Laxman Savadi vs Ramesh Jarkiholi: ಪಕ್ಷದಿಂದ ಪೀಡೆ ತೊಲಗಿತು, ಖುಷಿಯಾಗಿದೆ!: ರಮೇಶ್ ಜಾರಕಿಹೊಳಿ
ಬೆಳಗಾವಿ, ಏಪ್ರಿಲ್15: ರಾಜ್ಯ ರಾಜಕಾರಣದಲ್ಲಿ ಬೆಳಗಾವಿ ಜಿಲ್ಲೆಯ ರಾಜಕೀಯ ಒಂದಲ್ಲ ಒಂದು ವಿಚಾರಕ್ಕೆ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಇಷ್ಟು ದಿನಗಳ ಕಾಲ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಮಾಜಿ ಸಚಿವ ರಮೇಶ್ ಜಾರಕಿಹೊಳಿ ನಡುವೆ ರಾಜಕೀಯ ಜಟಾಪಟಿ ಜೋರಾಗಿತ್ತು.
ಇದೀಗ ಅಥಣಿ ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದ ಲಕ್ಷ್ಮಣ್ ಸವದಿ ಹಾಗೂ ಮಹೇಶ್ ಕುಮಟಳ್ಳಿ ನಡುವೆ ಜಟಾಪಟಿ ಏರ್ಪಟ್ಟಿದ್ದು, ಅಥಣಿಯಲ್ಲಿ ಸ್ನೇಹಿತನಿಗೆ ಟಿಕೆಟ್ ಕೊಡಿಸುವ ವಿಚಾರದಲ್ಲಿ ರಮೇಶ್ ಜಾರಕಿಹೊಳಿ ಯಶಸ್ವಿಯಾಗಿದ್ದು, ಬಿಜೆಪಿ ಹೈಕಮಾಂಡ್ ಮಹೇಶ್ ಕುಮಟಳ್ಳಿ ಅವರಿಗೆ ಟಿಕೆಟ್ ನೀಡಿದೆ. ಇತ್ತ ಅಥಣಿ ಕ್ಷೇತ್ರದಿಂದ ಟಿಕೆಟ್ ಕೈ ತಪ್ಪಿದ ಹಿನ್ನಲೆ ಬಿಜೆಪಿಗೆ ಗುಡ್ ಬೈ ಹೇಳಿರುವ ಲಕ್ಷ್ಮಣ್ ಸವದಿ ಶುಕ್ರವಾರ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಜೊತೆ ಚರ್ಚೆ ನಡೆಸಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.

ಲಕ್ಷ್ಮಣ್ ಸವದಿ ಬಿಜೆಪಿ ಪಕ್ಷ ತೊರೆದ ವಿಚಾರವಾಗಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಾಗ್ದಾಳಿ
ಲಕ್ಷ್ಮಣ್ ಸವದಿ ಅವರನ್ನ ಪೀಡೆ ಎಂದು ಹೇಳಿದ್ದಾರೆ. ಬಿದ್ದವರಿಗೆ ಪಕ್ಷ ಉಪಮುಖ್ಯಮಂತ್ರಿ ಮಾಡಿತ್ತು. ಆದರೆ ಅವನು ಪಕ್ಷ ನಿಷ್ಠೆ ತೋರಲಿಲ್ಲ, ಇವತ್ತು ನಮ್ಮನ್ನು ಬಿಟ್ಟು ಹೋಗಿದ್ದಾನೆ ನಮಗೆ ಛಲೋ ಆಯ್ತು, ಪೀಡೆ ಬಿಟ್ಟು ಹೋದಂಗಾಗಿದೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಲಕ್ಷ್ಮಣ್ ಸವದಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಸೋತು ಮನೆಯಲ್ಲಿ ಕುಳಿತಿದ್ದ ಲಕ್ಷ್ಮಣ ಸವದಿಯವರಿಗೆ ನಾವು 17 ಜನ ಕಾಂಗ್ರೆಸ್ ತೊರೆದು ಬಿಜೆಪಿಗೆ ಬಂದಿದ್ದರಿಂದಲೇ ಉಪ ಮುಖ್ಯಮಂತ್ರಿ ಪದವಿ ಸಿಕ್ಕಿತ್ತು. ಅದು ನಮ್ಮ ಬಲಿದಾನದ ಫಲವಾಗಿತ್ತು ಎಂದು ಗೋಕಾಕ ಶಾಸಕ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.

ಬೆಳಗಾವಿ ಜಿಲ್ಲೆಯ ಅಥಣಿಯ ಶಿವಣಗಿ ಸಾಂಸ್ಕ್ರತಿಕ ಭವನದಲ್ಲಿ ಹಮ್ಮಿಕೊಂಡ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ರಮೇಶ್ ಜಾರಕಿಹೊಳಿ, ಲಕ್ಷಣ್ ಸವದಿ ತಿಳಿದುಕೊಂಡಿದ್ದ ನಾನು ಮತ್ತೆ ಕಾಂಗ್ರೆಸ್ ಹೋಗುತ್ತಾನೆಂದು ಅದು ತಲೆಯಲ್ಲಿ ಇತ್ತು, ನನಗೆ ಮಂತ್ರಿ ಸ್ಥಾನ ಇಲ್ಲದಿದ್ದರೂ ನಾನು ಪಕ್ಷದಲ್ಲೇ ಉಳಿದೆ, ಆದರೆ ಇವತ್ತು ನನಗೆ ತುಂಬಾ ಸಂತೋಷವಾಗಿದೆ, ಉದ್ದ ಅಂಗಿ ಹಾಕಿರುವನು ಹೊರಗೆ ಹೋಗಿದ್ದಾನೆ ಈ ಸಲ ನೀವು ಮಹೇಶ ಕುಮಟಳ್ಳಿ ಅವರನ್ನು ಗೆಲ್ಲಿಸಬೇಕು ಎಂದು ಕಾರ್ಯಕರ್ತರಿಗೆ ಮನವಿ ಮಾಡಿದರು.
ಒಂದೂವರೆ ವರ್ಷ ಉಪ ಮುಖ್ಯಮಂತ್ರಿ ಆಗಿದ್ದರೂ ಅಥಣಿ ಅಭಿವೃದ್ಧಿಗೆ ಏನೂ ಮಾಡ್ಲಿಲ್ಲ ಅವನು, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಇವನನ್ನು ವಿಶೇಷ ವಿಮಾನದಲ್ಲಿ ಕರೆದುಕೊಂಡ ಹೋಗಿದ್ದಾನೆ. ಬಹಳ ಕುತಂತ್ರಿ ಇದ್ದಾನೆ ಡಿಕೆ ಶಿವಕುಮಾರ್, ಇನ್ನು ಮುಂದೆ ನಾನು ಅಥಣಿಯಲ್ಲಿ ಹಾಗೂ ಬೆಳಗಾವಿ ಗ್ರಾಮೀಣ ಭಾಗದಲ್ಲಿ ಇರುತ್ತೇನೆ, ಇಷ್ಟು ದಿನ ಸವದಿ ನಮ್ಮ ಪಕ್ಷದಲ್ಲಿ ಇದ್ದರು ಎಂದು ನಾನು ಸುಮ್ಮನೆ ಇದ್ದೇ. ಇನ್ನು ಮೇಲೆ ನಾನು ಇಲ್ಲೇ ಇರುತ್ತೇನೆ ತಾಲೂಕಿನ ಕೆಲವು ಸಹಕಾರಿ ಸೊಸೈಟಿಯಲ್ಲಿ ಅಕ್ರಮವಾಗಿದೆ. ನಾವು ಅಧಿಕಾರಕ್ಕೆ ಬಂದರೆ ಆ ಅಕ್ರಮಗಳನ್ನು ಪರಿಶೀಲನೆ ಮಾಡಲಾಗುವುದು ಎಂದು ಕಿಡಿಕಾರಿದ್ದಾರೆ.












Click it and Unblock the Notifications