್ಲ. ಅನಗತ್ಯವಾಗಿ ನನ್ನ ಹೇಳಿಕೆಯನ್ನು ತಿರುಚಲಾಗಿದೆ' ಎಂದು ಸಿದ್ದರಾಮಯ್ಯ ಶುಕ್ರವಾರ ರಾತ್ರಿ ಟ್ವೀಟ್ ಮಾಡಿದ್ದಾರೆ.
'ಸರ್ವ ಜಾತಿಯ ಸ್ವಾಮೀಜಿಗಳ ಬಗ್ಗೆ ನನಗೆ ಗೌರವವಿದೆ. ದೀರ್ಘ ಕಾಲದಿಂದ ಅವರ ಜತೆಗೆ ನನಗೆ ಹಾರ್ದಿಕ ಸಂಬಂಧವಿದೆ. ಯಾವ ಸ್ವಾಮೀಜಿಗಳ ಬಗ್ಗೆಯೂ, ಯಾವಾಗಲೂ ನಾನು ಅಗೌರವದಿಂದ ನಡೆದುಕೊಂಡಿಲ್ಲ ಎಂದು ರಾಜ್ಯದ ಜನತೆಗೂ ಗೊತ್ತಿದೆ'.

ರಾಜಕೀಯ ವಿರೋಧಿಗಳು ದುರುದ್ದೇಶದಿಂದ ನನ್ನ ಹೇಳಿಕೆಯನ್ನು ತಿರುಚಿ ಅಪಪ್ರಚಾರ ಮಾಡುತ್ತಿದ್ದಾರೆ. ಇದಕ್ಕೆ ಕೆಲವು ಮಾಧ್ಯಮಗಳೂ ಸಾಥ್ ನೀಡಿರುವುದು ವಿಷಾದನೀಯ ಬೆಳೆವಣಿಗೆ ಎಂದು ಸಿದ್ದರಾಮಯ್ಯ ಮತ್ತೊಂದು ಟ್ವೀಟ್‌ನಲ್ಲಿ ಹೇಳಿದ್ದಾರೆ.
ನನ್ನ ಹೇಳಿಕೆಯನ್ನು ತಿರುಚಿರುವುದು ರಾಜ್ಯದ ಪ್ರಮುಖ ಮಠಗಳ ಹಿರಿಯ ಸ್ವಾಮಿಗಳಿಗೆ ಅರ್ಥವಾಗಿರುವ ಕಾರಣಕ್ಕಾಗಿಯೇ ಅವರು ಮೌನವಾಗಿದ್ದಾರೆ. ಅವರೆಲ್ಲರಿಗೂ ನನ್ನ ಕೃತಜ್ಞತಾಪೂರ್ವಕ ನಮನಗಳು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಮುಸ್ಲಿಂ ಹೆಣ್ಣುಮಕ್ಕಳು ಯೂನಿಫಾರಂ ಹಾಕಿಕೊಳ್ಳಲು ಸಿದ್ದರಿದ್ದಾರೆ, ಅದರೆ ಜೊತೆಗೆ ಒಂದು ದುಪ್ಪಟ್ಟಾ ಹಾಕಿಕೊಳ್ಳುತ್ತೇವೆ ಎಂದು ಹೇಳುತ್ತಿದ್ದಾರೆ. ಇದರಲ್ಲಿ ತಪ್ಪೇನಿದೆ? ಅವರು ತಲೆಯ ಮೇಲಾದಾರೂ ಹಾಕಿಕೊಳ್ಳಲಿ, ಹೆಗಲಮೇಲಾದರೂ ಹಾಕಿಕೊಳ್ಳಲಿ. ನಾನು ಹೆಗಲ ಮೇಲೆ ಶಾಲನ್ನು ಹಾಕಿಕೊಳ್ಳುತ್ತೇನೆ, ಜೈನ ಹೆಣ್ಣುಮಕ್ಕಳು ತಲೆಯ ಮೇಲೆ ಸೆರಗನ್ನು ಹಾಕಿಕೊಳ್ಳುವುದಿಲ್ಲವೇ, ಸ್ವಾಮೀಜಿಗಳು ತಲೆಗೆ ಕೇಸರಿ ಶಾಲನ್ನು ಸುತ್ತಿಕೊಳ್ಳುವುದಿಲ್ಲವೇ ಎಂದು ಹಿಜಾಬ್ ಹಾಕಿಕೊಳ್ಳುವುದನ್ನು ಸಿದ್ದರಾಮಯ್ಯನವರು ಸಮರ್ಥಿಸಿಕೊಂಡಿದ್ದು ಭಾರೀ ವಿವಾದಕ್ಕೆ ಕಾರಣವಾಗಿತ್ತು.












Click it and Unblock the Notifications